ಪ್ರಜೆಗಳನ್ನು ರಕ್ಷಿಸಲು ಭಾರತ ವಿಫಲ: ಯುಎಸ್‌ಸಿಐಆರ್‌ಎಫ್

Update: 2020-02-27 17:19 GMT

ವಾಷಿಂಗ್ಟನ್, ಫೆ. 27: ದಿಲ್ಲಿ ಹಿಂಸಾಚಾರದ ಬಗ್ಗೆ ‘ಯುನೈಟೆಡ್ ಸ್ಟೇಟ್ಸ್ ಕಮಿಷನ್ ಆನ್ ಇಂಟರ್‌ನ್ಯಾಷನಲ್ ರಿಲೀಜಿಯಸ್ ಫ್ರೀಡಂ’ (ಯುಎಸ್‌ಸಿಐಆರ್‌ಎಫ್) ಬುಧವಾರ ತನ್ನ ಹೇಳಿಕೆಯಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತಕ್ಕೆ ಭೇಟಿ ನೀಡಿದ ಸಂದರ್ಭ ಈಶಾನ್ಯ ದಿಲ್ಲಿಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಪು ದಾಳಿ ನಡೆಸಿದ ಘಟನೆ ವರದಿಯಾಗಿದೆ ಎಂದು ಹೇಳಿಕೆ ತಿಳಿಸಿದೆ. ವರದಿಗಳ ಪ್ರಕಾರ ಹಲವು ಮಸೀದಿಗಳಲ್ಲಿ ದಾಂಧಲೆ ನಡೆಸಲಾಗಿದೆ. ದಾಳಿಕೋರರಿಗೆ ಬೆದರಿ ಈ ಪ್ರದೇಶದಿಂದ ಹಲವು ಮುಸ್ಲಿಂ ನಾಗರಿಕರು ಪರಾರಿಯಾಗಿದ್ದಾರೆ ಎಂದು ಅದು ತಿಳಿಸಿದೆ.

ದಿಲ್ಲಿಯಾದ್ಯಂತ ಹೆಚ್ಚುತ್ತಿರುವ ಕ್ರೂರ ಹಾಗೂ ಅನಿಯಂತ್ರಿತ ಹಿಂಸಾಚಾರ ಮುಂದುವರಿಯಬಾರದು. ತನ್ನ ಎಲ್ಲ ನಾಗರಿಕರಿಗೆ ಸಂರಕ್ಷಣೆ ನೀಡಲು ಕೇಂದ್ರ ಸರಕಾರ ಕ್ರಮ ತೆಗೆದುಕೊಳ್ಳಬೇಕು. ಮುಸ್ಲಿಮರ ಮೇಲಿನ ಹಿಂಸಾತ್ಮಕ ದಾಳಿಯ ಸಂದರ್ಭ ದಿಲ್ಲಿ ಪೊಲೀಸರು ಮಧ್ಯಪ್ರವೇಶಿಸುತ್ತಿಲ್ಲ ಹಾಗೂ ಸರಕಾರ ತನ್ನ ನಾಗರಿಕರನ್ನು ರಕ್ಷಿಸುವ ಕರ್ತವ್ಯದಲ್ಲಿ ವಿಫಲವಾಗುತ್ತಿವೆ ಎಂಬ ವರದಿ ಬರುತ್ತಿವೆ. ಇದು ಸ್ಪಷ್ಟವಾಗಿ ಮಾನವ ಹಕ್ಕುಗಳ ಉಲ್ಲಂಘನೆ ಎಂದು ಯುಎಸ್‌ಸಿಐಆರ್‌ಎಫ್ ಆಯುಕ್ತೆ ಅರುಣಿಮಾ ಭಾರ್ಗವ್ ಹೇಳಿದ್ದಾರೆ. ಹಿಂಸಾಚಾರಕ್ಕೆ ದಿಲ್ಲಿ ಸಾಕ್ಷಿಯಾಗಿದೆ. ಮುಸ್ಲಿಮರ ಮೇಲಿನ ದಾಳಿಗಳು ವರದಿಯಾಗಿವೆ. ಅವರ ಮನೆ, ಅಂಗಡಿ ಹಾಗೂ ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ ಮಾಡಲಾಗಿದೆ. ಧರ್ಮ ಪರಿಗಣಿಸದೆ ಎಲ್ಲರಿಗೂ ರಕ್ಷಣೆ ನೀಡುವುದು ಯಾವುದೇ ಜವಾಬ್ದಾರಿಯುತ ಸರಕಾರವೊಂದರ ಅಗತ್ಯದ ಕರ್ತವ್ಯಗಳಲ್ಲಿ ಒಂದು. ಆದುದರಿಂದ ಗುಂಪು ಹಿಂಸಾಚಾರಕ್ಕೆ ಗುರಿಯಾಗುವ ಮುಸ್ಲಿಮರು ಹಾಗೂ ಇತರರನ್ನು ರಕ್ಷಿಸಲು ಗಂಭೀರ ಕ್ರಮ ಕೈಗೊಳ್ಳಿ ಎಂದು ನಾವು ಭಾರತ ಸರಕಾರವನ್ನು ಆಗ್ರಹಿಸುತ್ತೇವೆ ಎಂದು ಯುಎಸ್‌ಸಿಐಆರ್‌ಎಫ್‌ನ ಅಧ್ಯಕ್ಷ ಟೋನಿ ಪರ್ಕಿನ್ಸ್ ತಿಳಿಸಿದ್ದಾರೆ.

 ಇದಕ್ಕೆ ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್, “ನಾವು ಯುಎಸ್‌ಸಿಐಆರ್‌ಎಫ್, ಒಂದು ಗುಂಪಿನ ಮಾಧ್ಯಮ ಹಾಗೂ ಕೆಲವು ವ್ಯಕ್ತಿಗಳು ದಿಲ್ಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ನೀಡಿದ ಹೇಳಿಕೆಯನ್ನು ನೋಡಿದ್ದೇವೆ. ಇದು ಸರಿಯಲ್ಲದ, ದಾರಿತಪ್ಪಿಸುವ ಹಾಗೂ ಘಟನೆಯನ್ನು ರಾಜಕೀಯಗೊಳಿಸುವ ಹೇಳಿಕೆಗಳಂತೆ ಕಾಣುತ್ತದೆ” ಎಂದು ಟ್ವೀಟ್ ಮಾಡಿದ್ದಾರೆ.

ಹಿಂಸಾಚಾರ ನಿಯಂತ್ರಿಸಲು ಹಾಗೂ ಆತ್ಮಸ್ಥೆರ್ಯ ತುಂಬಲು, ಸಹಜಸ್ಥಿತಿ ಮರು ಸ್ಥಾಪಿಸಲು ನಮ್ಮ ಕಾನೂನು ಜಾರಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಸರಕಾರದ ಹಿರಿಯ ಪ್ರತಿನಿಧಿಗಳು ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಭ್ರಾತೃತ್ವ ಹಾಗೂ ಶಾಂತಿ ಕಾಪಾಡುವಂತೆ ಪ್ರಧಾನಿ ಅವರು ಮನವಿ ಮಾಡಿದ್ದಾರೆ. ಈ ಉದ್ವಿಗ್ನ ಪರಿಸ್ಥಿತಿಯಲ್ಲಿ ಇಂತಹ ಬೇಜವಾಬ್ದಾರಿಯುತ ಹೇಳಿಕೆ ನೀಡಬಾರದು ಎಂದು ನಾವು ಆಗ್ರಹಿಸುತ್ತೇವೆ ಎಂದು ರವೀಶ್ ಕುಮಾರ್ ಟ್ವೀಟ್‌ನಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News