ಎನ್‌ಆರ್‌ ಸಿ ವಿರುದ್ಧ ನಿರ್ಣಯ ಅಂಗೀಕರಿಸಿದ ಬಿಹಾರ

Update: 2020-02-25 14:05 GMT

ಪಾಟ್ನಾ,ಫೆ.25: ಬಿಹಾರ ವಿಧಾನಸಭೆಯು ರಾಜ್ಯದಲ್ಲಿ ಎನ್‌ಆರ್‌ ಸಿ ಜಾರಿಯನ್ನು ವಿರೋಧಿಸಿ ನಿರ್ಣಯವನ್ನು ಮಂಗಳವಾರ ಅಂಗೀಕರಿಸಿದೆ. ಕೇಂದ್ರ ಗೃಹ ಸಚಿವಾಲಯವು ನೂತನ ಪ್ರಶ್ನಾವಳಿಯಲ್ಲಿನ ವಿವಾದಾತ್ಮಕ ಪ್ರಶ್ನೆಗಳನ್ನು ಕೈಬಿಟ್ಟರೆ ರಾಜ್ಯದಲ್ಲಿ ಎನ್‌ಪಿಆರ್ ಪ್ರಕ್ರಿಯೆಗೆ ಅವಕಾಶ ನೀಡುವುದಾಗಿಯೂ ನಿರ್ಣಯದಲ್ಲಿ ಹೇಳಲಾಗಿದೆ.

ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್ ಅವರು ಸದನದಲ್ಲಿ ಮಂಡಿಸಿದ್ದ ಸಿಎಎ-ಎನ್‌ಆರ್‌ಸಿ-ಎನ್‌ಪಿಆರ್ ಕುರಿತು ನಿಲುವಳಿ ಸೂಚನೆಗೆ ಉತ್ತರವಾಗಿ ಸರಕಾರವು ವಿಧಾನಸಭೆಯಲ್ಲಿ ಈ ನಿರ್ಣಯವನ್ನು ಅಂಗೀಕಾರಗೊಳಿಸಿದೆ.

ಸರಕಾರವನ್ನು ಪೇಚಿಗೆ ಸಿಲುಕಿಸುವ ಆರ್‌ಜೆಡಿಯ ಪ್ರಯತ್ನಕ್ಕೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು,ಎನ್‌ಪಿಆರ್ ಅಥವಾ ಎನ್‌ಆರ್‌ ಸಿಯನ್ನು ರಾಜ್ಯದಲ್ಲಿ ಹೇಗೆ ಜಾರಿಗೊಳಿಸಲಾಗುವುದು ಎಂಬ ಬಗ್ಗೆ ಯಾವುದೇ ಗೊಂದಲ ಬೇಡ. ಹೆತ್ತವರ ಜನ್ಮಸ್ಥಳ ಮತ್ತು ಅವರ ಜನನ ದಿನಾಂಕಗಳಂತಹ ಮಾಹಿತಿಗಳನ್ನು ಒದಗಿಸುವಂತೆ ಯಾರಿಗೂ ಸೂಚಿಸಲಾಗುವುದಿಲ್ಲ ಎಂದು ಘೋಷಿಸಿದ್ದರು.

ಎನ್‌ ಪಿಆರ್ ಫಾರ್ಮ್‌ಗಳಿಂದ ವಿವಾದಾತ್ಮಕ ಅಂಶಗಳನ್ನು ಕೈಬಿಡುವಂತೆ ಕೋರಿ ಬಿಹಾರ ಸರಕಾರವು ಕೇಂದ್ರಕ್ಕೆ ಪತ್ರ ಬರೆದಿದೆ ಎಂದು ಮಂಗಳವಾರ ವಿಧಾನಸಭೆಯಲ್ಲಿ ತಿಳಿಸಿದ ನಿತೀಶ್,‘ನನ್ನ ತಾಯಿ ಯಾವಾಗ ಜನಿಸಿದ್ದರು ಎನ್ನುವುದು ನನಗೂ ಗೊತ್ತಿಲ್ಲ, ಎನ್‌ಆರ್‌ಸಿ ಯನ್ನು ಜಾರಿಗೊಳಿಸುವ ಅಗತ್ಯವೇ ಇಲ್ಲ ’ ಎಂದರು.

ನಿರ್ಣಯ ಅಂಗೀಕಾರಕ್ಕೆ ಮುನ್ನ ಸದನದಲ್ಲಿ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ತೀವ್ರ ವಾಗ್ಯುದ್ಧ ನಡೆದಿತ್ತು. ಪ್ರತಿಪಕ್ಷವು ಸಿಎಎ ಅನ್ನು ಕರಾಳ ಶಾಸನ ಎಂದು ಬಣ್ಣಿಸಿದ್ದನ್ನು ಬಿಜೆಪಿ ಸದಸ್ಯರು ಬಲವಾಗಿ ವಿರೋಧಿಸಿದಾಗ ಕೋಲಾಹಲ ಸ್ಷಷ್ಟಿಯಾಗಿದ್ದರಿಂದ ಸದನವನ್ನು ಕೆಲಕಾಲ ಮುಂದೂಡಲಾಗಿತ್ತು.

ಬಿಹಾರವು ಉದ್ದೇಶಿತ ಎನ್‌ಆರ್‌ ಸಿ ವಿರುದ್ಧ ನಿರ್ಣಯವನ್ನು ಅಂಗೀಕರಿಸಿದ ಮೊದಲ ಎನ್‌ಡಿಎ ಆಡಳಿತದ ರಾಜ್ಯವಾಗಿದೆ. ನಿತೀಶ್ ಕುಮಾರ್ ಅವರ ಜೆಡಿಯು ಬಿಜೆಪಿಯೊಂದಿಗೆ ಸೇರಿಕೊಂಡು ಸಮ್ಮಿಶ್ರ ಸರಕಾರವನ್ನು ನಡೆಸುತ್ತಿದೆ.

2010ರ ಎನ್‌ಪಿ ಆರ್ ಸಂದರ್ಭದಲ್ಲಿ ಕೇಳಲಾಗಿದ್ದ ಪ್ರಶ್ನೆಗಳಿಗೆ ಮಾತ್ರ ಜನರು ಉತ್ತರ ನೀಡಬೇಕಾಗುತ್ತದೆ ಎಂದು ಹೇಳುವ ಮೂಲಕ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅವರು ಈ ವಿಷಯದಲ್ಲಿ ವೆುತ್ರಿಪಕ್ಷಗಳ ನಿಲುವು ಒಂದೇ ಆಗಿದೆ ಎಂಬ ಸಂಕೇತ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News