ಅಪರಾಧ ತಡೆ ಪ್ರತಿಬಂಧಕ ಕಾನೂನು: ನ್ಯಾಯ ಸಮ್ಮತವೂ ಅಲ್ಲ, ತಾರ್ಕಿಕವೂ ಅಲ್ಲ

Update: 2020-02-27 17:59 GMT

ಈ ಪ್ರತಿಬಂಧಕ ವಿಧಾನದಲ್ಲಿ ಅನುಸರಿಸಲಾಗುವ ಕಾನೂನಿನ ಚೌಕಟ್ಟಿನಲ್ಲಿ ಕಾನೂನಾತ್ಮಕ ಪ್ರಕ್ರಿಯೆಗಳು ಕೂಡ ತೀರ ಕಡಿಮೆ; ಆದ್ದರಿಂದ ಶಂಕಿತ ವ್ಯಕ್ತಿಯನ್ನು ಕೂಡಲೇ ಬಂಧಿಸಲು ಸಾಧ್ಯವಾಗುತ್ತದೆ ಎನ್ನುವುದು ಕೂಡ ನಿಜ. ಆದರೆ ಇದೇ ಕಾನೂನನ್ನು ಅಧಿಕಾರಿಗಳು ತೀರ ಸಾಮಾನ್ಯವಾದ ಕಾನೂನು ಮತ್ತು ವ್ಯವಸ್ಥೆಯ ಪರಿಸ್ಥಿತಿಯಲ್ಲಿ ಕೂಡ ಬಳಸಿಕೊಳ್ಳುತ್ತಾರೆ. ಆದ್ದರಿಂದ ಇದು ಇಂತಹ ಅಧಿಕಾರಿಗಳಿಗೆ ತುಂಬ ಆಕರ್ಷಕವಾಗಿ ಕಾಣುತ್ತದೆ. ರಾಷ್ಟ್ರೀಯ ಅಪರಾಧ ದಾಖಲೆ ಸಂಸ್ಥೆ ಬಿಡುಗಡೆಗೊಳಿಸಿರುವ 2018ರ ಭಾರತದಲ್ಲಿ ಅಪರಾಧ ವರದಿ ಇದನ್ನು ರುಜುವಾತು ಪಡಿಸುತ್ತದೆ. ಆ ವರದಿಯ ಪ್ರಕಾರ ಸರಕಾರದ ಅಂದಾಜುಗಳಂತೆ, ಸುಮಾರು ಒಂದು ಲಕ್ಷ ಮಂದಿಯನ್ನು ಅಪರಾಧ ತಡೆ ಪ್ರತಿಬಂಧಕ ಕಾನೂನುಗಳ ಅಡಿಯಲ್ಲಿ ಬಂಧಿಸಲಾಗಿತ್ತು. 


ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯ ರದ್ದತಿಯ ಬೆನ್ನಿಗೇ, ಜಮ್ಮು ಮತ್ತು ಕಾಶ್ಮೀರ ರಾಜ್ಯದ 1978ರ ಸಾರ್ವಜನಿಕ ಸುರಕ್ಷಾ ಕಾಯ್ದೆಯನ್ವಯ ವ್ಯಾಪಕವಾದ ಬಂಧನಗಳು ಮತ್ತು ಪ್ರತಿಬಂಧಕ ದಸ್ತಗಿರಿಗಳು (ಡಿಟೆನ್‌ಶನ್) ನಡೆದವು. ಈ ಕಾಯ್ದೆಯ ಪ್ರಕಾರ, ವಿಚಾರಣೆ ಇಲ್ಲದೆ ವ್ಯಕ್ತಿಯೊಬ್ಬನನ್ನು ಎರಡು ವರ್ಷಗಳ ಕಾಲ ಬಂಧನದಲ್ಲಿಡಬಹುದು. ಒಂದು ಸಾರ್ವಜನಿಕ ವಿಚಾರಣೆಯನ್ನು ಎದುರಿಸುವ, ಆ ಮೂಲಕ ವ್ಯಕ್ತಿಯೊಬ್ಬನ ನಿರಪರಾಧಿತ್ವ ಅಥವಾ ಅಪರಾಧವನ್ನು ಸಾಬೀತು ಪಡಿಸುವ ಅವಕಾಶವಿಲ್ಲದೆ ನಾಗರಿಕರನ್ನು ಬಂಧಿಸಿ ಬಂಧನದಲ್ಲಿ ಇಡುವುದನ್ನು ಭಾರತದ ಕಾನೂನಿನಲ್ಲಿ ‘ಅಪರಾಧ ತಡೆ ಬಂಧನ’ (ಪ್ರಿವೆಂಟಿವ್ ಡಿಟೆನ್‌ಶನ್) ಎಂದು ಕರೆಯಲಾಗಿದೆ. ಅಪರಾಧ ನಡೆಯುವುದನ್ನು ತಡೆಯುವುದೇ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟಗಳಲ್ಲಿ ಅಸ್ತಿತ್ವದಲ್ಲಿರುವ ಈ ಪ್ರತಿಬಂಧಕ ಕಾನೂನುಗಳ ಉದ್ದೇಶ. ಇವುಗಳ ಅಡಿಯಲ್ಲಿ ಜಿಲ್ಲಾ ನ್ಯಾಯಾಧೀಶರು ಮತ್ತು ಪೊಲೀಸ್ ಕಮಿಶನರ್‌ರಂತಹ ಕಾರ್ಯನಿರ್ವಾಹಕ (ಎಕ್ಸಿಕ್ಯೂಟಿವ್) ಅಧಿಕಾರಿಗಳಿಗೆ ವ್ಯಕ್ತಿಯೊಬ್ಬನನ್ನು ಬಂಧಿಸಿ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳುವ ಅಧಿಕಾರ ನೀಡಲಾಗಿದೆ. ಈ ಅಧಿಕಾರಿಗಳಿಗೆ ವ್ಯಕ್ತಿಯೊಬ್ಬನ ನಡತೆ ಸಾರ್ವಜನಿಕ ವ್ಯವಸ್ಥೆಗೆ ಅಥವಾ ಶಾಂತಿಗೆ ಬೆದರಿಕೆಯೊಡ್ಡುತ್ತಿದೆಯೆಂದು ಅನ್ನಿಸಿದರೆ ಸಾಕು; ಅವರು ಆ ವ್ಯಕ್ತಿಯನ್ನು ಬಂಧಿಸಿ ಜೈಲಿಗೆ ತಳ್ಳಬಹುದು.

ಅಪರಾಧವನ್ನು ಅದು ನಡೆಯುವ ಮೊದಲೆ ತುರ್ತಾಗಿ ತಡೆಯುವುದೇ ಈ ಕಾನೂನಿನ ಉದ್ದೇಶವಾದ್ದರಿಂದ ಕ್ರಿಮಿನಲ್ ವಿಚಾರಣೆಯೊಂದರ ವಿಧಿ ವಿಧಾನಗಳನ್ನು, ಪ್ರಕ್ರಿಯೆಗಳನ್ನು ಅನುಸರಿಸುತ್ತ ಕೂತರೆ ಈ ಕಾನೂನಿನ ಉದ್ದೇಶವೇ ಭಂಗವಾಗುತ್ತದೆಂದು ವಾದಿಸಲಾಗುತ್ತದೆ. ಆದ್ದರಿಂದ ನಿಗದಿತ (ರೆಗ್ಯುಲರ್) ಕ್ರಿಮಿನಲ್ ಕಾನೂನಿನಲ್ಲಿರುವ ಪ್ರಕ್ರಿಯಾತ್ಮಕ ನ್ಯಾಯದ ಕ್ರಮಗಳು ಪ್ರತಿಬಂಧಕ ಕಾನೂನುಗಳಲ್ಲಿರುವುದಿಲ್ಲ. ಅಪರಾಧ ತಡೆ ಪ್ರತಿಬಂಧಕ ಕಾನೂನುಗಳ ನೆಲೆಯಲ್ಲಿ ನಡೆಯುವ ಬಂಧನ ಪ್ರಕರಣಗಳಲ್ಲಿ, ಬಂಧನದ ಬಳಿಕ ಕೆಲವು ವಿಷಯಗಳಲ್ಲಿ ಪರೀಕ್ಷೆ (ಚೆಕ್) ನಡೆಯುತ್ತದಾದರೂ, ಈ ಚೆಕ್‌ಗಳನ್ನು ಮಾಡುವವರು ಬಹುತೇಕ ಕಾರ್ಯಾಂಗದ ಅಧಿಕಾರಿಗಳೇ ಹೊರತು ನ್ಯಾಯಾಂಗ ಅಧಿಕಾರಿಗಳಲ್ಲ. ಅಲ್ಲದೆ, ನ್ಯಾಯಾಧೀಶರುಗಳಿರುವ ಟ್ರಿಬ್ಯೂನಲ್‌ಗಳಿಗೆ ಪ್ರಕರಣಗಳು ಹೋದಾಗಲೂ, ಅಲ್ಲಿ ಎಲ್ಲರ ಸಮಕ್ಷಮ ವಿಚಾರಣೆ (ಪಬ್ಲಿಕ್ ಹಿಯರಿಂಗ್) ಇರುವುದಿಲ್ಲ ಅಥವಾ ಬಂಧಿತ ವ್ಯಕ್ತಿಯ ವೌಕಿಕವಾದ ಹೇಳಿಕೆಯನ್ನು ಆಲಿಸಲಾಗುತ್ತದೆಂಬ ಗ್ಯಾರಂಟಿಯೂ ಇಲ್ಲ. ಅಂತಿಮ ತೀರ್ಮಾನದ ಬಗ್ಗೆ ಸಾರ್ವಜನಿಕವಾಗಿ ಸಿಗುವ ಆಜ್ಞೆಗಳಾಗಲಿ ಅಥವಾ ತೀರ್ಪುಗಳಾಗಲಿ ಇಂತಹ ಬಂಧನ ಪ್ರಕರಣಗಳಲ್ಲಿ ಲಭ್ಯವಿರುವುದಿಲ್ಲ. ಕೊನೆಯದಾಗಿ, ಈ ಪ್ರಕ್ರಿಯೆಯಲ್ಲಿ ಬಂಧಿತ ವ್ಯಕ್ತಿಗೆ ಕಾನೂನು ನೆರವು ಪಡೆಯುವ ಹಕ್ಕು ಇಲ್ಲ.

ಅಪರಾಧ ಎಸಗುವವರನ್ನು, ಅಪರಾಧ ಎಸಗುವ ಮೊದಲೇ, ಬಂಧಿಸುವುದಕ್ಕೆ ಕಾನೂನುಗಳು ಅವಕಾಶ ನೀಡಬೇಕು ಎನ್ನುವುದು ಎಲ್ಲರಿಗೂ ಸರಿ ಎನ್ನಿಸುವ ವಿಚಾರವೇ ಆಗಿದೆ. ಈ ಪ್ರತಿಬಂಧಕ ವಿಧಾನದಲ್ಲಿ ಅನುಸರಿಸಲಾಗುವ ಕಾನೂನಿನ ಚೌಕಟ್ಟಿನಲ್ಲಿ ಕಾನೂನಾತ್ಮಕ ಪ್ರಕ್ರಿಯೆಗಳು ಕೂಡ ತೀರ ಕಡಿಮೆ; ಆದ್ದರಿಂದ ಶಂಕಿತ ವ್ಯಕ್ತಿಯನ್ನು ಕೂಡಲೇ ಬಂಧಿಸಲು ಸಾಧ್ಯವಾಗುತ್ತದೆ ಎನ್ನುವುದು ಕೂಡ ನಿಜ. ಆದರೆ ಇದೇ ಕಾನೂನನ್ನು ಅಧಿಕಾರಿಗಳು ತೀರ ಸಾಮಾನ್ಯವಾದ ಕಾನೂನು ಮತ್ತು ವ್ಯವಸ್ಥೆಯ ಪರಿಸ್ಥಿತಿಯಲ್ಲಿ ಕೂಡ ಬಳಸಿಕೊಳ್ಳುತ್ತಾರೆ. ಆದ್ದರಿಂದ ಇದು ಇಂತಹ ಅಧಿಕಾರಿಗಳಿಗೆ ತುಂಬ ಆಕರ್ಷಕವಾಗಿ ಕಾಣುತ್ತದೆ.

ರಾಷ್ಟ್ರೀಯ ಅಪರಾಧ ದಾಖಲೆ ಸಂಸ್ಥೆ ಬಿಡುಗಡೆಗೊಳಿಸಿರುವ 2018ರ ಭಾರತದಲ್ಲಿ ಅಪರಾಧ ವರದಿ ಇದನ್ನು ರುಜುವಾತು ಪಡಿಸುತ್ತದೆ. ಆ ವರದಿಯ ಪ್ರಕಾರ ಸರಕಾರದ ಅಂದಾಜುಗಳಂತೆ, ಸುಮಾರು ಒಂದು ಲಕ್ಷ ಮಂದಿಯನ್ನು ಅಪರಾಧ ತಡೆ ಪ್ರತಿಬಂಧಕ ಕಾನೂನುಗಳ ಅಡಿಯಲ್ಲಿ ಬಂಧಿಸಲಾಗಿತ್ತು. ತೀರ ಅಪರೂಪದ, ಅನಿವಾರ್ಯ ಪರಿಸ್ಥಿತಿಗಳು, ಅಪರೂಪದ, ಅನಿವಾರ್ಯವಾದ ಕಾನೂನುಗಳನ್ನು ಹಾಗೂ ಅವುಗಳ ಬಳಕೆಯನ್ನು ಸಮರ್ಥಿಸುತ್ತವೆ. ಆದರೂ ಕೂಡ, ಭಾರತದಲ್ಲಿ ಪ್ರತಿಬಂಧಕ ಕಾನೂನುಗಳ ಪ್ರಕ್ರಿಯೆಗಳು ಬಂಧಿತ ವ್ಯಕ್ತಿಯನ್ನು ಕಾಪಾಡಬಹುದಾದ ಪ್ರಕ್ರಿಯೆಗಳನ್ನು ಅಪರಾಧ ನಿಯಂತ್ರಣದ ಹೆಸರಿನಲ್ಲಿ ಬಲಿಕೊಡುತ್ತವೆ. ಇದು ನ್ಯಾಯದಾನದ ಪರಿಕಲ್ಪನೆಗೆ ಸರಿಹೊಂದುವುದಿಲ್ಲ. ಪ್ರತಿಬಂಧಕ ಕಾನೂನುಗಳು, ಅವು ಈಗ ಇರುವ ರೂಪದಲ್ಲಿ, ಭಾರತದ ಸಂವಿಧಾನದ 21ನೇ ವಿಧಿ ದೇಶದ ನಾಗರಿಕರಿಗೆ ನೀಡುವ ವ್ಯಕ್ತಿ ಸ್ವಾತಂತ್ರವನ್ನು, ಈ ಸ್ವಾತಂತ್ರವನ್ನು ಪಡೆಯಲು ನಮಗೆ ಇರುವ ‘‘ನ್ಯಾಯಯುತವಾದ, ಸರಿಯಾದ ಮತ್ತು ತಾರ್ಕಿಕವಾದ’’ ಪ್ರಕ್ರಿಯೆಯ ಅವಕಾಶವನ್ನು ನೀಡುತ್ತವೆಂದು ಒಪ್ಪಿಕೊಳ್ಳುವುದು ಕಷ್ಟ.

(ಲೇಖಕರು ದಿಲ್ಲಿಯಲ್ಲಿ ಕಾರ್ಯ ನಿರ್ವಹಿಸುವ ಓರ್ವ ನ್ಯಾಯವಾದಿ)

(ಕೃಪೆ: thehindu)

Writer - ಅಭಿನವ್ ಸೆಖ್ರಿ

contributor

Editor - ಅಭಿನವ್ ಸೆಖ್ರಿ

contributor

Similar News