ಪಶ್ಚಿಮಬಂಗಾಳ: ಬಿಜೆಪಿ-ಟಿಎಂಸಿ ಸಂಘರ್ಷ; ಬಿಜೆಪಿ ಕಾರ್ಯಕರ್ತರ ಮನೆಗಳಿಗೆ ಬೆಂಕಿ

Update: 2020-02-24 18:09 GMT

ಜಲ್‌ಪಾಯಿಗುರಿ, ಫೆ. 24: ಪಶ್ಚಿಮಬಂಗಾಳದ ಜಲ್‌ಪಾಯಿಗುರಿಯಲ್ಲಿ ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ನಡುವೆ ನಡೆದ ಘರ್ಷಣೆಯಲ್ಲಿ ಬಿಜೆಪಿ ಬೆಂಬಲಿಗರ 7 ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಅಗ್ನಿಶಾಮಕ ದಳ ಕೂಡಲೇ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳೀಯ ಟಿಎಂಸಿ ನಾಯಕರೋರ್ವರ ಮೃತದೇಹ ಮೈನಾಗುರಿ ಪ್ರದೇಶದಲ್ಲಿರುವ ಹಸ್ಲರ್‌ದಾಂಗಾ ಗ್ರಾಮಕ್ಕೆ ರವಿವಾರ ರಾತ್ರಿ ತಲುಪಿದ ಬಳಿಕ ಈ ಘಟನೆ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ.

ಮನೆಗಳಿಗೆ ಬೆಂಕಿ ಹಚ್ಚಿದ ಘಟನೆಯ ಹಿಂದೆ ಟಿಎಂಸಿ ಕಾರ್ಯಕರ್ತರ ಕೈವಾಡ ಇದೆ ಎಂದು ಬಿಜೆಪಿ ಆರೋಪಿಸಿದೆ. ಆದರೆ, ಈ ಆರೋಪವನ್ನು ಪಶ್ಚಿಮಬಂಗಾಳದ ಆಡಳಿತಾರೂಢ ಪಕ್ಷ ಟಿಎಂಸಿ ನಿರಾಕರಿಸಿದೆ. ತೃಣಮೂಲ ಕಾಂಗ್ರೆಸ್‌ನ ಮಲ್ಲಿಕ್ ಹಾತ್ ಬೂತ್‌ನ ಅಧ್ಯಕ್ಷ ಭೂಂಬಾಲ್ ಘೋಷ್ ಅವರು ಹಸ್ಲರ್‌ದಾಂಗಾದಲ್ಲಿ ಪೆಬ್ರವರಿ 14ರಂದು ಅಪರಿಚಿತ ದುಷ್ಕರ್ಮಿಗಳಿಂದ ದಾಳಿಗೆ ಒಳಗಾಗಿದ್ದರು. ಅನಂತರ ಅವರು ಸಿಲಿಗುರಿಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ಮೂಲಗಳು ತಿಳಿಸಿವೆ.

ಈ ದಾಳಿಯ ಹಿಂದೆ ಬಿಜೆಪಿ ಕಾರ್ಯಕರ್ತರ ಪಾತ್ರ ಇದೆ ಎಂದು ಸ್ಥಳೀಯ ತೃಣಮೂಲ ಕಾಂಗ್ರೆಸ್‌ನ ನಾಯಕ ಮನೋಜ್ ರಾಯ್ ತಿಳಿಸಿದ್ದಾರೆ. ಘೋಷ್ ಮೃತದೇಹವನ್ನು ಹಲ್ಸರದಾಂಗಾಕ್ಕೆ ರವಿವಾರ ತಂದ ಬಳಿಕ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಬೆಂಬಲಿಗರ 7 ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಬಿಜೆಪಿಯ ಜಿಲ್ಲಾಧ್ಯಕ್ಷ ಬಾಪಿ ಗೋಸ್ವಾಮಿ ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಗ್ರಾಮೀಣ) ಧೆಂದೂಪ್ ಶೆರ್ಪಾ ನೇತೃತ್ವದ ಸೇನೆಯ ತುಕುಡಿಯೊಂದನ್ನು ನಿಯೋಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News