ತೇಜಸ್ ಪೈಲಟ್ ಕಂಗನಾ

Update: 2020-02-27 09:13 GMT

ಇತ್ತೀಚಿನ ವರ್ಷಗಳಲ್ಲಿ ಕಂಗನಾ ರಣಾವತ್ ಅಭಿನಯದ ಚಿತ್ರಗಳು ನಾಯಕಿ ಪ್ರಧಾನ ಕಥಾವಸ್ತುವನ್ನು ಹೊಂದುತ್ತಿರುತ್ತದೆಯೆಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಕಂಗನಾ ಅಭಿನಯದ ತಲೈವಿ ಜೂನ್‌ನಲ್ಲಿ ತೆರೆಕಾಣಲಿದೆ. ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರ ಜೀವನಕಥೆಯಾಧಾರಿತ ಈ ಚಿತ್ರವು ಈಗಾಗಲೇ ಭಾರೀ ಕುತೂಹಲವನ್ನು ಕೆರಳಿಸಿದೆ. ಇದೀಗ ಕಂಗನಾ ನಟಿಸುತ್ತಿರುವ ತೇಜಸ್ ಚಿತ್ರದ ಫಸ್ಟ್ ಲುಕ್ ಹೊರಬಿದ್ದಿದೆ. ಭಾರತೀಯ ವಾಯುಪಡೆಯ ಯುದ್ಧವಿಮಾನದ ಪೈಲಟ್ ಪೋಷಾಕಿನಲ್ಲಿ ಮಿಂಚುತ್ತಿರುವ ಕಂಗನಾರ ಈ ಫಸ್ಟ್ ಲುಕ್ ಈಗಾಗಲೇ ಇಂಟರ್‌ನೆಟ್‌ನಲ್ಲಿ ಟ್ರೆಂಡ್ ಸೃಷ್ಟಿಸಿದೆ.

   2016ರಲ್ಲಿ ಭಾರತೀಯ ವಾಯುಪಡೆ ಮೊತ್ತ ಮೊದಲ ಬಾರಿಗೆ ಮಹಿಳೆಯನ್ನು ಯುದ್ಧದ ಕರ್ತವ್ಯಗಳಿಗೆ ನಿಯೋಜಿಸಿತ್ತು. ಭಾರತೀಯ ರಕ್ಷಣಾ ಪಡೆಯ ಇತಿಹಾಸದಲ್ಲೇ ಅವಿಸ್ಮರಣವೀಯವೆನ್ನಬಹುದಾದ ಈ ವಿದ್ಯಮಾನದಿಂದ ಸ್ಫೂರ್ತಿ ಪಡೆದು ತೇಜಸ್ ಚಿತ್ರ ನಿರ್ಮಾಣವಾಗುತ್ತಿದೆ. ಫೈಟರ್ ಯುದ್ಧ ವಿಮಾನದ ಪೈಲಟ್ ಪಾತ್ರದಲ್ಲಿ ನಟಿಸುತ್ತಿರುವುದು ತನಗೆ ದೊರೆತ ಗೌರವವೆಂದು ಕಂಗನಾ ಹೇಳುತ್ತಾರೆ. ‘‘ ನಮ್ಮ ಸಮವಸ್ತ್ರಧಾರಿ ಧೀರ ಮಹಿಳೆಯರು ಮಾಡಿರುವ ಹಲವು ತ್ಯಾಗ, ಬಲಿದಾನಗಳನ್ನು ದೇಶವು ಗುರುತಿಸದೆ ಹೋಗಿದೆ. ದೇಶಕ್ಕಾಗಿ ತನ್ನ ಪ್ರಾಣವನ್ನೇ ಮುಡಿಪಾಗಿಟ್ಟ ವೀರ ವನಿತಾ ಪೈಲಟ್‌ನ ಪಾತ್ರದಲ್ಲಿ ಅಭಿನಯಿಸುತ್ತಿರುಂಜಿುದು ತನ್ನ ಸೌಭಾಗ್ಯವೆಂದು ಆಕೆ ಹೇಳಿಕೊಂಡಿದ್ದಾರೆ. ಈ ಚಿತ್ರವು ಇಂದಿನ ಯುವಜನತೆಯಲ್ಲಿ ದೇಶಭಕ್ತಿಯ ಭಾವನೆಯನ್ನು ಬೆಳಗಿಸುವುದೆಂಬ ಆಶಾವಾದ ಹೊಂದಿರುವುದಾಗಿ ಕಂಗನಾ ಹೇಳುತ್ತಾರೆ.

  ಬಾಲಿವುಡ್‌ನ ಖ್ಯಾತ ನಿರ್ಮಾಪಕ ರೊನಿ ಸ್ಕ್ರೂವಾಲಾ ಅವರು ಆರ್‌ಎಸ್‌ವಿಪಿ ಬ್ಯಾನರ್‌ನಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. 2018ರಲ್ಲಿ ತೆರೆಕಂಡ ಸೇನಾ ಕಾರ್ಯಾಚರಣೆಯ ಕಥಾವಸ್ತು ಹೊಂದಿರುವ ‘ಉರಿ- ದಿ ಸರ್ಜಿಕಲ್ ಸ್ಟ್ರೈಕ್’ ಚಿತ್ರಕ್ಕೂ ಸ್ಕ್ರೂವಾಲಾ ನಿರ್ಮಾಪಕರಾಗಿದ್ದರು. ತೇಜಸ್ ಚಿತ್ರವು ಭಾರತೀಯ ವಾಯುಪಡೆಯ ಧೀರ ಪೈಲಟ್‌ಗಳಿಗೆ ಸಮರ್ಪಿಸಲಾಗುವುದು ಎಂದು ರೊನಿ ಹೇಳುತ್ತಾರೆ.

 ಸರ್ವೇಶ್ ಮೆವಾರಾ ತೇಜಸ್ ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ನಿರ್ದೇಶಕರಾಗುತ್ತಿದ್ದಾರೆ. ಚಿತ್ರಕಥೆಯನ್ನು ಕೂಡಾ ಅವರೇ ಬರೆದಿದ್ದಾರೆ. ತೇಜಸ್ ಚಿತ್ರದ ಶೂಟಿಂಗ್ ಬೇಸಿಗೆಯಲ್ಲಿ ಬಿಡುಗಡೆಯಾಗಲಿದ್ದು, 2021ರ ಎಪ್ರಿಲ್‌ನಲ್ಲಿ ಬಿಡುಗಡೆಗೊಳ್ಳಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News