ಮ. ಪ್ರದೇಶ: ತನ್ನ ಉಳಿತಾಯದ ಹಣದಲ್ಲಿ ವಿದ್ಯಾರ್ಥಿಗಳನ್ನು ದಿಲ್ಲಿಗೆ ವಿಮಾನದಲ್ಲಿ ಕರೆದೊಯ್ದ ಮುಖ್ಯೋಪಾಧ್ಯಾಯರು

Update: 2020-02-24 18:19 GMT

ಇಂದೋರ್ : ಕೆಲವೊಮ್ಮೆ ಕನಸುಗಳು ನನಸಾಗುವುದೂ ಇದೆ. ಮಧ್ಯಪ್ರದೇಶದ ದೇವಾಸ್ ಜಿಲ್ಲೆಯ ಆಗ್ರಾಡ್ ಬ್ಲಾಕ್‌ನ ಬಿಜೆಪುರ ಗ್ರಾಮದ ಶಾಲೆಯ ವಿದ್ಯಾರ್ಥಿಗಳು ವಿಮಾನ ಪ್ರಯಾಣದ ಕನಸನ್ನು ಕಾಣುತ್ತಿದ್ದರು. ಶಾಲಾ ಮುಖ್ಯೋಪಾಧ್ಯಾಯ ಕಿಶೋರ ಕಾಣಸೆ ಅವರು ತನ್ನ ಉಳಿತಾಯದ ದುಡ್ಡಿನಲ್ಲಿ 60,000 ರೂ.ಗಳನ್ನು ವ್ಯಯಿಸಿ 19 ವಿದ್ಯಾರ್ಥಿಗಳನ್ನು ವಿಮಾನದಲ್ಲಿ ದಿಲ್ಲಿಗೆ ಎರಡು ದಿನಗಳ ಪ್ರವಾಸಕ್ಕೆ ಕರೆದೊಯ್ಯುವ ಮೂಲಕ ಅವರ ಕನಸನ್ನು ನನಸಾಗಿಸಿದ್ದಾರೆ.

ಫೆ.14ರಂದು ಇಂದೋರ್ ವಿಮಾನ ನಿಲ್ದಾಣದಲ್ಲಿ ದಿಲ್ಲಿ ವಿಮಾನವನ್ನೇರುವಾಗ 6 ರಿಂದ 8ನೇ ತರಗತಿಯವರೆಗಿನ ಈ ಮಕ್ಕಳ ಮುಖಗಳಲ್ಲಿ ಸಂಭ್ರಮ ಮನೆ ಮಾಡಿತ್ತು. ಆಗಸದಲ್ಲಿ ಹಾರುವಾಗ ಪುಟ್ಟ ಆಟಿಕೆಯಂತೆ ಕಾಣುವ ವಿಮಾನದ ಬೃಹದ್ಗಾತ್ರ ಅವರನ್ನು ಅಚ್ಚರಿಗೆ ಕೆಡವಿತ್ತು.

‘ಗ್ರಾಮದ ಕೆಲವು ಮಕ್ಕಳು ರೈಲಿನಲ್ಲಿಯೂ ಪ್ರಯಾಣಿಸಿಲ್ಲ, ಈ ಮಕ್ಕಳಿಗೆ ವಿಮಾನ ಪ್ರಯಾಣ ಕನಸಿನಲ್ಲಿಯೂ ಸಾಧ್ಯವಿರಲಿಲ್ಲ. ಹೀಗಾಗಿ ಅವರಿಗೆ ಎಳೆಯ ವಯಸ್ಸಿನಲ್ಲಿಯೇ ವಿಮಾನಯಾನದ ಅನುಭವವನ್ನು ಒದಗಿಸಲು ನಾನು ಯೋಚಿಸಿದ್ದೆ. ಕಳೆದ ವರ್ಷ ಶಾಲೆಯ ಮಕ್ಕಳ ಗುಂಪೊಂದನ್ನು ಆಗ್ರಾಕ್ಕೆ ರೈಲಿನಲ್ಲಿ ಕರೆದೊಯ್ದಿದ್ದೆ. ಅದರಿಂದ ಪುಳಕಿತಗೊಂಡಿದ್ದ ಮಕ್ಕಳು ತಾವು ವಿಮಾನಯಾನ ಮಾಡಲು ಬಯಸಿದ್ದಾಗಿ ತಿಳಿಸಿದ್ದರು ಮತ್ತು ಆಗ ನನ್ನ ನಿರ್ಧಾರ ಗಟ್ಟಿಯಾಗಿತ್ತು ’ಎಂದು ಕಾಣಸೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News