ಸಿಎಎ ವಿರೋಧಿ ಪೋಸ್ಟ್ ಮಾಡಿದ್ದ ಬಾಂಗ್ಲಾ ವಿದ್ಯಾರ್ಥಿನಿಗೆ ದೇಶ ಬಿಟ್ಟು ತೆರಳಲು ಸೂಚನೆ

Update: 2020-02-27 14:03 GMT
ಸಾಂದರ್ಭಿಕ ಚಿತ್ರ

ಕೋಲ್ಕತಾ, ಫೆ.27: ಕಾಲೇಜು ಕ್ಯಾಂಪಸ್‌ನಲ್ಲಿ ನಡೆದಿದ್ದ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆಯ ಫೋಟೋವನ್ನು ತನ್ನ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದ ಹಿನ್ನೆಲೆಯಲ್ಲಿ, ಪ.ಬಂಗಾಳದ ವಿಶ್ವಭಾರತಿ ವಿವಿಯಲ್ಲಿ ಅಧ್ಯಯನ ನಡೆಸುತ್ತಿರುವ ಬಾಂಗ್ಲಾದೇಶದ ವಿದ್ಯಾರ್ಥಿನಿಗೆ ದೇಶ ಬಿಟ್ಟು ತೆರಳಲು ಸೂಚಿಸಲಾಗಿದೆ ಎಂದು ವರದಿಯಾಗಿದೆ.

 ವಿವಿಯ ಪ್ರಥಮ ವರ್ಷದ ಪದವಿ ವಿದ್ಯಾರ್ಥಿನಿ ಅಫ್ಸಾರಾ ಅನೀಕಾ ಮೀಮ್ ದೇಶ ವಿರೋಧಿ ಕೃತ್ಯದಲ್ಲಿ ಪಾಲ್ಗೊಂಡಿದ್ದಾಳೆ ಎಂದು ಆರೋಪಿಸಿ ದೇಶ ಬಿಟ್ಟು ತೆರಳಲು ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ ತಾನು ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿರಲಿಲ್ಲ. ಕುತೂಹಲದಿಂದ ಪ್ರತಿಭಟನೆಯ ಕೆಲವು ಫೋಟೊಗಳನ್ನು ತನ್ನ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದೆ. ಇದಕ್ಕೆ ಹಲವರು ಟ್ರೋಲ್ ಮಾಡಿದ ಹಿನ್ನೆಲೆಯಲ್ಲಿ ಫೇಸ್‌ಬುಕ್‌ನಲ್ಲಿದ್ದ ಫೋಟೋಗಳನ್ನು ಅಳಿಸಿ ಹಾಕಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾಳೆ. ಡಿಸೆಂಬರ್‌ನಲ್ಲಿ ವಿಶ್ವಭಾರತಿ ವಿವಿಯಲ್ಲಿ ನಡೆದಿದ್ದ ಹಲವು ಪ್ರತಿಭಟನೆಗಳ ಫೋಟೊವನ್ನು ವಿದ್ಯಾರ್ಥಿನಿ ತನ್ನ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಳು. ಇದಕ್ಕೆ ಹಲವರಿಂದ ಆಕ್ಷೇಪ ವ್ಯಕ್ತವಾಗಿದ್ದು ಈಕೆಯನ್ನು ದೇಶವಿರೋಧಿ ಎಂದು ಉಲ್ಲೇಖಿಸಿ ಸಾಮಾಜಿಕ ಮಾಧ್ಯಮದಲ್ಲಿ ಸುಮಾರು 250ಕ್ಕೂ ಹೆಚ್ಚು ಮಂದಿ ಒತ್ತಾಯಿಸಿದ್ದರು. ವಿದೇಶ ವ್ಯವಹಾರ ಸಚಿವಾಲಯದ ಅಧೀನದಲ್ಲಿರುವ ‘ವಿದೇಶೀಯರ ಪ್ರಾದೇಶಿಕ ನೋಂದಣಿ ಕಚೇರಿ’(ಎಫ್‌ಆರ್‌ಆರ್‌ಒ)ಯ ಅಧಿಕಾರಿಗಳನ್ನು ಐದು ದಿನ ಬಿಟ್ಟು ಭೇಟಿ ಮಾಡುವಂತೆ ಫೆ.14ರಂದು ವಿದ್ಯಾರ್ಥಿನಿಗೆ ಇ-ಮೇಲ್ ಮೂಲಕ ಸೂಚಿಸಲಾಗಿದೆ. ಮತ್ತೊಂದು ಇ-ಮೇಲ್‌ನಲ್ಲಿ ಎಫ್‌ಆರ್‌ಆರ್‌ಒ ಅಧಿಕಾರಿಗಳನ್ನು ಫೆ.24ರಂದು ಭೇಟಿ ಮಾಡುವಂತೆ ಸೂಚಿಸಲಾಗಿದೆ. ಆದರೆ ಈ ಎರಡೂ ಇ-ಮೇಲ್‌ಗಳನ್ನು ತಾನು ಗಮನಿಸಿಲ್ಲ. ಈ ಮಧ್ಯೆ ಬುಧವಾರ (ಫೆ.26ರಂದು) ತನಗೆ ಕಳಿಸಿರುವ ಆದೇಶದಲ್ಲಿ 15 ದಿನದೊಳಗೆ ದೇಶಬಿಟ್ಟು ತೆರಳಲು ಸೂಚಿಸಲಾಗಿದೆ. ಈಗ ತನ್ನ ಭವಿಷ್ಯದ ಬಗ್ಗೆ ಆತಂಕಿತಳಾಗಿದ್ದೇನೆ ಎಂದು ಆಕೆ ತಿಳಿಸಿದ್ದಾಳೆ.

ವಿದ್ಯಾರ್ಥಿ ವೀಸಾದ ಮೇಲೆ ಭಾರತಕ್ಕೆ ಬಂದಿದ್ದ ವಿದ್ಯಾರ್ಥಿನಿ ವೀಸಾದ ಷರತ್ತನ್ನು ಮೀರಿ ದೇಶದ್ರೋಹ ಚಟುವಟಿಕೆಯಲ್ಲಿ ಶಾಮೀಲಾಗಿದ್ದಾಳೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇದೀಗ ಎಫ್‌ಆರ್‌ಆರ್‌ಒ ಅಧಿಕಾರಿಗಳನ್ನು ಭೇಟಿಯಾಗಿ ಆದೇಶ ಮರುಪರಿಶೀಲಿಸುವಂತೆ ಕೋರಲಾಗುವುದು ಎಂದು ವಿದ್ಯಾರ್ಥಿನಿ ಮತ್ತವಳ ಸ್ನೇಹಿತರು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News