ದ್ವೇಷ ಭಾಷಣಗಳ ಕುರಿತು ಎಫ್‌ಐಆರ್ ದಾಖಲಿಸಲು ಪರಿಸ್ಥಿತಿಯು ಪೂರಕವಾಗಿಲ್ಲ: ಕೇಂದ್ರದ ನಿವೇದನೆ

Update: 2020-02-27 14:44 GMT

ಹೊಸದಿಲ್ಲಿ,ಫೆ.27: ದಿಲ್ಲಿ ಹಿಂಸಾಚಾರ ಕುರಿತು ವಿಚಾರಣೆ ಮತ್ತು ಹಿಂಸೆಯನ್ನು ಪ್ರಚೋದಿಸಿದ್ದ ರಾಜಕಾರಣಿಗಳ ವಿರುದ್ಧ ಕ್ರಮಕ್ಕೆ ಕೋರಿ ಸಾಮಾಜಿಕ ಹೋರಾಟಗಾರ ಹರ್ಷ ಮಂದರ್ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಗುರುವಾರ ದಿಲ್ಲಿ ಉಚ್ಚ ನ್ಯಾಯಾಲಯವು ಎ.13ಕ್ಕೆ ಮುಂದೂಡಿದೆ.

ಎಫ್‌ಐಆರ್ ದಾಖಲಿಸಲು ಪರಿಸ್ಥಿತಿಯು ಪೂರಕವಾಗಿಲ್ಲ ಎಂಬ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರ ನಿವೇದನೆಯನ್ನು ಒಪ್ಪಿಕೊಂಡ ಮುಖ್ಯ ನ್ಯಾಯಾಧೀಶ ಡಿ.ಎನ್.ಪಟೇಲ್ ಮತ್ತು ನ್ಯಾ.ಸಿ.ಹರಿಶಂಕರ ಅವರ ಪೀಠವು, ಪ್ರಕರಣದಲ್ಲಿ ಪ್ರತಿ ಅಫಿಡವಿಟ್ ಸಲ್ಲಿಸಲು ಕೇಂದ್ರಕ್ಕೆ ಮೂರು ವಾರಗಳ ಕಾಲಾವಕಾಶವನ್ನು ಮಂಜೂರು ಮಾಡಿತು.

ಪ್ರಚೋದನಾಕಾರಿ ಭಾಷಣಗಳನ್ನು ಮಾಡಿದ ಆರೋಪದಲ್ಲಿ ಬಿಜೆಪಿ ನಾಯಕರಾದ ಅನುರಾಗ ಠಾಕೂರ್,ಪ್ರವೇಶ ವರ್ಮಾ,ಕಪಿಲ ಮಿಶ್ರಾ ಮತ್ತು ಅಭಯ ವರ್ಮಾ ಸೇರಿದಂತೆ,ಆದರೆ ಅವರಿಗೆ ಮಾತ್ರ ಸೀಮಿತವಾಗದಂತೆ,ರಾಜಕಾರಣಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವುದಕ್ಕೆ ಸಂಬಂಧಿಸಿದಂತೆ ಗುರುವಾರದೊಳಗೆ ನಿರ್ಧಾರವೊಂದನ್ನು ತೆಗೆದುಕೊಳ್ಳುವಂತೆ ನ್ಯಾಯಮೂರ್ತಿಗಳಾದ ಎಸ್.ಮುರಳಿಧರ ಮತ್ತು ತಲ್ವಂತ್ ಸಿಂಗ್ ಅವರನ್ನೊಳಗೊಂಡ ಪೀಠವು ಬುಧವಾರ ದಿಲ್ಲಿ ಪೊಲೀಸ್ ಆಯುಕ್ತರಿಗೆ ನಿರ್ದೇಶ ನೀಡಿತ್ತು.

ಗುರುವಾರ ದಿಲ್ಲಿ ಪೊಲೀಸರ ಪರವಾಗಿ ಹಾಜರಾಗಿದ್ದ ಮೆಹ್ತಾ,ಅರ್ಜಿದಾರರು ಬಿಜೆಪಿ ನಾಯಕರು ಮಾಡಿದ್ದಾರೆನ್ನಲಾಗಿರುವ ಕೆಲವು ಭಾಷಣಗಳ ವಿರುದ್ಧ ಕ್ರಮಕ್ಕೆ ಆಯ್ಕೆಯ ಮೇರೆಗೆ ಕೋರಿದ್ದಾರೆ ಎಂದು ಹೇಳಿದರು.

ಮಂದರ್ ಪರ ವಕೀಲ ಕಾಲಿನ್ ಗೊನ್ಸಾಲ್ವಿಸ್ ಅವರು ದ್ವೇಷಭಾಷಣಕ್ಕಾಗಿ ರಾಜಕಾರಣಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ನಿರ್ದೇಶಗಳನ್ನು ಹೊರಡಿಸುವಂತೆ ನ್ಯಾಯಾಲಯವನ್ನು ಆಗ್ರಹಿಸಿದರು. ಆಡಳಿತ ಪಕ್ಷದ ಉನ್ನತ ನಾಯಕರೇ ಇಂಥ ದ್ವೇಷ ಭಾಷಣಗಳನ್ನು ಮಾಡಿದರೆ ಸಾಮಾನ್ಯ ಜನರಿಂದ ನಾವೇನನ್ನು ನಿರೀಕ್ಷಿಸಬಹುದು ಎಂದು ಪ್ರಶ್ನಿಸಿದ ಅವರು,ದ್ವೇಷ ಭಾಷಣಗಳನ್ನು ಮಾಡುವ ಯಾರನ್ನೂ ಬಿಡುವುದಿಲ್ಲ ಎಂಬ ಸಂದೇಶವನ್ನು ನ್ಯಾಯಾಲಯವು ರವಾನಿಸುವ ಅಗತ್ಯವಿದೆ ಎಂದರು.

ಸೋನಿಯಾ ಗಾಂಧಿ,ರಾಹುಲ್ ಗಾಂಧಿ,ಅಸದುದ್ದೀನ್ ಉವೈಸಿ ಮತ್ತಿತರರ ವಿರುದ್ಧ ದ್ವೇಷಭಾಷಣದ ಆರೋಪದಲ್ಲಿ ಎಫ್‌ಐಆರ್ ದಾಖಲಿಸುವಂತೆ ಕೋರಿ ಅರ್ಜಿ ಸಲ್ಲಿಸಿರುವ ‘ಲಾಯರ್ಸ್ ವಾಯಿಸ್’ ಪರ ವಕೀಲ ಚೇತನ ಶರ್ಮಾ ಅವರು, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತ ಭೇಟಿಯ ಸಂದರ್ಭದಲ್ಲಿ ನಡೆದ ಹಿಂಸಾಚಾರವು ಪೂರ್ವಯೋಜಿತವಾಗಿತ್ತು ಎಂದು ಹೇಳಿದರು.

ಬುಧವಾರ ಪ್ರಕರಣದ ವಿಚಾರಣೆ ನಡೆಸಬೇಕಿದ್ದ ಮು.ನ್ಯಾ.ಪಟೇಲ್ ಅವರ ಗೈರುಹಾಜರಿಯ ಹಿನ್ನೆಲೆಯಲ್ಲಿ ಆಗ ಲಭ್ಯವಿದ್ದ ಹಿರಿಯ ನ್ಯಾಯಾಧೀಶ ಡಾ.ಎಸ್.ಮುರಳಿಧರ ನೇತೃತ್ವದ ಪೀಠವು ವಿಚಾರಣೆಯನ್ನು ನಡೆಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News