ಬಿಹಾರದಲ್ಲಿ ಎನ್‌ಆರ್‌ಸಿ ಜಾರಿಯಿಲ್ಲ: ನಿತೀಶ್ ಸ್ಪಷ್ಟನೆ

Update: 2020-02-24 15:38 GMT

ಪಾಟ್ನ, ಫೆ.24: ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ಪ್ರಕ್ರಿಯೆ ರಾಜ್ಯದಲ್ಲಿ ನಡೆಯುವುದಿಲ್ಲ ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಪುನರುಚ್ಚರಿಸಿದ್ದಾರೆ.

ನಿತೀಶ್ ಅವರ ಪಕ್ಷ ಜೆಡಿಯು ಪೌರತ್ವ ಕಾಯ್ದೆಯನ್ನು ಸಂಸತ್ತಿನಲ್ಲಿ ಬೆಂಬಲಿಸಿತ್ತು. ಆದರೆ ಎನ್‌ಆರ್‌ಸಿಗೆ ತಮ್ಮ ಪಕ್ಷ ವಿರುದ್ಧವಾಗಿದೆ ಎಂದು ನಿತೀಶ್ ಕಳೆದ ಡಿಸೆಂಬರ್‌ನಲ್ಲಿ ಹೇಳಿದ್ದರು. ಎನ್‌ಆರ್‌ಸಿ ಪ್ರಕ್ರಿಯೆ ಬಿಹಾರದಲ್ಲಿ ನಡೆಯುವುದಿಲ್ಲ. ಆದರೆ 2010ರಲ್ಲಿ ನಡೆದಿರುವಂತೆ, ಎನ್‌ಪಿಆರ್(ರಾಷ್ಟ್ರೀಯ ಜನಸಂಖ್ಯಾ ನೋಂದಣಿ) ಪ್ರಕ್ರಿಯೆ ನಡೆಸಲು ಯಾವುದೇ ಅಡ್ಡಿಯಿಲ್ಲ ಎಂದು ನಿತೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಬಿಹಾರದ ದರ್ಭಾಂಗ ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ಸಂಬಂಧಿಸಿದ 80 ಕೋಟಿ ರೂ. ಮೊತ್ತದ ವಿವಿಧ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಮೌಲಾನಾ ಆಝಾದ್ ರಾಷ್ಟ್ರೀಯ ಉರ್ದು ವಿವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎನ್‌ಪಿಆರ್ ನೋಂದಣಿಯಲ್ಲಿ ಹೊಸದಾಗಿ ಸೇರಿಸಲಾಗಿರುವ ಹೆತ್ತವರು ಹುಟ್ಟಿದ ಸ್ಥಳ ಮತ್ತು ಆಧಾರ್ ದಾಖಲೆಯ ಕಾಲಂ ಬಗ್ಗೆ ಜನರಲ್ಲಿ ಆತಂಕ ಮೂಡಬಹುದು. ಆದ್ದರಿಂದ ಇದನ್ನು ರದ್ದುಗೊಳಿಸಬೇಕು ಎಂದವರು ಕೇಂದ್ರ ಸರಕಾರವನ್ನು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News