ನಾನು ಚುನಾವಣೆಯಲ್ಲಿ ಸೋತರೆ ಶೇರು ಮಾರುಕಟ್ಟೆಗಳು ಪತನ: ಟ್ರಂಪ್

Update: 2020-02-25 17:22 GMT

ಹೊಸದಿಲ್ಲಿ,ಫೆ.25: ಈ ವರ್ಷದ ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗಳಲ್ಲಿ ತನ್ನ ರಿಪಬ್ಲಿಕನ್ ಪಕ್ಷವು ಗೆಲುವು ಸಾಧಿಸುತ್ತದೆ ಎಂಬ ಆತ್ಮವಿಶ್ವಾಸ ತನಗಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಂಗಳವಾರ ಹೇಳಿದರು.

ದಿಲ್ಲಿಯ ಅಮೆರಿಕ ರಾಯಭಾರಿ ಕಚೇರಿಯಲ್ಲಿ ಭಾರತೀಯ ಉದ್ಯಮ ರಂಗದ ನಾಯಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು,‘ನಾನು ಚುನಾವಣೆಯಲ್ಲಿ ಗೆದ್ದರೆ ನಮ್ಮ ಶೇರು ಮಾರುಕಟ್ಟೆಗಳು ಸಾವಿರಾರು ಅಂಶ ಮೇಲಕ್ಕೇರುತ್ತವೆ,ನಾನು ಸೋತರೆ ಅವು ಗಣನೀಯವಾಗಿ ಕುಸಿಯಲಿವೆ ’ಎಂದರು.

‘ನಾವು ಮತ್ತೆ ಗೆಲ್ಲಲಿದ್ದೇವೆ. ನಮ್ಮ ಸಾಧನೆಗಳನ್ನು ನೋಡಿದರೆ ನಿಮಗೇ ಅದು ಗೊತ್ತಾಗುತ್ತದೆ. ಇದೇ ಕಾರಣದಿಂದ ನಾವು ಅಮೆರಿಕದಲ್ಲಿ ಸುಖವಾಗಿದ್ದೇವೆ ’ಎಂದು ಹೇಳಿದ ಟ್ರಂಪ್ ತನ್ನ ಸರಕಾರದ ಕೆಲವು ಸಾಧನೆಗಳನ್ನು ಉದಾಹರಿಸಿದರು.

ಖ್ಯಾತ ಉದ್ಯಮ ದಿಗ್ಗಜರಾದ ಮುಕೇಶ್ ಅಂಬಾನಿ, ಸುನಿಲ್ ಭಾರ್ತಿ ಮಿತ್ತಲ್, ಎನ್.ಚಂದ್ರಶೇಖರನ್, ಆನಂದ್ ಮಹಿಂದ್ರಾ,ಎ.ಎಂ.ನಾಯ್ಕಾ,ಕಿರಣ ಮಜುಮ್ದಾರ್ ಶಾ ಮುಂತಾದವರು ಸಂವಾದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತನ್ನ ನಾಲ್ಕು ವರ್ಷಗಳ ಅಧಿಕಾರಾವಧಿಯಲ್ಲಿ ಅಮೆರಿಕದ ಆರ್ಥಿಕತೆಯು ಉತ್ತಮ ನಿರ್ವಹಣೆಯನ್ನು ಪ್ರದರ್ಶಿಸಿದೆ ಎಂದು ಇತ್ತೀಚಿಗೆ ಹೇಳಿದ್ದ ಟ್ರಂಪ್,ಭಾರತೀಯ ಕಂಪನಿಗಳು, ಮುಖ್ಯವಾಗಿ ಉದ್ಯೋಗ ಸೃಷ್ಟಿಗಾಗಿ ತನ್ನ ದೇಶದಲ್ಲಿ ತಯಾರಿಕೆ ಕ್ಷೇತ್ರದಲ್ಲಿ ಹೂಡಿಕೆಗಳನ್ನು ಮಾಡಬೇಕೆಂದು ಬಯಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News