ವಾಟ್ಸ್ ಆ್ಯಪ್ ಬಳಸಿ ಉತ್ತರ ಪ್ರದೇಶದಿಂದ ಗೂಂಡಾಗಳನ್ನು ಕರೆಸಲಾಗಿತ್ತು: ದಿಲ್ಲಿ ಪೊಲೀಸ್ ಮೂಲಗಳು

Update: 2020-02-27 14:38 GMT

ಹೊಸದಿಲ್ಲಿ,ಫೆ.27: ಗುರುವಾರ ವಿಹಾರ-ಜೊಹ್ರಿಪುರ ಪ್ರದೇಶದಲ್ಲಿಯ ಚರಂಡಿ ಯೊಂದರಲ್ಲಿ ಎರಡು ಶವಗಳು ಪತ್ತೆಯಾಗುವುದರೊಂದಿಗೆ ಸಿಎಎ ಕುರಿತು ರವಿವಾರದಿಂದಲೂ ಈಶಾನ್ಯ ದಿಲ್ಲಿಯಲ್ಲಿ ನಿರಂತರವಾಗಿ ನಡೆದ ಬರ್ಬರ ಹಿಂಸಾಚಾರದಲ್ಲಿ ಸತ್ತವರ ಸಂಖ್ಯೆ 35ಕ್ಕೇರಿದ್ದು,200ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಈವರೆಗೆ 130 ಜನರನ್ನು ಬಂಧಿಸಲಾಗಿದೆ.

 ಉತ್ತರ ಪ್ರದೇಶದಿಂದ ಗೂಂಡಾಗಳನ್ನು ಕರೆಸಲು ಮತ್ತು ದಾಳಿ ನಡೆಸಬೇಕಿದ್ದ ಪ್ರದೇಶಗಳನ್ನು ಗುರುತಿಸಲು ವಾಟ್ಸ್‌ಆ್ಯಪ್ ಬಳಕೆಯಾಗಿದ್ದು,ಆರೋಪಿಗಳ ಬಳಿಯಿಂದ 50ಕ್ಕೂ ಅಧಿಕ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ದಿಲ್ಲಿ ಪೊಲೀಸ್ ಮೂಲಗಳು ತಿಳಿಸಿವೆ.

ಗುರುವಾರ ಹಿಂಸಾಚಾರದ ಬಿಡಿ ಘಟನೆಗಳ ವರದಿಗಳ ನಡುವೆಯೇ ನೂರಾರು ಸಂಖ್ಯೆಯಲ್ಲಿ ಪೊಲೀಸರು ಮತ್ತು ಅರೆಸೇನಾ ಪಡೆ ಸಿಬ್ಬಂದಿಗಳು ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದಾರೆ. ಬುಧವಾರ ತಡರಾತ್ರಿ ದಿಲ್ಲಿಯ ಭಜನಪುರ,ವೌಜಪುರ ಮತ್ತು ಕರಾವಲ್ ನಗರಗಳಲ್ಲಿ ಬೆಂಕಿ ಹಚ್ಚಿದ ಘಟನೆಗಳು ಮತ್ತು ಅಶಾಂತಿ ಸೃಷ್ಟಿಯಾಗಿದ್ದು ವರದಿಯಾಗಿದೆ.

ಈಶಾನ್ಯ ದಿಲ್ಲಿ ಹಿಂಸಾಚಾರ ಕುರಿತು ಬುಧವಾರ ತನ್ನ ಮೊದಲ ಬಹಿರಂಗ ಹೇಳಿಕೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಶಾಂತಿ ಮತ್ತು ಭ್ರಾತೃತ್ವಕ್ಕೆ ಕರೆ ನೀಡಿದ್ದರು.

ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು 18 ಎಫ್‌ಐಆರ್‌ಗಳನ್ನು ದಾಖಲಿಸಿಕೊಂಡಿದ್ದು,ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ ಎಂದು ಹೇಳಿದ್ದಾರೆ.

 ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ನೇತೃತ್ವದಲ್ಲಿ ಪಕ್ಷದ ನಿಯೋಗವು ಗುರುವಾರ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಭೇಟಿಯಾಗಿ ಅಹವಾಲೊಂದನ್ನು ಸಲ್ಲಿಸಿದೆ. ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸೋನಿಯಾ,ಕೇಂದ್ರ ಮತ್ತು ದಿಲ್ಲಿ ಸರಕಾರ ಹಿಂಸಾಚಾರಕ್ಕೆ ಮೂಕ ಪ್ರೇಕ್ಷಕರಾಗಿದ್ದಾರೆ ಎಂದು ಆರೋಪಿಸಿದರು. ಬುಧವಾರ ಕೇಂದ್ರ ಗೃಹಸಚಿವ ಅಮಿತ್ ಶಾ ವಿರುದ್ಧ ತೀವ್ರ ದಾಳಿ ನಡೆಸಿದ್ದ ಸೋನಿಯಾ, ಹಿಂಸಾಚಾರದ ಹೊಣೆ ಹೊತ್ತುಕೊಂಡು ಹುದ್ದೆಗೆ ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದರು.

ತನ್ಮಧ್ಯೆ ಬಿಜೆಪಿ ನಾಯಕರ ದ್ವೇಷಭಾಷಣಗಳ ವೀಡಿಯೊಗಳನ್ನು ತಾವು ವೀಕ್ಷಿಸಿಲ್ಲ ಎಂದು ಹೇಳಿದ್ದ ಪೊಲೀಸರನ್ನು ಬುಧವಾರ ತೀವ್ರ ತರಾಟೆಗೆತ್ತಿಕೊಂಡಿದ್ದ ದಿಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ನ್ಯಾ.ಎಸ್.ಮುರಳಿಧರ ಅವರನ್ನು ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ. ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂ ಫೆ.12ರಂದು ಮಾಡಿದ್ದ ಶಿಫಾರಸನ್ನು ಆಧರಿಸಿ ಬುಧವಾರ ರಾತ್ರಿಯೇ ಮುರಳೀಧರ ವರ್ಗಾವಣೆಯ ಅಧಿಸೂಚನೆಯನ್ನು ಹೊರಡಿಸಲಾಗಿದೆ.

ದಿಲ್ಲಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಮರುಸ್ಥಾಪನೆಯ ಹೊಣೆಗಾರಿಕೆ ವಹಿಸಲ್ಪಟ್ಟಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಬುಧವಾರ ಸಂಜೆ ಹಿಂಸಾಗ್ರಸ್ತ ಪ್ರದೇಶಗಳಿಗೆ ಎರಡನೆಯ ಬಾರಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪುನರ್‌ಪರಿಶೀಲಿಸಿದ್ದರು. ದಿಲ್ಲಿ ಪೊಲೀಸರು ಶಾ ಅವರ ನೇರ ನಿಯಂತ್ರಣದಲ್ಲಿರುವ ಹಿನ್ನೆಲೆಯಲ್ಲಿ ದೋವಲ್ ಅವರಿಗೆ ಈ ಹೊಣೆಯನ್ನು ವಹಿಸಿರುವುದು ಅನೇಕರ ಹುಬ್ಬುಗಳನ್ನು ಮೇಲಕ್ಕೆರಿಸಿದೆ.

ಹಿಂಸಾಚಾರವನ್ನು ನಿಯಂತ್ರಿಸುವಲ್ಲಿ ವೈಫಲ್ಯಕ್ಕಾಗಿ ವ್ಯಾಪಕ ಟೀಕೆಗೆ ಗುರಿಯಾಗಿರುವ ಶಾ ಹಲವಾರು ಪುನರ್‌ಪರಿಶೀಲನಾ ಸಭೆಗಳನ್ನು ನಡೆಸಿದ್ದಾರೆ. ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರೂ ಬುಧವಾರ ಶಾಂತಿಯ ಮರುಸ್ಥಾಪನೆಗೆ ಕರೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News