ಬಾಂಗ್ಲಾದೇಶಿಗಳೆಂದು ಲಾಕಪ್ ಗೆ ತಳ್ಳಲ್ಪಟ್ಟಿದ್ದ ಮೂವರು ಭಾರತೀಯರು: ಸತ್ಯ ಬಹಿರಂಗ

Update: 2020-02-24 15:16 GMT

ಪುಣೆ,ಫೆ.24: ಮಹಾರಾಷ್ಟ್ರ ನವನಿರ್ಮಾಣ ಸೇನಾ(ಎಂಎನ್‌ಎಸ್)ದ ಕಾರ್ಯಕರ್ತರ ದಾಳಿಯ ಬಳಿಕ ಅಕ್ರಮ ಬಾಂಗ್ಲಾದೇಶಿ ವಲಸಿಗರು ಎಂಬ ಶಂಕೆಯಿಂದ ಪುಣೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದ ಮೂವರು ಪಶ್ಚಿಮ ಬಂಗಾಳದ ಭಾರತೀಯ ಪ್ರಜೆಗಳು ಎನ್ನುವುದು ವಿಚಾರಣೆಯಿಂದ ದೃಢಪಟ್ಟ ಬಳಿಕ ಅವರನ್ನು ಬಿಡುಗಡೆಗೊಳಿಸ ಲಾಗಿದೆ.

ಎಂಎನ್‌ಎಸ್ ಕಾರ್ಯಕರ್ತರು ಶನಿವಾರ ಪಕ್ಷದ ನಾಯಕ ರಾಹುಲ್ ಗಾವ್ಲಿ ನೇತೃತ್ವದಲ್ಲಿ ಶಂಕಿತ ಬಾಂಗ್ಲಾದೇಶಿ ವಲಸಿಗರ ವಿರುದ್ಧ ದಾಳಿ ಕಾರ್ಯಾಚರಣೆ ನಡೆಸಿದ್ದು, ಪೊಲೀಸರೂ ಅವರ ಜೊತೆಯಲ್ಲಿದ್ದರು.

 ಇಲ್ಲಿಯ ಧನಕಾವಾಡಿಯ ಬಾಲಾಜಿನಗರ ಪ್ರದೇಶದ ಮನೆಗಳನ್ನು ಪ್ರವೇಶಿಸಿದ್ದ ಎಂಎನ್‌ಎಸ್ ಕಾರ್ಯಕರ್ತರು ಅವರು ಭಾರತೀಯರು ಎನ್ನುವುದಕ್ಕೆ ದಾಖಲೆಗಳನ್ನು ತೋರಿಸುವಂತೆ ಆಗ್ರಹಿಸಿದ್ದರು. ದಿಲ್ಶಾದ್ ಮನ್ಸೂರಿ, ರೋಷನ್ ಶೇಖ್ ಮತ್ತು ಬಪ್ಪಿ ಸರ್ದಾರ್ ಎಂಬವರನ್ನು ಹಿಡಿದುಕೊಂಡ ಕಾರ್ಯಕರ್ತರು ಬಡಾವಣೆಯ ಇತರ ನಿವಾಸಿಗಳೆದುರು ಅವರನ್ನು ಪ್ರಶ್ನಿಸಿದ್ದರು. ಆ ಮೂವರೂ ತಮ್ಮ ದಾಖಲೆಗಳನ್ನು ತೋರಿಸಿದ್ದರಾದರೂ ಪೊಲೀಸರು ಅವರನ್ನು ಸಹಕಾರ ನಗರ ಠಾಣೆಗೆ ಕರೆದೊಯ್ದು ಸಂಜೆಯವರೆಗೂ ಅಲ್ಲಿ ಇಟ್ಟುಕೊಂಡಿದ್ದರು. ಈ ಪೈಕಿ ಓರ್ವ ಎಂಎನ್‌ಎಸ್ ಕಾರ್ಯಕರ್ತರ ವಿರುದ್ಧ ಕಿರುಕುಳ,ಅಕ್ರಮ ಪ್ರವೇಶ ಮತ್ತು ಖಾಸಗಿತನದ ಉಲ್ಲಂಘನೆ ಆರೋಪದಲ್ಲಿ ಪೊಲೀಸರಿಗೆ ದೂರು ಸಲ್ಲಿಸಿದ್ದಾನಾದರೂ ಈವರೆಗೆ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ.

ಈ ವಿಷಯದಲ್ಲಿ ಪೊಲೀಸರು ವಿಚಾರಣೆ ನಡೆಸಿ ಸೂಕ್ರ ಕ್ರಮ ಕೈಗೊಳ್ಳಲಿದ್ದಾರೆ. ವಶದಲ್ಲಿದ್ದ ಮೂವರು ಭಾರತೀಯರಾಗಿದ್ದು,ಅವರನ್ನು ಬಿಡುಗಡೆಗೊಳಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದರು.

  ಮಹಾರಾಷ್ಟ್ರದಲ್ಲಿ ಅಕ್ರಮವಾಗಿ ವಾಸವಾಗಿರುವ ಪಾಕಿಸ್ತಾನಿಗಳು ಮತ್ತು ಬಾಂಗ್ಲಾದೇಶಿ ಗಳನ್ನು ತೊಲಗಿಸುವಂತೆ ಪಕ್ಷದ ಮುಖ್ಯಸ್ಥ ರಾಜ್ ಠಾಕ್ರೆ ಆದೇಶಿಸಿದ್ದಾರೆ. ಅದರಂತೆ ಹಲವಾರು ಅಕ್ರಮ ಬಾಂಗ್ಲಾದೇಶಿ ವಲಸಿಗರು ವಾಸವಿರುವ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಮೂವರನ್ನು ಪೊಲೀಸರಿಗೆ ಒಪ್ಪಿಸಲಾಗಿತ್ತು. ಅವರು ದಾಖಲೆಗಳನ್ನು ತೋರಿಸಿದ್ದಾರಾದರೂ ಅವು ನಕಲಿ ಎನ್ನುವುದು ಸ್ಪಷ್ಟವಾಗಿದೆ ಎಂದು ಎಂಎನ್‌ಎಸ್ ನಾಯಕ ಸಚಿನ್ ಕಾಟ್ಕರ್ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News