ದಿಲ್ಲಿ ಹಿಂಸಾಚಾರ: ಸುಪ್ರೀಂಕೋರ್ಟ್‌ಗೆ ಚಂದ್ರಶೇಖರ ಆಝಾದ್ ಅರ್ಜಿ

Update: 2020-02-26 10:32 GMT

 ಹೊಸದಿಲ್ಲಿ, ಫೆ.25: ಈಶಾನ್ಯ ದಿಲ್ಲಿಯಲ್ಲಿನ ಹಿಂಸಾಚಾರದ ಕುರಿತಂತೆ ಭೀಮ್ ಆರ್ಮಿ ವರಿಷ್ಠ ಚಂದ್ರಶೇಖರ ಆಝಾದ್ ಮಂಗಳವಾರ ಸುಪ್ರೀಂಕೋರ್ಟ್‌ಗೆ ಹೊಸತಾಗಿ ಅರ್ಜಿ ಸಲ್ಲಿಸಿದರು. ಫೆ.23ರ ಸಂಜೆ ಆರಂಭವಾಗಿರುವ ದಾಳಿಗೆ ಸಂಬಂಧಿಸಿದ ದೂರುಗಳ ಮೇಲೆ ಎಫ್‌ಐಆರ್ ದಾಖಲಿಸಲು ನಿರ್ದೇಶನ ನೀಡುವಂತೆ ನ್ಯಾಯಾಲಯವನ್ನು ಕೋರಿದ್ದಾರೆ. ಆಝಾದ್ ಅರ್ಜಿಯನ್ನು ಆಲಿಸಲು ನ್ಯಾಯಾಲಯ ಒಪ್ಪಿಕೊಂಡಿದೆ.

ಹಿಂಸಾಚಾರ ಭುಗಿಲೇಳಲು ಬಿಜೆಪಿ ನಾಯಕ ಕಪಿಲ್ ಮಿಶ್ರಾ ಜವಾಬ್ದಾರರಾಗಿದ್ದಾರೆ ಎಂದು ತನ್ನ ಅರ್ಜಿಯಲ್ಲಿ ಆರೋಪಿಸಿರುವ ಆಝಾದ್, ದಕ್ಷಿಣ ದಿಲ್ಲಿಯ ಶಾಹೀನ್ ಬಾಗ್‌ನಲ್ಲಿ ಪ್ರತಿಭಟನ ನಿರತ ಮಹಿಳೆಯರಿಗೆ ಭದ್ರತೆ ನೀಡಬೇಕೆಂದು ಕೋರಿದ್ದಾರೆ. ಸಿಎಎ ವಿರುದ್ಧ ಶಾಹೀನ್ ಬಾಗ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ 80 ದಿನಗಳನ್ನು ದಾಟಿದೆೆ.

ಶನಿವಾರ ರಾತ್ರಿಯಿಂದ ಈಶಾನ್ಯ ದಿಲ್ಲಿಯಲ್ಲಿ ಸಿಎಎ ವಿರೋಧಿ ಪ್ರತಿಭಟನೆ ಆರಂಭವಾಗಿತ್ತು. ಮೂರು ದಿನದೊಳಗೆ ಪ್ರತಿಭಟನಕಾರರನ್ನು ತೆರವುಗೊಳಿಸಬೇಕೆಂದು ದಿಲ್ಲಿ ಪೊಲೀಸರಿಗೆ ಮಿಶ್ರಾ ಬೇಡಿಕೆ ಇಟ್ಟ ಬಳಿಕ ಘರ್ಷಣೆ ತಲೆದೋರಿತ್ತು.

‘‘ನಾವು ಡೊನಾಲ್ಡ್ ಟ್ರಂಪ್ ಇಲ್ಲಿಗೆ(ದಿಲ್ಲಿ)ಬರುವ ತನಕ ಕಾಯುತ್ತೇವೆ. ಆದರೆ, ಆ ಬಳಿಕ ರಸ್ತೆಯನ್ನು ತೆರವುಗೊಳಿಸದಿದ್ದರೆ ನಾವು ನಿಮ್ಮ(ಪೊಲೀಸ್) ಮಾತನ್ನು ಕೇಳುವುದಿಲ್ಲ. ಜಾಫ್ರಾಬಾದ್ ಹಾಗೂ ಚಾಂದ್ ಬಾಗ್‌ನಲ್ಲಿನ ರೋಡ್‌ನ್ನು ತೆರವುಗೊಳಿಸಬೇಕು. ಹಾಗೆ ಮಾಡದೇ ಇದ್ದರೆ ನಾವು ಬೀದಿಗೆ ಇಳಿಯತ್ತೇವೆ’’ ಎಂದು ಮಿಶ್ರಾ ಎಚ್ಚರಿಸಿರುವ ವೀಡಿಯೊ ವೈರಲ್ ಆಗಿತ್ತು.

ದಿಲ್ಲಿ ಜನತೆಯ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸಿ ಸೋಮವಾರ ಆಝಾದ್ ಅವರು ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್‌ಗೆ ಪತ್ರ ಬರೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News