ಕೊರೋನವೈರಸ್: ಇರಾನ್‌ನಲ್ಲಿ 210 ಸಾವು; ಬಿಬಿಸಿ ಪರ್ಸಿಯನ್ ವರದಿ
ಲಂಡನ್, ಫೆ. 29: ನೋವೆಲ್-ಕೊರೋನವೈರಸ್‌ನಿಂದಾಗಿ ಇರಾನ್‌ನಲ್ಲಿ ಕನಿಷ್ಠ 210 ಮಂದಿ ಸಾವಿಗೀಡಾಗಿದ್ದಾರೆ ಎಂದು ಇರಾನ್‌ನ ಆರೋಗ್ಯ ವ್ಯವಸ್ಥೆಯಲ್ಲಿರುವ ಅನಾಮಧೇಯ ಮೂಲಗಳನ್ನು ಉಲ್ಲೇಖಿಸಿ ಬಿಬಿಸಿ ಪರ್ಸಿಯನ್ ಶುಕ್ರವಾರ ವರದಿ ಮಾಡಿದೆ.
ಹೆಚ್ಚಿನ ಜನರು ರಾಜಧಾನಿ ಟೆಹರಾನ್ ಮತ್ತು ಮಧ್ಯ ಇರಾನ್‌ನಲ್ಲಿರುವ ಪವಿತ್ರ ನಗರ ಖೋಮ್‌ನಲ್ಲಿ ಮೃತಪಟ್ಟಿದ್ದಾರೆ ಎಂದು ಅದು ತಿಳಿಸಿದೆ. ಖೋಮ್‌ನಲ್ಲಿ ದೇಶದ ಮೊದಲ ಕೊರೋನವೈರಸ್ ಸೋಂಕು ಪ್ರಕರಣ ವರದಿಯಾಗಿತ್ತು.
ಇರಾನ್‌ನ ಅಧಿಕೃತ ಕೊರೋನವೈರಸ್ ಸಾವಿನ ಸಂಖ್ಯೆ ಶುಕ್ರವಾರ ಅಪರಾಹ್ನದ ವೇಳೆಗೆ 34 ಆಗಿತ್ತು.
ಆದರೆ ಇದಕ್ಕೆ ಕೋಪದಿಂದ ಪ್ರತಿಕ್ರಿಯಿಸಿರುವ ಇರಾನ್ ಆರೋಗ್ಯ ಸಚಿವಾಲಯದ ವಕ್ತಾರರೊಬ್ಬರು, ಇರಾನ್ ಬಗ್ಗೆ ‘ಸುಳ್ಳು ಸುದ್ದಿಗಳನ್ನು ಹರಡುವ ಸ್ಪರ್ಧೆ’ಯಲ್ಲಿ ಇರಾನ್ ವೈರಿಗಳ ಜೊತೆಗೆ ಬಿಬಿಸಿ ಪರ್ಸಿಯನ್ ಕೂಡ ಸೇರ್ಪಡೆಗೊಂಡಿದೆ ಎಂದು ಹೇಳಿದ್ದಾರೆ.
‘‘ಕೊರೋನವೈರಸ್ ಬಗ್ಗೆ ಮಾಹಿತಿಯನ್ನು ಪ್ರಕಟಿಸುವಲ್ಲಿ ಇರಾನ್‌ನ ಅನುಕರಣೀಯ ಪಾರದರ್ಶಕತೆಯಿಂದ ಹಲವರು ದಂಗಾಗಿದ್ದಾರೆ’’ ಎಂಬುದಾಗಿ ಅವರು ಟ್ವೀಟ್ ಮಾಡಿದ್ದಾರೆ.