ಕೊರೋನ ವೈರಸ್, ದಿಲ್ಲಿ ಹಿಂಸಾಚಾರ ಎಫೆಕ್ಟ್: 5 ಲಕ್ಷ ಕೋಟಿ ರೂ. ಕಳೆದುಕೊಂಡ ಹೂಡಿಕೆದಾರರು

Update: 2020-02-28 08:19 GMT

ಹೊಸದಿಲ್ಲಿ, ಫೆ.28: ಜಾಗತಿಕ ಮಟ್ಟದಲ್ಲಿ ಕೊರೋನ ವೈರಸ್ ಭೀತಿ ಹಾಗೂ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರದ ಪರಿಣಾಮ ದೇಶದ ಷೇರು ಪೇಟೆಯಲ್ಲಿ ತಲ್ಲಣ ಸೃಷ್ಟಿಯಾಗಿದೆ. ದೇಶದ ಷೇರುಪೇಟೆಯಲ್ಲಿ ಶುಕ್ರವಾರ ದಿಢೀರ್ ಕುಸಿತ ಕಂಡಿದೆ. ಕೊರೋನ ವೈರಸ್ ಪ್ರಭಾವ ಚೀನಾದಿಂದ ಹೊರಗೂ ವ್ಯಾಪಿಸಿರುವುದರಿಂದ ಜಾಗತಿಕ ಷೇರು ಪೇಟೆಯಲ್ಲಿ ಮಾರಾಟದ ಒತ್ತಡ ಸೃಷ್ಟಿಯಾಗಿದೆ.

ದಿನದ ವಹಿವಾಟು ಆರಂಭವಾಗುತ್ತಿದ್ದಂತೆ ಸೆನ್ಸೆಕ್ಸ್ 1,000ಕ್ಕೂ ಅಧಿಕ ಅಂಶಗಳ ಕುಸಿತಕ್ಕೆ ಒಳಗಾಗಿದೆ.ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 1,100 ಅಂಶಗಳ ಇಳಿಕೆಯೊಂದಿಗೆ 38,601 ಅಂಶ ತಲುಪಿದೆ. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 338 ಅಂಕ ಇಳಿಕೆಯೊಂದಿಗೆ 11,295 ಅಂಶ ತಲುಪಿದೆ. 

ಇದರಿಂದಾಗಿ ಒಂದು ಅಂದಾಜಿನ ಪ್ರಕಾರ ಕೆಲವೇ ನಿಮಿಷಗಳಲ್ಲಿ ಷೇರುಪೇಟೆಯಲ್ಲಿ ಬಂಡವಾಳ ಹಾಕಿರುವ ಹೂಡಿಕೆದಾರರು ಸುಮಾರು 5 ಲಕ್ಷ ಕೋಟಿ ರೂ. ನಷ್ಟ ಮಾಡಿಕೊಂಡಿದ್ದಾರೆ.

ಟಾಟಾ ಸ್ಟೀಲ್, ಟೆಕ್ ಮಹೀಂದ್ರ, ಇನ್‌ಫೋಸಿಸ್, ಮಹೀಂದ್ರ ಆ್ಯಂಡ್ ಮಹೀಂದ್ರ, ಬಜಾಜ್ ಫೈನಾನ್ಸ್, ಎಚ್‌ಸಿಎಲ್ ಟೆಕ್ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಗಳ ಷೇರುಗಳು ಕಡಿಮೆ ಬೆಲೆಗೆ ಬಿಕರಿಯಾಗಿವೆ.

2008ರಲ್ಲಿ ಉಂಟಾಗಿದ್ದ ಜಾಗತಿಕ ಮಟ್ಟದ ಷೇರುಪೇಟೆ ಮಹಾಕುಸಿತದ ನಂತರ ಇದೀಗ ಅತಿ ದೊಡ್ಡ ಪತನ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News