ಪಾಕಿಸ್ತಾನದಿಂದ ಭಯೋತ್ಪಾದನೆಗೆ ಉತ್ತೇಜನ: ವಿಶ್ವಸಂಸ್ಥೆ ಕಚೇರಿ ಹೊರಗೆ ಪಾಕ್ ಅಲ್ಪಸಂಖ್ಯಾತರ ಪ್ರತಿಭಟನೆ

Update: 2020-02-29 17:04 GMT

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಫೆ. 29: ಭಯೋತ್ಪಾದನೆಗೆ ಉತ್ತೇಜನ ನೀಡುತ್ತಿರುವುದಕ್ಕಾಗಿ ತಮ್ಮ ದೇಶದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಪಾಕಿಸ್ತಾನದ ಅಲ್ಪಸಂಖ್ಯಾತರು ಶುಕ್ರವಾರ ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಯ ಹೊರಗೆ ಪ್ರತಿಭಟನೆ ನಡೆಸಿದ್ದಾರೆ.

ತಮ್ಮ ದೇಶವು ಜಾಗತಿಕ ಭದ್ರತೆಗೆ ಬೆದರಿಕೆಯಾಗಿದೆ, ಹಾಗಾಗಿ ಈಗ ನಡೆಯುತ್ತಿರುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 43ನೇ ಅಧಿವೇಶನದಲ್ಲಿ ತಾವು ದೇಶದ ವಿರುದ್ಧ ಪ್ರತಿಭಟಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

‘‘9/11 ಘಟನೆಯ ಬಳಿಕ, ಪಾಕಿಸ್ತಾನವು ಅಂತರ್‌ರಾಷ್ಟ್ರೀಯ ಭಯೋತ್ಪಾದನೆಯ ಕೇಂದ್ರ ಬಿಂದುವಾಗಿದೆ. ಅಫ್ಘಾನಿಸ್ತಾನದೊಂದಿಗೆ ಗಡಿ ಹೊಂದಿರುವ ಉತ್ತರ ವಝೀರಿಸ್ತಾನ ವಲಯವು ಸ್ಥಳೀಯ ಹಾಗೂ ಅಲ್-ಖಾಯಿದ ಮತ್ತು ತಾಲಿಬಾನ್ ಸೇರಿದಂತೆ ಹಲವು ಅಂತರ್‌ರಾಷ್ಟ್ರೀಯ ಭಯೋತ್ಪಾದಕ ಗುಂಪುಗಳೊಂದಿಗೆ ನಂಟು ಹೊಂದಿರುವ ಭಯೋತ್ಪಾದಕರ ನೆಲೆಯಾಗಿದೆ’’ ಎಂದು ಜಿನೀವದಲ್ಲಿ ಸರಕಾರೇತರ ಸಂಸ್ಥೆ (ಎನ್‌ಜಿಒ)ಯೊಂದು ನೀಡಿದ ಹೇಳಿಕೆ ತಿಳಿಸಿದೆ.

ಅಂತರ್‌ರಾಷ್ಟೀಯ ಭಯೋತ್ಪಾದಕ ಸಂಘಟನೆಗಳಿಗೆ ಪಾಕಿಸ್ತಾನ ಸೇನೆ ನೀಡುತ್ತಿರುವ ಅಕ್ರಮ ನೆರವನ್ನು ಸ್ವಿಟ್ಸರ್‌ಲ್ಯಾಂಡ್‌ನ ನಗರ ಜಿನೇವದ ಬ್ರೋಕನ್ ಚೇರ್ ಎಂಬಲ್ಲಿರುವ ವಿಶ್ವಸಂಸ್ಥೆಯ ಕಚೇರಿಯ ಹೊರಗಡೆ ಬ್ಯಾನರ್‌ಗಳನ್ನು ಪ್ರದರ್ಶಿಸುವ ಮೂಲಕ ಪ್ರತಿಭಟಿಸಲಾಯಿತು ಎಂದು ಎನ್‌ಜಿಒ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News