ಸಿಎಎ,ಪೊಲೀಸ್ ನಿಷ್ಕ್ರಿಯತೆ ಬಗ್ಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥೆಯ ತೀವ್ರ ಕಳವಳ

Update: 2020-02-27 17:58 GMT

ಹೊಸದಿಲ್ಲಿ,ಫೆ.27: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಮತ್ತು ದಿಲ್ಲಿಯಲ್ಲಿ ಹಿಂಸಾಚಾರದ ಸಂದರ್ಭದಲ್ಲಿ ಪೊಲೀಸ್ ನಿಷ್ಕ್ರಿಯತೆಯ ವರದಿಗಳ ಬಗ್ಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ರಾಯಭಾರಿ ಮಿಷೆಲ್ ಬ್ಯಾಚೆಲೆಟ್ ಅವರು ತೀವ್ರ ಕಳವಳವನ್ನು ವ್ಯಕ್ತಪಡಿಸಿದ್ದಾರೆ.

ಗುರುವಾರ ಸ್ವಿಟ್ಝರ್‌ಲ್ಯಾಂಡ್‌ನ ಜಿನೆವಾದಲ್ಲಿ ಮಾನವ ಹಕ್ಕುಗಳ ಮಂಡಳಿಯ 43ನೇ ಅಧಿವೇಶನದಲ್ಲಿ ಮಾತನಾಡಿದ ಬ್ಯಾಚೆಲೆಟ್,ಎಲ್ಲ ಸಮುದಾಯಗಳಿಗೆ ಸೇರಿದ ಭಾರೀ ಸಂಖ್ಯೆಯ ಭಾರತೀಯರು ಅತ್ಯಂತ ಶಾಂತಿಯುತ ರೀತಿಯಲ್ಲಿ ಕಾಯ್ದೆಗೆ ತಮ್ಮ ವಿರೋಧ ಮತ್ತು ಜಾತ್ಯತೀತ ವಾದದ ದೇಶದ ಸುದೀರ್ಘ ಸಂಪ್ರದಾಯಕ್ಕೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಇತರ ಗುಂಪುಗಳಿಂದ ಮುಸ್ಲಿಮರ ಮೇಲೆ ದಾಳಿಗಳ ಸಂದರ್ಭದಲ್ಲಿ ಪೊಲೀಸ್ ನಿಷ್ಕ್ರಿಯತೆಯ ವರದಿಗಳು ಮತ್ತು ಶಾಂತಿಯುತ ಪ್ರತಿಭಟನಾಕಾರರ ವಿರುದ್ಧ ಪೊಲೀಸರಿಂದ ಅತಿಯಾದ ಬಲಪ್ರಯೋಗದ ಈ ಹಿಂದಿನ ವರದಿಗಳಿಂದ ತಾನು ತೀವ್ರ ಕಳವಳಗೊಂಡಿದ್ದೇನೆ ಎಂದು ಹೇಳಿದರು.

ಇನ್ನಷ್ಟು ಹಿಂಸಾಚಾರವನ್ನು ತಡೆಯುವಂತೆ ಅವರು ಭಾರತದ ರಾಜಕೀಯ ನಾಯಕರಿಗೆ ಕರೆ ನೀಡಿದರು.

   ತನ್ನ ಭಾಷಣದಲ್ಲಿ ಜಮ್ಮು-ಕಾಶ್ಮೀರವನ್ನೂ ಪ್ರಸ್ತಾಪಿಸಿದ ಬ್ಯಾಚೆಲೆಟ್,ಕೆಲವು ರಾಜಕೀಯ ನಾಯಕರನ್ನು ಬಿಡುಗಡೆ ಮಾಡಲಾಗಿದೆ ಮತ್ತು ಸಾಮಾನ್ಯ ಜನಜೀವನ ಒಂದು ರೀತಿಯಲ್ಲಿ ಸಹಜ ಸ್ಥಿತಿಗೆ ಮರಳಿದೆ. ಆದರೂ 800 ಜನರು ಈಗಲೂ ಬಂಧನದಲ್ಲಿದ್ದಾರೆ. ಭಾರೀ ಸಂಖ್ಯೆಯಲ್ಲಿ ಮಿಲಿಟರಿ ನಿಯೋಜನೆ ಮುಂದುವರಿದಿರುವುದರಿಂದ ಶಾಲೆಗಳು,ಉದ್ಯಮಗಳು ಮತ್ತು ಜೀವನೋಪಾಯಗಳಿಗೆ ವ್ಯತ್ಯಯವಾಗಿದೆ. ಭದ್ರತಾ ಪಡೆಗಳಿಂದ ಅತಿಯಾದ ಬಲಪ್ರಯೋಗ ಮತ್ತು ಇತರ ಗಂಭೀರ ಮಾನವ ಹಕ್ಕು ಉಲ್ಲಂಘನೆಗಳ ಆರೋಪಗಳ ಕುರಿತು ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News