ಸರ್ದಾರ್ ಪಟೇಲರು ಎರಡು ಬಾರಿ ಆರೆಸ್ಸೆಸ್ಸನ್ನು ನಿಷೇಧಿಸಿದ್ದರು: ಶಿವಸೇನೆ

Update: 2020-02-27 15:22 GMT

 ಮುಂಬೈ, ಫೆ.27: ಸಾವರ್ಕರ್ ಬಗ್ಗೆ ಬಿಜೆಪಿ ಮತ್ತು ಆರೆಸ್ಸೆಸ್ ನಕಲಿ ಪ್ರೀತಿ ತೋರಿಸುತ್ತಿದೆ ಎಂದು ಟೀಕಿಸಿರುವ ಶಿವಸೇನೆ, ರಾಜ್ಯದಲ್ಲಿ ಅಧಿಕಾರದಲ್ಲಿರುವ ಮಹಾ ವಿಕಾಸ ಅಘಾಡಿ ಮೈತ್ರಿಕೂಟದಲ್ಲಿ ಒಡಕು ಮೂಡಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದೆ.

ಗುರುವಾರ ಪಕ್ಷದ ಮುಖವಾಣಿ ‘ಸಾಮ್ನಾ’ದಲ್ಲಿ ಪ್ರಕಟವಾದ ಲೇಖನದಲ್ಲಿ ಆರೆಸ್ಸೆಸ್ ವಿರುದ್ಧ ಟೀಕಾಪ್ರಹಾರ ನಡೆಸಿರುವ ಶಿವಸೇನೆ, “ಆರೆಸ್ಸೆಸ್ ಎಲ್ಲಿತ್ತು ? ಸರ್ದಾರ್ ಪಟೇಲರು ಎರಡು ಬಾರಿ ಆರೆಸ್ಸೆಸ್ ಅನ್ನು ನಿಷೇಧಿಸಿದ್ದರು. ಭಾರತಕ್ಕೆ ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲೂ ಆರೆಸ್ಸೆಸ್‌ನ ಕೇಂದ್ರ ಕಚೇರಿಯಲ್ಲಿ ರಾಷ್ಟ್ರಧ್ವಜಾರೋಹಣ ನಡೆಸಿರಲಿಲ್ಲ” ಎಂದು ಟೀಕಿಸಲಾಗಿದೆ.

“ರಾಷ್ಟ್ರಧ್ವಜಾರೋಹಣ ನಡೆಸದವರನ್ನು ದೇಶವಿರೋಧಿ ಎಂದು ಕರೆಯಲಾಗುತ್ತದೆ. ಹಾಗಿದ್ದರೆ ಆರೆಸ್ಸೆಸ್ ಅನ್ನು ಏನೆಂದು ಕರೆಯಬೇಕು. ಬಿಜೆಪಿಯು ಸಾವರ್ಕರ್ ‌ರನ್ನು ಗುರಾಣಿಯಂತೆ ಬಳಸುತ್ತಿದೆ. ಶಿವಸೇನೆಗೆ ರಾಷ್ಟ್ರಧ್ವಜದ ಮೇಲೆ ವಿಶ್ವಾಸವಿದೆ ಮತ್ತು ಅದರ ಮಹತ್ವದ ಬಗ್ಗೆಯೂ ತಿಳಿದಿದೆ. ನಾವು ರಾಷ್ಟ್ರಧ್ವಜ ಮತ್ತು ಕೇಸರಿ ಧ್ವಜ ಎರಡನ್ನೂ ಹಾರಿಸುತ್ತೇವೆ” ಎಂದು ಶಿವಸೇನೆ ಹೇಳಿದೆ.

ರಾಜ್ಯ ವಿಧಾನಸಭೆ ಅಧಿವೇಶನ ಸಂದರ್ಭ ಸಾವರ್ಕರ್‌ಗೆ ಗೌರವ ಸಲ್ಲಿಸಬೇಕು ಎಂಬ ಬಿಜೆಪಿಯ ಆಗ್ರಹದ ಬಗ್ಗೆ ಉಲ್ಲೇಖಿಸಿರುವ ಶಿವಸೇನಾ ಮುಖಂಡ ಆದಿತ್ಯ ಠಾಕ್ರೆ, ಬಿಜೆಪಿ ಕಳೆದ 5 ವರ್ಷ ರಾಜ್ಯದಲ್ಲಿ ಅಧಿಕಾರದಲ್ಲಿತ್ತು. ಆಗ ಈ ವಿಷಯ ನೆನಪಾಗಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಸಾವರ್ಕರ್‌ಗೆ ಗೌರವ ಸಲ್ಲಿಸುವ ವಿಷಯದಲ್ಲಿ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಎರಡು ಬಾರಿ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದರು. ಆದರೆ ಕಳೆದ ಮೂರು ವರ್ಷಗಳಿಂದಲೂ ಇದಕ್ಕೆ ಕೇಂದ್ರ ಸರಕಾರದ ಪ್ರತ್ರಿಕ್ರಿಯೆ ಬಂದಿಲ್ಲ. ಇದು ಸಾವರ್ಕರ್ ಬಗ್ಗೆ ಬಿಜೆಪಿಗೆ ಇರುವ ಪ್ರೀತಿಯನ್ನು ತೋರಿಸುತ್ತದೆ. ಕೇಂದ್ರ ಸರಕಾರ ಸಾವರ್ಕರ್‌ಗೆ ಭಾರತ ರತ್ನ ಪ್ರಶಸ್ತಿ ನೀಡಲಿ, ಆಗ ನಾವು ಸಾವರ್ಕರ್‌ಗೆ ಗೌರವ ಸಲ್ಲಿಸುವ ಕುರಿತ ನಿರ್ಣಯವನ್ನು ಖಂಡಿತವಾಗಿಯೂ ಮಂಡಿಸುತ್ತೇವೆ ಎಂದು ಠಾಕ್ರೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News