ಕೊರೋನ ವೈರಸ್ ಭೀತಿ: ಆರು ದೇಶಗಳು ಸ್ಪರ್ಧೆಯಿಂದ ಹೊರಕ್ಕೆ

Update: 2020-02-26 18:10 GMT

ಹೊಸದಿಲ್ಲಿ, ಫೆ.26: ಮಾರಣಾಂತಿಕ ಕೊರೋನ ವೈರಸ್ ಕಾಣಿಸಿಕೊಂಡ ಚೀನಾ ಸಹಿತ ಆರು ದೇಶಗಳು ಮುಂದಿನ ತಿಂಗಳು ಭಾರತದಲ್ಲಿ ನಡೆಯಲಿರುವ ಶೂಟಿಂಗ್ ವಿಶ್ವಕಪ್‌ನಿಂದ ಹೊರಗುಳಿದಿವೆ ಎಂದು ರಾಷ್ಟ್ರೀಯ ರೈಫಲ್ ಸಂಸ್ಥೆ ಬುಧವಾರ ಬಹಿರಂಗಪಡಿಸಿದೆ.

ಐಎಸ್‌ಎಸ್‌ಎಫ್ ವಿಶ್ವಕಪ್ ದಿಲ್ಲಿಯ ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ಮಾರ್ಚ್ 15ರಿಂದ 26ರ ತನಕ ನಡೆಯಲಿದೆ.

 ‘‘ಕೆಲವು ದೇಶಗಳು ವಿಶ್ವಕಪ್‌ನಲ್ಲಿ ಭಾಗವಹಿಸಲಿವೆ. ಆದರೆ, ಕೊರೋನ ವೈರಸ್ ಭೀತಿಯಿಂದಾಗಿ, ರಾಷ್ಟ್ರೀಯ ನೀತಿಗಳ ಹಿನ್ನೆಲೆಯಲ್ಲಿ ಕೆಲವು ದೇಶಗಳು ಭಾರತಕ್ಕೆ ಬರುತ್ತಿಲ್ಲ. ಚೀನಾ ವೈರಸ್ ಬಾಧಿತ ದೇಶವಾಗಿ ತನ್ನದೇ ನಿರ್ಧಾರ ತೆಗೆದುಕೊಂಡಿದೆ. ಬೇರೊಬ್ಬರಿಗೆ ವೈರಸ್ ಪಸರಿಸಲು ಬಯಸದ ಕಾರಣ ಭಾರತಕ್ಕೆ ಆ ತಂಡ ಬರುತ್ತಿಲ್ಲ. ರಾಷ್ಟ್ರೀಯ ನೀತಿಗಳ ಕಾರಣಕ್ಕೆ ತೈವಾನ್, ಹಾಂಕಾಂಗ್, ಮಕಾವು, ಉತ್ತರ ಕೊರಿಯಾ ಹಾಗೂ ಟರ್ಕ್‌ಮೆನಿಸ್ತಾನ ವಿಶ್ವಕಪ್‌ನಿಂದ ಹೊರಗುಳಿದಿವೆ ಎಂದಿರುವ ಸಿಂಗ್, ವಿಶ್ವಕಪ್‌ನಿಂದ ಹೊರಗುಳಿದಿರುವ ದೇಶಗಳ ಸರಕಾರಗಳು ದೇಶೀಯ ಪ್ರಯಾಣದಲ್ಲಿ ನಿರ್ಬಂಧ ವಿಧಿಸಿವೆ ಎನ್ನುವುದನ್ನು ಉಲ್ಲೇಖಿಸಿದ್ದಾರೆ.

 ಕೊರೋನ ವೈರಸ್ ವುಹಾನ್ ನಗರದಲ್ಲಿ ಮೊದಲಿಗೆ ಕಾಣಿಸಿಕೊಂಡ ಕಾರಣ ಈ ತಿಂಗಳಾರಂಭದಲ್ಲಿ ಭಾರತ ಸರಕಾರ ಚೀನಾ ಕುಸ್ತಿಪಟುಗಳಿಗೆ ಏಶ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ವೀಸಾ ನಿರಾಕರಿಸಿತ್ತು. ಚೀನಾದಲ್ಲಿ ಕಾಣಿಸಿಕೊಂಡಿರುವ ಕೊರೋನ ವೈರಸ್‌ಗೆ 2,600ಕ್ಕೂ ಅಧಿಕ ಜನ ಬಲಿಯಾಗಿದ್ದು,ವಿಶ್ವದ 80,000ಕ್ಕೂ ಅಧಿಕ ಜನರಿಗೆ ವೈರಸ್ ಬಾಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News