‘ಗರುಡ ಗಮನ ವೃಷಭ ವಾಹನ’

Update: 2020-02-27 09:07 GMT

‘ಒಂದು ಮೊಟ್ಟೆ ಕತೆ’ ಖ್ಯಾತಿಯ ರಾಜ್ ಬಿ. ಶೆಟ್ಟಿ ಭೂಗತ ಜಗತ್ತಿನ ಕಥೆಯೊಂದಿಗೆ ಮತ್ತೆ ಮರಳಿ ಬಂದಿದ್ದಾರೆ. ಈ ಚಿತ್ರದ ಹೆಸರು ‘ಗರುಡ ಗಮನ ವೃಷಭ ವಾಹನ’. ರಾಜ್ ಬಿ. ಶೆಟ್ಟಿ ಈ ಚಿತ್ರದಲ್ಲಿ ನಟನೆಯೊಂದಿಗೆ ನಿರ್ದೇಶನದ ಹೊಣೆಯನ್ನು ಕೂಡ ಹೊತ್ತುಕೊಂಡಿದ್ದಾರೆ. ಇನ್ನೊಂದು ಪ್ರಮುಖ ಪಾತ್ರದಲ್ಲಿ ರಿಷಭ್ ಶೆಟ್ಟಿ ನಟಿಸಿದ್ದಾರೆ. ಈ ಚಿತ್ರದಲ್ಲಿ ತಾಯಿಯ ಪಾತ್ರವನ್ನು ಹೊರತುಪಡಿಸಿ ಹೆಣ್ಣಿನ ಯಾವುದೇ ಪಾತ್ರ ಇಲ್ಲ. ರಾಜ್ ಬಿ. ಶೆಟ್ಟಿ ಈ ಚಿತ್ರದ ಶೂಟಿಂಗ್ ಅನ್ನು ಪೂರ್ಣಗೊಳಿಸಿದ್ದಾರೆ. ಶೂಟಿಂಗ್ ಆರಂಭಿಸುವ ಸಂದರ್ಭ ಚಿತ್ರಕ್ಕೆ ‘ಹರಿ ಹರ’ ಎಂದು ಶೀರ್ಷಿಕೆ ಇರಿಸಲಾಗಿತ್ತು. ಅನಂತರ ಈ ಹಿಂದಿನ ಶೀರ್ಷಿಕೆ ಚಿತ್ರಕ್ಕೆ ಸೂಕ್ತವಾಗಿಲ್ಲ ಎಂಬ ಕಾರಣಕ್ಕೆ ಶೀರ್ಷಿಕೆಯನ್ನು ‘ಗರುಡ ಗಮನ ವೃಷಭ ವಾಹನ’ ಎಂದು ಬದಲಾಯಿಸಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ ಬಿ. ಶೆಟ್ಟಿ, ನಾನು ಈ ಚಿತ್ರದ ಸ್ಕ್ರಿಪ್ಟ್ ರಚಿಸುತ್ತಿದ್ದಾಗ ‘ಹರಿಹರ’ ಎಂಬ ಹೆಸರು ಮನಸ್ಸಿನಲ್ಲಿ ಬಂತು. ಈ ಹಿನ್ನೆಲೆಯಲ್ಲಿ ‘ಹರಿಹರ’ ಎಂಬ ಹೆಸರು ಇರಿಸಿದ್ದೆ. ಆದರೆ, ಆನಂತರ ಈ ಶೀರ್ಷಿಕೆ ಚಿತ್ರದ ಪಾತ್ರದ ಸಾಮರ್ಥ್ಯವನ್ನು ಪ್ರತಿನಿಧಿಸುವುದಿಲ್ಲ ಎಂಬುದು ಅರಿವಿಗೆ ಬಂತು. ಅನಂತರ ತುಂಬಾ ಚಿಂತಿಸಿ ಈ ಚಿತ್ರಕ್ಕೆ ‘ಗರುಡ ಗಮನ ವೃಷಭ ವಾಹನ’ ಎಂದು ಶೀರ್ಷಿಕೆ ಇರಿಸಿದೆ ಎಂದಿದ್ದಾರೆ.

‘‘ಈ ಕಥೆ ಸಮಕಾಲೀನತೆಗೆ ಸೂಕ್ತವಾಗಿದೆ. ಶಿವನನನ್ನು ನಾನು ಹಾಗೂ ವಿಷ್ಣುವನ್ನು ರಿಷಬ್ ಶೆಟ್ಟಿ ಪ್ರತಿನಿಧಿಸುತ್ತಾರೆ. ಇಬ್ಬರೂ ಪ್ರಭಾವಶಾಲಿ. ಒಬ್ಬರು ನಿಯಂತ್ರಣಕ್ಕೆ ಒಳಪಡಿಸಲು ಯತ್ನಿಸಿದರೆ, ಇನ್ನೊಬ್ಬರು ನಾಶಕ್ಕೆ ಯತ್ನಿಸುತ್ತಾರೆ’’ ಎಂದು ರಾಜ್ ಬಿ. ಶೆಟ್ಟಿ ಹೇಳಿದ್ದಾರೆ. ಈ ಚಿತ್ರದ ಸಂಪೂರ್ಣ ಶೂಟಿಂಗ್ ಅನ್ನು ಮಂಗಳೂರಿನಲ್ಲಿ ನಡೆಸಲಾಗಿದೆ. ಭಾಷೆ ಹಾಗೂ ಸೆಟ್‌ಅಪ್ ಕಾರಣಕ್ಕೆ ಈ ಚಿತ್ರ ವಿಭಿನ್ನವಾಗಿದೆ. ಅಧಿಕಾರ ಹಾಗೂ ಸಂಬಂಧದ ಸಂಘರ್ಷಗಳು ಭೂಗತ ಜಗತ್ತಿನಲ್ಲಿ ಮಾತ್ರ ಸಂಭವಿಸುವುದಲ್ಲ. ಚಿತ್ರೋದ್ಯಮದಲ್ಲಿ ಲೇಖಕರು ಹಾಗೂ ನಿರ್ದೇಶಕರ ನಡುವೆ ಕೂಡ ಸಂಭವಿಸುತ್ತದೆ ಎಂದು ಚಿತ್ರದಲ್ಲಿ ಹೇಳಲು ಪ್ರಯತ್ನಿಸಿದ್ದೇನೆ ಅವರು ಹೇಳಿದ್ದಾರೆ.

 ರೋಮ್ಯಾಂಟಿಕ್ ಕಾಮಿಡಿ ‘ಒಂದು ಮೊಟ್ಟೆಯ ಕಥೆ’ಯ ಬಳಿಕ ಈ ಜಾನರ್ ಚಿತ್ರವನ್ನು ಯಾಕೆ ಆಯ್ಕೆ ಮಾಡಿದಿರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಜ್ ಬಿ. ಶೆಟ್ಟಿ, ‘‘ಸಿನೆಮಾ ಬರೆವಣಿಗೆ ಹಾಗೂ ನಿರ್ದೇಶನ ಎಲ್ಲವೂ ಸ್ವ ಶೋಧನೆ. ನಾನು ಈ ಪ್ರಕ್ರಿಯೆಯನ್ನು ಬಯಸುತ್ತೇನೆ. ಒಂದು ಮೊಟ್ಟೆಯ ಕಥೆ ಬಳಿಕ ನಾನು ಕಾಮಿಡಿ ಚಿತ್ರಕ್ಕೆ ಸ್ಕ್ರಿಪ್ಟ್ ಬರೆಯಲು ಆರಂಭಿಸಿದ್ದೆ. ಆದರೆ, ಈ ಹಿಂದೆ ಬರೆಯದೇ ಇರುವುದಕ್ಕಿಂತ ಭಿನ್ನವಾದ ಸ್ಕ್ರಿಪ್ಟ್ ಅನ್ನು ಬರೆಯಬೇಕು ಎಂದು ನಿರ್ಧರಿಸಿದ್ದೆ. ಆಗ ನನಗೆ ಈ ಐಡಿಯಾ ಹೊಳೆಯಿತು’’ ಎಂದಿದ್ದಾರೆ. ಗೆಳೆಯರು ಹಾಗೂ ನಿರ್ಮಾಪಕರಾದ ರವಿ ರೈ ಕಳಸ ಹಾಗೂ ವಚನ್ ಶೆಟ್ಟಿ ಈ ಚಿತ್ರ ನಿರ್ಮಿಸುತ್ತಿದ್ದಾರೆ. ‘ಲೈಟರ್ ಬುದ್ಧಾ ಫಿಲ್ಮ್ಸ್’ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಪ್ರವೀಣ್ ಶ್ರೀಯಾನ್ ಚಿತ್ರದ ಛಾಯಾಗ್ರಹಣ ಹಾಗೂ ಸಂಕಲನ ಮಾಡಿದ್ದಾರೆ. ಮಿಥುನ್ ಮುಕುಂದಾ ಸಂಗೀತ ನೀಡಿದ್ದಾರೆ. ಚಿತ್ರ ಈಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. 2020ರಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News