ದಿಲ್ಲಿ ಹಿಂಸಾಚಾರ ನಡೆಯುವಾಗ ಗೃಹ ಸಚಿವ ಅಮಿತ್ ಶಾ ಎಲ್ಲಿಗೆ ಹೋಗಿದ್ದರು: ಶಿವಸೇನೆ ಪ್ರಶ್ನೆ

Update: 2020-02-28 07:19 GMT

 ಮುಂಬೈ, ಫೆ.28: ದಿಲ್ಲಿ ಹಿಂಸಾಕಾಂಡ ನಡೆಯುತ್ತಿದ್ದಾಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅನುಪಸ್ಥಿತಿಯನ್ನು ಶಿವಸೇನೆ ಪ್ರಶ್ನಿಸಿದೆ.

‘‘ದಿಲ್ಲಿ ಹೊತ್ತಿ ಉರಿಯುತ್ತಿದ್ದಾಗ, ಜನರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾಗ, ಕೇಂದ್ರ ಗೃಹ ಸಚಿವ ಅಮಿತ್ ಶಾ ಎಲ್ಲಿಗೆ ಹೋಗಿದ್ದರು? ಅವರು ಆಗ ಏನು ಮಾಡುತ್ತಿದ್ದರು? ಇಂತಹ ಪ್ರಶ್ನೆಗಳು ಉದ್ಭವಿಸುತ್ತಿವೆ. ಈಶಾನ್ಯ ದಿಲ್ಲಿಯಲ್ಲಿ ನಡೆದ ಹಿಂಸಾಚಾರದಲ್ಲಿ 39 ಮಂದಿ ಮೃತಪಟ್ಟಿದ್ದಾರೆ. ಬಹಳಷ್ಟು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗಿದೆ" ಎಂದು ಶಿವಸೇನೆ ತನ್ನ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ ಬರೆದಿದೆ.

 ಕೇಂದ್ರದಲ್ಲಿ ಕಾಂಗ್ರೆಸ್ ಅಥವಾ ಇತರ ಮೈತ್ರಿ ಪಕ್ಷಗಳು ಅಧಿಕಾರದಲ್ಲಿರುತ್ತಿದ್ದರೆ ಇಷ್ಟೊತ್ತಿಗಾಗಲೇ ಗೃಹ ಸಚಿವರ ರಾಜೀನಾಮೆಗಾಗಿ ಬೇಡಿಕೆ ಕೇಳಿಬರುತ್ತಿತ್ತು. ಕೇಂದ್ರದಲ್ಲಿ ವಿಪಕ್ಷಗಳು ದುರ್ಬಲವಾಗಿರುವ ಕಾರಣ ಗೃಹ ಸಚಿವರ ರಾಜೀನಾಮೆ ಕೇಳುವವರೇ ಇಲ್ಲವಾಗಿದೆ. ಸೋನಿಯಾ ಗಾಂಧಿ ಅವರು ಗೃಹ ಸಚಿವರ ರಾಜೀನಾಮೆ ಕೇಳಿದ್ದಾರೆ. ಪೊಲೀಸ್ ಅಧಿಕಾರಿ ಸಹಿತ 39 ಜನರು ಹಿಂಸಾಚಾರದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ದಿಲ್ಲಿಯಲ್ಲಿ ಹಿಂಸಾಚಾರ ನಡೆಯುತ್ತಿರುವಾಗ ಕೇಂದ್ರದ ಅರ್ಧದಷ್ಟು ಸಚಿವ ಸಂಪುಟ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಸ್ವಾಗತಿಸಲು ಅಹ್ಮದಾಬಾದ್‌ಗೆ ತೆರಳಿತ್ತು ಎಂದು ಶಿವಸೇನೆ ಆರೋಪಿಸಿದೆ.

‘‘ಹಿಂಸಾಚಾರದ ವೇಳೆ ಗೃಹ ಸಚಿವರು ಕಾಣಲಿಲ್ಲವೇಕೆ? ದೇಶದಲ್ಲಿ ಪ್ರಬಲ ಗೃಹ ಸಚಿವರಿದ್ದಾರೆ. ಆದರೆ, ಅವರು ಕಾಣದೇ ಇರುವುದು ಆಘಾತಕಾರಿ ವಿಚಾರ. ದಿಲ್ಲಿಯಲ್ಲಿ ಅಸೆಂಬ್ಲಿ ಚುನಾವಣೆಯ ವೇಳೆ ಗೃಹ ಸಚಿವರಾಗಿದ್ದರೂ ಶಾ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದರು. ಆದರೆ ಇಡೀ ದಿಲ್ಲಿ ಹೊತ್ತಿ ಉರಿಯುವಾಗ ಅವರು ಅಲ್ಲಿ ಕಾಣಲಿಲ್ಲ. ವಿಪಕ್ಷಗಳು ಸಂಸತ್ತಿನಲ್ಲಿ ಈ ವಿಚಾರದ ಬಗ್ಗೆ ಪ್ರಶ್ನಿಸಬೇಕು" ಎಂದು ಶಿವಸೇನ ಆಗ್ರಹಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News