1966ರ ದಾಖಲೆ ನೀಡಿದ ಮಹಿಳೆಗೆ ‘ಪೌರತ್ವ ಸಾಬೀತುಪಡಿಸಲು ಇದು ಸಾಕಾಗಲ್ಲ’ ಎಂದ ಹೈಕೋರ್ಟ್ !

Update: 2020-02-26 18:08 GMT

ಗುವಾಹಟಿ, ಫೆ. 26: ಶಾಲೆ ಪ್ರಮಾಣಪತ್ರದಂತಹ ದಾಖಲೆಗಳನ್ನು ಶಾಲೆಯ ಮುಖ್ಯೋಪಾಧ್ಯಾಯರು ಸಾಬೀತುಪಡಿಸಬೇಕು ಎಂದು ಹೇಳಿರುವ ಗುವಾಹಟಿ ಉಚ್ಚ ನ್ಯಾಯಾಲಯ ಮಹಿಳೆಯೋರ್ವರನ್ನು ವಿದೇಶಿ ಎಂದು ಘೋಷಿಸಿದೆ.

ಕಾಮರೂಪ್‌ನ ವಿದೇಶಿ ಟ್ರಿಬ್ಯೂನಲ್ 2018 ಡಿಸೆಂಬರ್ 1ರಂದು ನೀಡಿದ ಆದೇಶವನ್ನು ಪ್ರಶ್ನಿಸಿ 42ರ ಹರೆಯದ ಮಹಿಳೆ ಸಹೆರಾ ಖಾತುನ್ ಸಲ್ಲಿಸಿದ ರಿಟ್ ಮನವಿಯ ವಿಚಾರಣೆ ನಡೆಸಿದ ಹೈಕೋರ್ಟ್ ಅಸ್ಸಾಂ ಒಪ್ಪಂದದ ಪ್ರಕಾರ 1971ರ ನಂತರ ವಲಸೆ ಬಂದ ವಿದೇಶಿಯಳೆಂದು ಘೋಷಿಸಿತು. ಅವರ ಪೂರ್ವಜರು 1971 ಮಾರ್ಚ್ 24ಕ್ಕಿಂತ ಹಿಂದೆ ಬಂದಿರುವುದಕ್ಕೆ 12 ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಕಥರಾದ ಓಂಕಾರ್ ಸರ್ಕಾರ್ ಶಾಲೆಯ ಮುಖ್ಯೋಪಾಧ್ಯಾಯರು ನೀಡಿದ ಶಾಲೆ ಪ್ರಮಾಣ ಪತ್ರ ಉಲ್ಲೇಖಿಸಿ ಅವರು ತನ್ನ ಜನ್ಮ ದಿನಾಂಕ 1978 ಫೆಬ್ರವರಿ 2 ಎಂದು ಹೇಳಿದರು. ತನ್ನ ತಂದೆ ಸೈಯದ್ ಅಲಿ ಎಂದು ತಿಳಿಸಿದ್ದರು. ಅಲ್ಲದೆ, ತನ್ನ ಅಜ್ಜಿ-ಅಜ್ಜ ಹಾಗೂ ಒಡಹುಟ್ಟಿದರ ಬಗ್ಗೆ ಪುರಾವೆ ನೀಡಲು 1966, 1970, 1977, 1989, 1997, 2005 ಹಾಗೂ 2017ರ ಮತದಾರರ ಪಟ್ಟಿಯನ್ನು ನೀಡಿದ್ದರು. ಮೌಖಿಕ ಹೇಳಿಕೆಯಲ್ಲಿ ಸಹೆರಾ ಖಾತುನ್ ಅವರು ಮಫಿದುಲ್ ಇಸ್ಲಾಂ ಸಹೋದರ, ಜಯತುನ್ ನೆಸ್ಸಾ ತಾಯಿ ಎಂದು ತಿಳಿಸಿದ್ದರು.

ಶಾಲೆ ಪ್ರಮಾಣಪತ್ರ ಹಾಗೂ ಲಾರುಜಾನ್, ಕನ್ಹಾರಾ ಗ್ರಾಮ ಮುಖ್ಯಸ್ಥ ನೀಡಿದ ಪ್ರಮಾಣಪತ್ರಗಳಂತಹ ದಾಖಲೆಗಳಲ್ಲಿ ಮಾತ್ರ ದೂರುದಾರೆ ಹಾಗೂ ಅವರ ಹೆತ್ತವರು, ಪೂರ್ವಜರು ನಡುವೆ ಸಂಬಂಧ ಕಂಡು ಬರುತ್ತದೆ. ಆದರೆ, ಈ ಸಂಬಂಧವನ್ನು ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು ಸಾಬೀತುಪಡಿಸದೇ ಇದ್ದರೆ, ನ್ಯಾಯಾಲಯ ಈ ದಾಖಲೆಗಳನ್ನು ಪುರಾವೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಗುವಾಹಟಿ ಉಚ್ಚ ನ್ಯಾಯಾಲಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News