ಗಾಲಿ ಕುರ್ಚಿಯಲ್ಲಿ ಕೋರ್ಟ್ ಗೆ ಬಂದ ಸಿಎಎ ವಿರೋಧಿ ಹೋರಾಟಗಾರ: ಪೊಲೀಸರಿಂದ ಚಿತ್ರಹಿಂಸೆ ಆರೋಪ

Update: 2020-02-27 16:25 GMT
ಫೈಲ್ ಚಿತ್ರ

ಹೊಸದಿಲ್ಲಿ, ಫೆ.27: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ದಿಲ್ಲಿಯ ಖುರೇಜಿ ಖಾಸ್ ಪ್ರದೇಶದಲ್ಲಿ ನಡೆದ ಪ್ರತಿಭಟನೆ ಸಂದರ್ಭ ಬಂಧಿತರಾದ ಇಬ್ಬರು ಕಾರ್ಯಕರ್ತರಿಗೆ ಪೊಲೀಸ್ ಕಸ್ಟಡಿಯಲ್ಲಿ ದೈಹಿಕ ಚಿತ್ರಹಿಂಸೆ ನೀಡಲಾಗಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

ಖುರೇಜಿ ಖಾಸ್ ಪ್ರದೇಶದಲ್ಲಿ ಜನವರಿ 13ರಿಂದ ನಡೆಯುತ್ತಿರುವ ಪ್ರತಿಭಟನೆಯ ಮುಂಚೂಣಿಯಲ್ಲಿರುವ ಇಶ್ರತ್ ಜಹಾನ್ ಮತ್ತು ಖಾಲಿದ್ ಸೈಫ್‌ರನ್ನು ಬುಧವಾರ(ಫೆ.26ರಂದು) ಬಂಧಿಸಿ ನ್ಯಾಯಾಂಗ ಬಂಧನಲ್ಲಿಡಲಾಗಿದೆ. ನ್ಯಾಯವಾದಿಯಾಗಿರುವ ಇಶ್ರತ್ ಜಹಾನ್ ಈ ಹಿಂದೆ ಕಾಂಗ್ರೆಸ್ ಪಕ್ಷದಿಂದ ಕೌನ್ಸಿಲರ್ ಆಗಿ ಆಯ್ಕೆಯಾಗಿದ್ದರು. ಉದ್ಯಮಿಯಾಗಿರುವ ಸೈಫ್ ‘ಯುನೈಟೆಡ್ ಅಗೈನ್ಸ್ಟ್ ಹೇಟ್’ ಎಂಬ ಸಮಾಜಸೇವಾ ಸಂಸ್ಥೆಯ ಕಾರ್ಯಕರ್ತರಾಗಿದ್ದಾರೆ. ಇಬ್ಬರ ವಿರುದ್ಧವೂ ದೊಂಬಿ, ಪೊಲೀಸ್ ಸಿಬ್ಬಂದಿಯ ಕೊಲೆ ಯತ್ನ, ಪಿಸ್ತೂಲ್ ಬಳಸಿರುವ ಪ್ರಕರಣ ದಾಖಲಿಸಲಾಗಿದೆ. ಇವರೊಂದಿಗೆ ಸಾಬು ಅನ್ಸಾರಿ ಎಂಬ ಕಾರ್ಯಕರ್ತನನ್ನೂ ಬಂಧಿಸಲಾಗಿದ್ದು ಇವರನ್ನು ಮಂಡೋಲಿ ಜೈಲಿನಲ್ಲಿ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

 ಕೋರ್ಟ್‌ಗೆ ಹಾಜರುಪಡಿಸಿದಾಗ ಸೈಫ್ ಗಾಲಿಕುರ್ಚಿಯಲ್ಲಿ ಆಗಮಿಸಿದ್ದು ಅವರು ನಡೆಯುವ ಸ್ಥಿತಿಯಲ್ಲಿರಲಿಲ್ಲ ಮತ್ತು ಕೈಗೆ ಬ್ಯಾಂಡೇಜ್ ಹಾಕಲಾಗಿತ್ತು. ಇಶ್ರತ್ ಜಹಾನ್‌ರ ಕೈಗೂ ಬ್ಯಾಂಡೇಜ್ ಹಾಕಲಾಗಿದೆ. ತಮ್ಮ ಮೇಲೆ ಠಾಣೆಯಲ್ಲಿ ಚಿತ್ರಹಿಂಸೆ ನೀಡಿರುವುದಾಗಿ ಇಬ್ಬರೂ ತಿಳಿಸಿದ್ದಾರೆ ಎಂದು ಕುಟುಂಬದ ಸದಸ್ಯರು ಹೇಳಿದ್ದಾರೆ. ಪೊಲೀಸರು ಎಫ್‌ಐಆರ್‌ನಲ್ಲಿ ಸುಳ್ಳು ಆರೋಪ ಹೊರಿಸಿದ್ದಾರೆ ಎಂದು ಸುದ್ಧಿಸಂಸ್ಥೆಯೊಂದು ವರದಿ ಮಾಡಿದೆ.

 ಫೆ.26ರಂದು ಖುರೇಜಿ ಖಾಸ್ ಪ್ರದೇಶದಲ್ಲಿ ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭ ಅಲ್ಲಿ ಗುಂಡಿನ ಸದ್ದು ಕೇಳಿಬಂದಿದೆ. ತಕ್ಷಣ ಅಲ್ಲಿಗೆ ಧಾವಿಸಿದ ಪೊಲೀಸರು ಅಲ್ಲಿಂದ ತೆರಳುವಂತೆ ಪ್ರತಿಭಟನಾಕಾರರಿಗೆ ಮನವಿ ಮಾಡಿಕೊಂಡರು. ಆದರೆ ಅಲ್ಲಿಂದ ತೆರಳಬೇಡಿ ಎಂದು ಪ್ರತಿಭಟನಾಕಾರರಿಗೆ ತಿಳಿಸಿದ ಇಶ್ರತ್ ಜಹಾನ್, ಯಾವುದೇ ಬೆಲೆ ತೆತ್ತಾದರೂ ಆಝಾದಿಯನ್ನು ಉಳಿಸಿಕೊಳ್ಳುತ್ತೇವೆ. ಪೊಲೀಸರು ಏನು ಬೇಕಾದರೂ ಮಾಡಲಿ ಎಂದು ಘೋಷಣೆ ಕೂಗಿದರು. ಖಾಲಿದ್ ಸೈಫ್ ಪೊಲೀಸರತ್ತ ಕಲ್ಲೆಸೆಯುವಂತೆ ಪ್ರಚೋದನೆ ನೀಡಿದರು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿರುವುದಾಗಿ ಸುದ್ಧಿ ಸಂಸ್ಥೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News