ಕೊರೊನಾ ವೈರಸ್ ಪೀಡಿತ ಜಾಗತಿಕ ಆರ್ಥಿಕತೆಗೆ ರಘುರಾಮ್ ರಾಜನ್ ನೀಡಿದ ಸಲಹೆಯಿದು...

Update: 2020-02-28 08:47 GMT

ಹೊಸದಿಲ್ಲಿ: ಕೊರೊನಾವೈರಸ್ ಹರಡುವುದನ್ನು ತಡೆಯುವುದು ಹಾಗೂ ಆರ್ಥಿಕತೆಯ ಪುನಶ್ಚೇತನದ ಬಗ್ಗೆ ನಂತರ ಯೋಚಿಸುವುದೇ ಕೊರೊನಾ ವೈರಸ್‍ನಿಂದ ಜಾಗತಿಕ ಆರ್ಥಿಕತೆಗೆ ಉಂಟಾಗಿರುವ ಆಘಾತಕ್ಕೆ ಅತ್ಯುತ್ತಮ ಟಾನಿಕ್ ಆಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‍ ನ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.

ಇಂತಹ ಸನ್ನಿವೇಶದಲ್ಲಿ ಕೇಂದ್ರೀಯ ಬ್ಯಾಂಕುಗಳು ಹೆಚ್ಚೇನೂ ಮಾಡುವಂತಿಲ್ಲ, ಸರಕಾರ ಹೆಚ್ಚು ಖರ್ಚು ಮಾಡುವುದು ಸಹಾಯಕವಾಗಬಹುದಾದರೂ ಕೊರೊನಾ ವೈರಸ್  ನಿಯಂತ್ರಣದಲ್ಲಿದೆ ಎಂದು ಜನರಿಗೆ ಹಾಗೂ ಕಂಪೆನಿಗಳಿಗೆ ಮನವರಿಕೆ ಮಾಡಿಕೊಡಬೇಕಾಗಿದೆ ಎಂದು ಅವರು ತಿಳಿಸಿದರು.

"ಈ ವೈರಸ್ ಹರಡುವಿಕೆ ತಡೆಗೆ ಕೈಗೊಳ್ಳಲಾಗುತ್ತಿರುವ ಕ್ರಮ ಹಾಗೂ ಇದಕ್ಕೆ ಒಂದು ಔಷಧಿ ಕಂಡುಹಿಡಿಯಬಹುದು ಎಂಬ ಆಶಾವಾದದಿಂದಾಗಿ ಈ ವೈರಸ್ ಹರಡುವಿಕೆಗೂ ಒಂದು ಮಿತಿ ಇದೆ ಎಂಬ ಭಾವನೆ ಮೂಡುವುದು ಜನರಿಗೆ ಬೇಕಾಗಿದೆ'' ಎಂದು ರಾಜನ್  ಬ್ಲೂಮ್‍ ಬರ್ಗ್ ಟಿವಿ ವಾಹಿನಿ ಜತೆ ಮಾತನಾಡುತ್ತಾ ಹೇಳಿದ್ದಾರೆ.

"ಈಗಿನ ಹಂತದಲ್ಲಿ ಸರಕಾರಗಳು ಈ ವೈರಸ್ ವಿರುದ್ಧ ಹೋರಾಡುವುದಕ್ಕೆ ಹೆಚ್ಚು ಮಹತ್ವ ನೀಡಬೇಕೇ ಹೊರತು ಆರ್ಥಿಕತೆಗೆ ಹೇಗೆ ಉತ್ತೇಜನ ನೀಡುವುದು ಎಂಬುದಲ್ಲ, ಅದನ್ನು ನಂತರ ಯೋಚಿಸಬಹುದು'' ಎಂದು ಸದ್ಯ ಚಿಕಾಗೋ ಸ್ಕೂಲ್ ಆಫ್ ಬಿಸಿನೆಸ್‍ ನಲ್ಲಿ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿರುವ ರಾಜನ್ ಹೇಳಿದರು.

"ಒಂದೇ ವಾರದಲ್ಲಿ ಮಾರುಕಟ್ಟೆಯಲ್ಲಿ ಅತೀವ ಆತ್ಮವಿಶ್ವಾಸದ ಸನ್ನಿವೇಶದಿಂದ ಅತೀವ ತಲ್ಲಣದತ್ತ ನಾವು ಸಾಗಿದ್ದೇವೆ, ಈ ವೈರಸ್ ಹಾವಳಿಯಿಂದಾಗಿ ಕಂಪೆನಿಗಳು ತಮ್ಮ ಪೂರೈಕೆ ವ್ಯವಸ್ಥೆ ಹಾಗೂ ವಿದೇಶಿ ನಿರ್ಮಾಣ  ಸೌಲಭ್ಯಗಳ ಕುರಿತಂತೆ ಮರು ಯೋಚಿಸಲಿವೆ, ಉತ್ಪಾದನಾ ಕ್ಷೇತ್ರದಲ್ಲಿನ ಜಾಗತೀಕರಣ ಬಹಳಷ್ಟು ಹೊಡೆತ ಅನುಭವಿಸಲಿದೆ'' ಎಂದೂ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News