ದಿಲ್ಲಿ ಹಿಂಸಾಚಾರದಲ್ಲಿ ಹೊರಗಿನ ವ್ಯಕ್ತಿಗಳ ಕೈವಾಡ: ಸ್ಥಳೀಯರ ಹೇಳಿಕೆ

Update: 2020-02-27 14:58 GMT

ಹೊಸದಿಲ್ಲಿ, ಫೆ.27: ಈಶಾನ್ಯ ದಿಲ್ಲಿಯಲ್ಲಿ ನಡೆದ ಹಿಂಸಾಚಾರದ ಸಂದರ್ಭ ಮಸೀದಿ ಹಾಗೂ ದರ್ಗಾವನ್ನು ಧ್ವಂಸ ಮಾಡಿ ಬಳಿಕ ಬೆಂಕಿ ಹಚ್ಚಲಾಗಿದೆ. ಇಲ್ಲಿ ನಡೆದ ಹಿಂಸಾಚಾರದಲ್ಲಿ ಹೊರಗಿನ ವ್ಯಕ್ತಿಗಳ ಕೈವಾಡವಿದೆ ಎಂದು ಸ್ಥಳೀಯರು ಹೇಳಿದ್ದಾರೆ.

 ಈಶಾನ್ಯ ದಿಲ್ಲಿಯ ಅಶೋಕನಗರದಲ್ಲಿರುವ ಅತ್ಯಂತ ಪುರಾತನ ಮಸೀದಿ ಹಾಗೂ ಚಾಂದ್‌ ಬಾಗ್‌ನಲ್ಲಿರುವ ದರ್ಗಾಕ್ಕೆ ಬೆಂಕಿ ಹಚ್ಚಿರುವ ಮಾಹಿತಿ ನಮಗೆ ಸಾಮಾಜಿಕ ಮಾಧ್ಯಮಗಳಿಂದ ದೊರಕಿದೆ. ಇದು ಹೊರಗಿನಿಂದ ಬಂದಿರುವ ಕಿಡಿಗೇಡಿಗಳ ಕೃತ್ಯ ಎಂದು ಸ್ಥಳೀಯ ವ್ಯಕ್ತಿಯೊಬ್ಬರು ಹೇಳಿದ್ದಾರೆ.

ಎರಡೂ ಸಮುದಾಯದವರು ಭೇಟಿ ನೀಡುವ ಚಾಂದ್‌ಬಾಗ್‌ನಲ್ಲಿರುವ ದರ್ಗಾದಲ್ಲಿ ಚಾಂದ್‌ಪೀರ್ ಬಾಬರನ್ನು ಆರಾಧಿಸಲಾಗುತ್ತಿದ್ದು ಇಲ್ಲಿಗೆ ಬರುವವರಲ್ಲಿ ಹಿಂದುಗಳ ಸಂಖ್ಯೆ ಹೆಚ್ಚಾಗಿದೆ. ಚಾಂದ್‌ಬಾಗ್ ಜನಸಂಖ್ಯೆಯ 70% ಮುಸ್ಲಿಮರಾಗಿದ್ದರೆ ಇದರ ಎದುರುಗಡೆ ಇರುವ ಭಜನ್‌ಪುರದ ಜನಸಂಖ್ಯೆಯ 80% ಹಿಂದುಗಳು. ವ್ಯಾನ್‌ನಲ್ಲಿ ಆಗಮಿಸಿದ ಮುಖಕ್ಕೆ ಮಾಸ್ಕ್ ಧರಿಸಿದ್ದ ಕಿಡಿಗೇಡಿಗಳು ಎರಡು ತಂಡಗಳಾಗಿ ಎರಡೂ ಪ್ರದೇಶಗಳಿಗೆ ನುಗ್ಗಿ ವಿಧ್ವಂಸಕ ಕೃತ್ಯ ನಡೆಸಿದ್ದಾರೆ . ಇದೀಗ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು , ಮೆಡಿಕಲ್ ಶಾಪ್, ಹಾಲು , ತರಕಾರಿಯ ಅಂಗಡಿಗಳು ಧ್ವಂಸಗೊಂಡ ಹಿನ್ನೆಲೆಯಲ್ಲಿ ಎರಡೂ ಪ್ರದೇಶದ ಜನತೆಯ ಬದುಕು ಅಸಹನೀಯವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News