ಸಿಎಎ ಕುರಿತ ಪ್ರಶ್ನೆಗೆ ಟ್ರಂಪ್ ಪ್ರತಿಕ್ರಿಯಿಸಿದ್ದು ಹೀಗೆ…

Update: 2020-02-25 16:13 GMT

ಹೊಸದಿಲ್ಲಿ,ಫೆ.25: ದೇಶಾದ್ಯಂತ ಪ್ರತಿಭಟನೆಗಳಿಗೆ ಕಾರಣವಾಗಿರುವ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ)ಯ ಕುರಿತು ಹೇಳಿಕೆ ನೀಡಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಂಗಳವಾರ ಇಲ್ಲಿ ನಿರಾಕರಿಸಿದರು. ಆದರೆ ತನ್ನ ಎರಡು ದಿನಗಳ ಭೇಟಿಯ ಸಂದರ್ಭದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸಿರುವುದಾಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್,ಸಿಎಎ ಕುರಿತು ಏನನ್ನೂ ಹೇಳಲು ಬಯಸುವುದಿಲ್ಲ. ಅದು ಭಾರತಕ್ಕೆ ಬಿಟ್ಟಿದ್ದು ಮತ್ತು ಅದು ತನ್ನ ಜನರಿಗಾಗಿ ಸರಿಯಾದ ನಿರ್ಧಾರವನ್ನು ಕೈಗೊಳ್ಳುತ್ತದೆ ಎಂದು ಆಶಿಸಿದ್ದೇನೆ ಎಂದರು.

 ಸುದ್ದಿಗೋಷ್ಠಿ ನಡೆಯುತ್ತಿದ್ದ ಹೋಟೆಲ್ ಮೌರ್ಯದಿಂದ ಕೇವಲ 20 ಕಿ.ಮೀ.ದೂರದ ಈಶಾನ್ಯ ದಿಲ್ಲಿಯಲ್ಲಿನ ಹಿಂಸಾಚಾರಗಳ ಕುರಿತು ಪ್ರಶ್ನೆಗೆ ಟ್ರಂಪ್, ತಾನು ಮೋದಿಯವರೊಂದಿಗೆ ಧಾರ್ಮಿಕ ಸ್ವಾತಂತ್ರ್ಯಗಳ ಕುರಿತು ಮಾತನಾಡಿದ್ದೇನೆ. ಜನರು ಧಾರ್ಮಿಕ ಸ್ವಾತಂತ್ರ್ಯವನ್ನು ಹೊಂದಿರಬೇಕು ಎಂದು ತಾನು ಬಯಸಿದ್ದೇನೆ ಎಂದು ಮೋದಿ ತಿಳಿಸಿದ್ದಾರೆ. ಅವರು ನಿಜಕ್ಕೂ ಆ ಬಗ್ಗೆ ಶ್ರಮಿಸಿದ್ದಾರೆ. ವ್ಯಕ್ತಿಗತ ದಾಳಿಗಳು ನಡೆಯುತ್ತಿರುವ ಬಗ್ಗೆ ತಾನು ಕೇಳಿದ್ದೇನೆ,ಆದರೆ ಅದನ್ನು ತಾನು ಚರ್ಚಿಸಿಲ್ಲ. ಅದು ಭಾರತಕ್ಕೆ ಬಿಟ್ಟ ವಿಷಯವಾಗಿದೆ ಎಂದು ಉತ್ತರಿಸಿದರು.

ದೇಶದಲ್ಲಿ ಮುಸ್ಲಿಮರ ವಿರುದ್ಧ ತಾರತಮ್ಯದ ಕುರಿತ ಪ್ರಶ್ನೆಗೆ ಉತ್ತರಿಸಿದ ಟ್ರಂಪ್,ತಾವು ಮುಸ್ಲಿಮರೊಂದಿಗೆ ನಿಕಟವಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ಮೋದಿ ಹೇಳಿದ್ದಾರೆ ಎಂದು ತಿಳಿಸಿದರು.

ಕಾಶ್ಮೀರ ಬಿಕ್ಕಟ್ಟು ಭಾರತ-ಪಾಕಿಸ್ತಾನ ನಡುವಿನ ಸಂಬಂಧದಲ್ಲಿಯ ‘ಮುಳ್ಳು’ಎಂದು ಬಣ್ಣಿಸಿದ ಅವರು,ಉಭಯ ರಾಷ್ಟ್ರಗಳ ನಡುವೆ ಮಧ್ಯಸ್ಥಿಕೆ ವಹಿಸುವ ತನ್ನ ಕೊಡುಗೆಯನ್ನು ಪುನರುಚ್ಚರಿಸಿದರು. ಆದರೆ ತಾನು ಕೊಡುಗೆಯ ಬಗ್ಗೆ ಮೋದಿಯವರಿಗೆ ವೈಯಕ್ತಿಕವಾಗಿ ತಿಳಿಸಿಲ್ಲ ಎಂದರು.

ಕಾಶ್ಮೀರವು ಭಾರತ ಮತ್ತು ಪಾಕಿಸ್ತಾನಗಳ ನಡುವಿನ ದೊಡ್ಡ ಸಮಸ್ಯೆಯಾಗಿದೆ. ತಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಅವರು ದೀರ್ಘಕಾಲದಿಂದ ಪ್ರಯತ್ನಿಸುತ್ತಿ ದ್ದಾರೆ. ತನ್ನಿಂದ ಮಧ್ಯಸ್ಥಿಕೆ ಅಥವಾ ನೆರವು ಬೇಕಿದ್ದರೆ ತಾನು ಸಿದ್ಧನಿದ್ದೇನೆ. ಕಾಶ್ಮೀರ ಬಹುಸಮಯದಿಂದಲೂ ಹಲವರ ದೃಷ್ಟಿಯಲ್ಲಿ ಮುಳ್ಳಾಗಿಯೇ ಉಳಿದುಕೊಂಡಿದೆ. ಪ್ರತಿಯೊಂದೂ ಕಥೆಗೆ ಎರಡು ಮುಖಗಳಿರುತ್ತವೆ ಎಂದು ಟ್ರಂಪ್ ಹೇಳಿದರು.

 ಪಾಕಿಸ್ತಾನದ ಕಡೆಯಿಂದ ನಡೆಯುತ್ತಿರುವ ಭಯೋತ್ಪಾದಕ ಚಟುವಟಿಕೆಗಳ ಬಗ್ಗೆಯೂ ತಾನು ಸುದೀರ್ಘವಾಗಿ ಚರ್ಚಿಸಿದ್ದೇನೆ. ಉಭಯ ದೇಶಗಳ ಪ್ರಧಾನಿಗಳ ಜೊತೆಗೆ ತನಗೆ ಉತ್ತಮ ಸಂಬಂಧವಿರುವುದರಿಂದ ತಾನು ನೆರವಾಗಬಲ್ಲೆ ಎಂದ ಟ್ರಂಪ್,ತಾಲಿಬಾನ್ ಶಾಂತಿ ಒಪ್ಪಂದದ ಕುರಿತೂ ತಾನು ಮೋದಿಯವರೊಂದಿಗೆ ಚರ್ಚಿಸಿದ್ದೇನೆ ಮತ್ತು ಆ ಒಪ್ಪಂದ ಏರ್ಪಡಬೇಕೆಂದು ಭಾರತವೂ ಬಯಸಿದೆ ಎಂದರು.

ಭಾರತದೊಂದಿಗೆ ವ್ಯಾಪಾರ ಒಪ್ಪಂದವೇರ್ಪಟ್ಟರೆ ಅದು ವರ್ಷದ ಕೊನೆಯಲ್ಲಿ ಆಗಲಿದೆ ಎಂದ ಅವರು,ಭಾರತವು ಅಮೆರಿಕವನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಒತ್ತಿ ಹೇಳಿದರು.

ಭಾರತವು ಬಹುಶಃ ಅತ್ಯಂತ ಹೆಚ್ಚಿನ ಸುಂಕ ವಿಧಿಸುವ ದೇಶವಾಗಿದೆ ಎಂದ ಟ್ರಂಪ್,ಹ್ಯಾರ್ಲೆ ಡೇವಿಡ್ಸನ್ ಬೈಕ್ ಮೇಲಿನ ಅಧಿಕ ಸುಂಕವನ್ನು ನಿದರ್ಶನವಾಗಿ ನೀಡಿದರು.

ಮೋದಿಯವರ ಗುಣಗಾನ ಮಾಡಿದ ಟ್ರಂಪ್,ಭಾರತವೊಂದು ‘ಪ್ರಚಂಡ ದೇಶ ’ವಾಗಿದೆ ಮತ್ತು ಮೋದಿ ’ಭಯಂಕರ ನಾಯಕ’ರಾಗಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News