ಬಡತನ, ದುರಂತ ಮತ್ತು ‘ಪ್ಯಾರಸೈಟ್’

Update: 2020-02-29 19:07 GMT

12ನೇ ಬೆಂಗಳೂರು ಅಂತರ್ ರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭವಾಗಿದೆ. ದೇಶ ವಿದೇಶಗಳ ನೂರಾರು ಸಿನೆಮಾಗಳು, ತಂತ್ರಜ್ಞರು, ನಟ-ನಟಿಯರು, ನಿರ್ದೇಶಕರು, ನಿರ್ಮಾಪಕರು ಬೆಂಗಳೂರಿಗೆ ಆಗಮಿಸಿದ್ದಾರೆ. ಅವರೊಂದಿಗೆ ಆ ದೇಶಗಳ ಭಾಷೆ, ಬದುಕು, ಸಂಸ್ಕೃತಿಯೂ ಆಗಮಿಸಿದೆ. ಅವರ ಚಿತ್ರಗಳು, ಆ ಚಿತ್ರಗಳು ತೆರೆದಿಡುವ ಜಗತ್ತನ್ನು ಅರಿಯಲು, ಅರಗಿಸಿಕೊಳ್ಳಲು ಚಿತ್ರೋತ್ಸವ ಅತ್ಯುತ್ತಮ ವೇದಿಕೆಯಾಗಿದೆ. ಅಂತಹ ಚಿತ್ರೋತ್ಸವದಲ್ಲಿ, ಈ ಬಾರಿಯ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಪಡೆದ ದಕ್ಷಿಣ ಕೊರಿಯದ ‘ಪ್ಯಾರಸೈಟ್’ ಚಿತ್ರದ ಪ್ರದರ್ಶನವೂ ಇದೆ. ಆ ಚಿತ್ರ ಉಂಟು ಮಾಡಿರುವ ಸಂಚಲನಗಳ ಸುತ್ತ ಒಂದು ಝಲಕ್.

ಒಂದು ಪುಟ್ಟ ಸಂಸಾರ- ಅಪ್ಪ, ಅಮ್ಮ, ಮಗಳು ಮತ್ತು ಮಗ. ನೆಲಮಾಳಿಗೆಯಲ್ಲೊಂದು ಮನೆ. ಆ ಮನೆಯ ಸ್ಥಿತಿಯೇ ಆ ಸಂಸಾರದ ಸಾರವನ್ನು ಸಾರುವಂತಿದೆ. ನಾಲ್ವರಿಗೂ ಕೆಲಸವಿಲ್ಲ. ಮಕ್ಕಳ ಕೈಯಲ್ಲಿ ಮೊಬೈಲ್ ಇದೆ, ನೆಟ್ ಇಲ್ಲ. ಮೇಲಿನ ಮನೆಯ ಯಾರದೋ ನೆಟ್ ಕನೆಕ್ಷನ್‌ಗೆ ಕಾತರಿಸುವುದು, ಛಾವಣಿಗಂಟಿಕೊಂಡು ಕೂರುವುದು- ಸರ್ಕಸ್‌ನಂತೆ ಕಾಣುತ್ತದೆ. ಅವರ ಸಂಸಾರವೂ ಅದನ್ನೇ ಧ್ವನಿಸುತ್ತದೆ. ಹಸಿವು, ಅವಮಾನ, ವರ್ಗ ತಾರತಮ್ಯ, ಅಸಮಾನತೆಗಳ ಮೇಲಾಟದಲ್ಲಿ ಬಡತನವೇ ಬುದ್ಧಿಗೆ ಸಾಣೆ ಹಿಡಿಯುತ್ತದೆ. ನೈತಿಕ-ಅನೈತಿಕ ಗೆರೆ ಅಳಿಸುತ್ತದೆ. ನ್ಯಾಯ-ಅನ್ಯಾಯದ ಗಡಿ ದಾಟಿಸುತ್ತದೆ. ಅದು ಬಡತನಕ್ಕಿರುವ ಶಕ್ತಿಯಂತೆಯೂ ಕಾಣುತ್ತದೆ. ದೌರ್ಬಲ್ಯದಂತೆಯೂ ಮೆರೆಯುತ್ತದೆ.

ಹಾಗೆಯೇ ಮತ್ತೊಂದು ಬದಿಯಲ್ಲಿ, ಬಡವರ ಸಂಸಾರಕ್ಕೆ ಪರ್ಯಾಯವಾಗಿ ಮತ್ತೊಂದು ಶ್ರೀಮಂತ ಸಂಸಾರ- ಅಪ್ಪ, ಅಮ್ಮ, ಮಗಳು ಮತ್ತು ಮಗ- ಯಾವುದಕ್ಕೂ ಕೊರತೆ ಇಲ್ಲದ ವೈಭವೋಪೇತ ಬದುಕು. ಈ ಕುಟುಂಬದೊಂದಿಗೆ ಬಡವರ ಬದುಕನ್ನು ಬೆರೆಸಿ; ಅವರು ಇವರನ್ನು, ಇವರು ಅವರನ್ನು ಅವಲಂಬಿಸುವಂತೆ ಮಾಡುತ್ತದೆ. ವ್ಯವಸ್ಥೆಯ ಗಂಭೀರತೆಯನ್ನು ವಿಡಂಬನೆಯ ಮೂಲಕ ಮರ್ಮಕ್ಕೆ ತಾಕಿಸುತ್ತದೆ. ಹಾಸ್ಯದೊಂದಿಗೇ ಹಾಸುಹೊಕ್ಕಾಗಿರುವ, ಹಾಸ್ಯದ ಮತ್ತೊಂದು ಮಗ್ಗುಲಾದ ದುರಂತವನ್ನೂ ದಾಟಿಸುತ್ತದೆ. ಇದು ಈ ಸಲದ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಪಡೆದ ದಕ್ಷಿಣ ಕೊರಿಯದ ‘ಪ್ಯಾರಸೈಟ್’ ಚಿತ್ರದ ಜೀವಾಳ. ಹಸಿವು, ಅವಮಾನ, ಬಡತನ, ವರ್ಗಸಂಘರ್ಷ, ಅಸಮಾನತೆ ಸಿನೆಮಾ ಜಗತ್ತಿಗೆ ಹೊಸ ವಿಷಯವಲ್ಲ. ಸಾರ್ವಕಾಲಿಕ ಸಮೃದ್ಧ ಕಥಾವಸ್ತು. 1948 ರಲ್ಲಿ ಬಂದ ಇಟಲಿಯ ನಿರ್ದೇಶಕ ವಿಟ್ಟೋರಿಯೋ ಡಿ ಸಿಕಾನ ‘ಬೈಸಿಕಲ್ ಥೀವ್ಸ್’ ಚಿತ್ರ ಕೂಡ ಬಡತನವನ್ನೇ ಬಂಡವಾಳ ಮಾಡಿಕೊಂಡಿತ್ತು. ಪೋಸ್ಟರ್ ಅಂಟಿಸುವ ಕೆಲಸಕ್ಕೆ, ಸೈಕಲ್ ಇದ್ದರೆ ಕೆಲಸ ಎಂಬ ಒಪ್ಪಂದಕ್ಕೆ ಒಳಗಾಗಿ, ಮನೆಯ ವಸ್ತುಗಳನ್ನು ಅಡವಿಟ್ಟು, ಸೈಕಲ್ ಖರೀದಿಸುವ, ಕೆಲಸಕ್ಕೆ ಹಾಜರಾದ ದಿನವೇ ಮುಷ್ಕರದ ನೆಪದಲ್ಲಿ ಕಳುವಾಗುವ, ಅದನ್ನು ಹುಡುಕಿಕೊಂಡು ಹೋಗುವ, ಸೈಕಲ್‌ಕದ್ದ ಕಳ್ಳನ ಸ್ಥಿತಿ ಕಂಡು ಮರುಗುವ, ಸೈಕಲ್ ಕೇಳದೆ ಸುಮ್ಮನಾಗುವ, ಬರಿಗೈಯಲ್ಲಿ ಬರುವ ಬಡವನ ಸ್ಥಿತಿ.. ತಲ್ಲಣ ಉಂಟು ಮಾಡಿತ್ತು. ಪ್ರಪಂಚದ ಸಿನಿಪ್ರಿಯರನ್ನು ಸೂಜಿಗಲ್ಲಿನಂತೆ ಸೆಳೆದಿತ್ತು. ಹತ್ತು ಹಲವು ಪ್ರಶಸ್ತಿ ಪ್ರಶಂಸೆಗಳಿಗೆ ಪಾತ್ರವಾಗಿ, ಸಾರ್ವಕಾಲಿಕ ಚಿತ್ರಗಳ ಸಾಲಿಗೆ ಸೇರಿತ್ತು.

ಸರಿಸುಮಾರು ಎಪ್ಪತ್ತು ವರ್ಷಗಳ ನಂತರ, ದಕ್ಷಿಣ ಕೊರಿಯದ ನಿರ್ದೇಶಕ ಬಾಂಗ್ ಜೂನ್ ಹೋನ ‘ಪ್ಯಾರಸೈಟ್’ ಚಿತ್ರ ಕೂಡ ಅದೇ ಬಡತನವನ್ನು ಬಂಡವಾಳ ಮಾಡಿಕೊಂಡಿದೆ. ಮಾಸ್ ಮತ್ತು ಕ್ಲಾಸ್- ಪ್ರೇಕ್ಷಕರನ್ನು ಗೆದ್ದಿದೆ. ಹತ್ತು ಹಲವು ಪ್ರಶಸ್ತಿಗಳಿಗೆ ಪಾತ್ರವಾಗಿದೆ.ಪ್ರಪಂಚದಾದ್ಯಂತ ಸುದ್ದಿಯಲ್ಲಿದೆ. ಹಾಲಿವುಡ್‌ಚಿತ್ರ ಚರಿತ್ರೆಯಲ್ಲಿ, ಮೊತ್ತ ಮೊದಲ ಬಾರಿಗೆ ಆಸ್ಕರ್ ಪ್ರಶಸ್ತಿ ಪಡೆಯುವ ಮೂಲಕ ಪ್ರತಿಷ್ಠೆ-ಪ್ರಭಾವ-ಅಹಂಗಳ ಅಟ್ಟದಲ್ಲಿದ್ದ ಹಾಲಿವುಡ್‌ನ ಘಟಾನುಘಟಿಗಳನ್ನು ಬೆಚ್ಚಿ ಬೀಳಿಸಿದೆ. ಸಾಮಾನ್ಯವಾಗಿ ಹಾಲಿವುಡ್ ಚಿತ್ರಗಳನ್ನು ಹೊರತುಪಡಿಸಿ, ಸಣ್ಣಪುಟ್ಟ ದೇಶಗಳ ಚಿತ್ರಗಳತ್ತ ಆಸ್ಕರ್ ಚಿತ್ರ ಪ್ರಶಸ್ತಿ ಸಂಸ್ಥೆ ನೋಡಿದ್ದಾಗಲಿ, ಪ್ರಶಸ್ತಿ ನೀಡಿದ್ದಾಗಲಿ ಇಲ್ಲ. ಜೊತೆಗೆ ಈ ಬಾರಿಯ ಆಸ್ಕರ್‌ರೇಸ್‌ನಲ್ಲಿ ಅತ್ಯುತ್ತಮ ಚಿತ್ರಗಳ ಸಾಲಿನಲ್ಲಿ ಫೋರ್ಡ್‌ವಿ ಫೆರಾರಿ, ಜೊ ಜೊ ರ್ಯಾಬಿಟ್, 1917, ಜೋಕರ್, ದಿ ಐರಿಷ್ಮನ್, ಒನ್ಸ್ ಅಪಾನೆ ಟೈಮ್ ಇನ್‌ಹಾಲಿವುಡ್‌ಗಳಂತಹ ಅತಿರಥ ಮಹಾರಥರ ಚಿತ್ರಗಳು ಪೈಪೋಟಿಯಲ್ಲಿದ್ದವು. ಅವುಗಳನ್ನೆಲ್ಲ ಹಿಂದಕ್ಕೆ ಸರಿಸಿ ಬ್ಲ್ಯಾಕ್‌ಹಾರ್ಸ್‌ರೀತಿಯಲ್ಲಿ ಬ್ಲ್ಯಾಕ್ ಕಾಮಿಡಿಯ ‘ಪ್ಯಾರಸೈಟ್’ ಅತ್ಯುತ್ತಮ ಚಿತ್ರಪ್ರಶಸ್ತಿಯನ್ನು ಪಡೆದು ಬೀಗಿತು. ಹಾಗೆಯೇ ಆಸ್ಕರ್‌ಪ್ರಶಸ್ತಿ ಸಂಸ್ಥೆ ಆರೋಪದಿಂದಲೂ ಮುಕ್ತವಾಯಿತು. ಇನ್ನು ‘ಪ್ಯಾರಸೈಟ್’ ಚಿತ್ರದ ನಿರ್ದೇಶಕ ಬಾಂಗ್‌ಜೂನ್ ಹೋ ಬಗ್ಗೆ ಹೇಳುವುದಾದರೆ, ಮಿಲಿಟರಿ ಹಿಡಿತದಿಂದ ಪ್ರಜಾಪ್ರಭುತ್ವದೆಡೆಗೆ ಹೊರಳಿದ ದಕ್ಷಿಣ ಕೊರಿಯದ ಸ್ಥಿತಿಯನ್ನು, ದೇಶದ ಆ ಸ್ಥಿತ್ಯಂತರ ಸ್ಥಿತಿಯನ್ನು ಕಲಾನಿರ್ದೇಶಕನೊಬ್ಬ ಧ್ಯಾನಿಸಿದ ಬಗೆಯನ್ನು, ಚಿತ್ರದ ಮೂಲಕ ದಾಟಿಸಿದ ಕ್ರಮವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ‘ಪ್ಯಾರಸೈಟ್’ ಚಿತ್ರ ಅರ್ಥವಾಗುತ್ತದೆ, ಅರಿವು ಮೂಡಿಸುತ್ತದೆ. ಈತನ ಈ ಹಿಂದಿನ ಚಿತ್ರಗಳಾದ ಮೆಮೋರಿಸ್ ಆಫ್ ಮರ್ಡರ್, ಮದರ್, ಬಾರ್ಕಿಂಗ್ ಡಾಗ್ಸ್ ನೆವರ್ ಬೈಟ್’, ‘ದಿ ಹೋಸ್ಟ್’, ‘ಓಕ್ಜ’, ‘ಟೋಕಿಯೋ’, ‘ಸೀ ಫಾಗ್’ ಚಿತ್ರಗಳನ್ನು, ಅವು ಉಂಟು ಮಾಡಿದ ಸಂಚಲನವನ್ನು ಗಮನಿಸಿದರೆ, ಚಿತ್ರಜಗತ್ತಿನಲ್ಲಿ ದಕ್ಷಿಣ ಕೊರಿಯದ ಹೆಜ್ಜೆಗಳು ಗಟ್ಟಿಗೊಳ್ಳತೊಡಗಿರುವುದನ್ನು ಕಾಣಬಹುದು.

‘ಪ್ಯಾರಸೈಟ್’ ಚಿತ್ರದಲ್ಲಿ ಬಡತನವೇ ಮುಖ್ಯಭೂಮಿಕೆಯಲ್ಲಿದ್ದರೂ, ನಿರ್ದೇಶಕ ಬಾಂಗ್‌ನ ನೋಟವೇ ಬೇರೆ. ನಿರೂಪಿಸಿರುವ ಬಗೆಯೂ ಭಿನ್ನ. ಅದನ್ನು ಆತ ಬಡವ-ಶ್ರೀಮಂತರ ನಡುವಿನ ವರ್ಗ ಸಂಘರ್ಷದಷ್ಟು ಸರಳೀಕರಿಸಿ ನೋಡುವುದಿಲ್ಲ. ಸದ್ಯದ ಜಾಗತಿಕ ವಿದ್ಯಮಾನವಾದ ವರ್ಗ ಸಮಾಜದ ಧ್ರುವೀಕರಣ ಕುರಿತು ವ್ಯವಹರಿಸುವ ಚಿತ್ರ ಎಂದು ವ್ಯಾಖ್ಯಾನಿಸುತ್ತಾನೆ. ಅದಕ್ಕೆ ಪೂರಕವಾಗಿ ಆತ ಚಿತ್ರದಲ್ಲಿ ನಾಯಕ-ಖಳನಾಯಕರನ್ನು ಸೃಷ್ಟಿಸದೆ, ಸಂದರ್ಭಗಳನ್ನೇ ಆ ಜಾಗದಲ್ಲಿ ನಿಲ್ಲಿಸುತ್ತಾನೆ. ಹಸಿವು, ಅವಮಾನ, ಆಸೆ, ಅವಲಂಬನೆಗಳೇ ಪಾತ್ರಗಳಾಗಿವೆ.ಅದಕ್ಕೆ ಸಂಗೀತ, ಕ್ಯಾಮರಾ ಕೂಡ ಜೊತೆಯಾಗಿವೆ. ಚಿತ್ರ ನೋಡಿದಾದ ಮೇಲೆ ಬೇರೆ ಥರ ಇದೆ ಎನಿಸಿದರೂ, ಬೈಸಿಕಲ್‌ಥೀವ್ಸ್, ದೋ ಬಿಘಾ ಜಮೀನ್, ಬೂಟ್‌ಪಾಲಿಷ್, ದೂರದ ಬೆಟ್ಟ ಚಿತ್ರಗಳು ನೆನಪಿಗೆ ಬರುತ್ತವೆ. ಇಷ್ಟಕ್ಕೇ ಆಸ್ಕರ್‌ಕೊಡಬೇಕಿತ್ತೇ ಎಂಬ ಪ್ರಶ್ನೆಯೂ ಎದುರಾಗುತ್ತದೆ, ಇರಲಿ.

ಚಿತ್ರದ ಮೊದಲರ್ಧದಲ್ಲಿ ಇತ್ತ ಬಡ ಕುಟುಂಬದ ಪಡಿಪಾಟಲನ್ನು ಪ್ರದರ್ಶನಕ್ಕಿಟ್ಟರೆ, ಅತ್ತ ಶ್ರೀಮಂತನ ಮನೆಯ ವೈಭೋಗ ಅನಾವರಣಗೊಳ್ಳತೊಡಗುತ್ತದೆ. ಕಾಲೇಜು ಮೆಟ್ಟಿಲು ಹತ್ತದ ಬಡವನ ಮಗ ಸುಳ್ಳು ಸರ್ಟಿಫಿಕೇಟ್ ಸಹಾಯದಿಂದ ಶ್ರೀಮಂತನ ಮನೆಯ ಮಗಳಿಗೆ ಟೂಟರ್ ಆಗಿ ಮನೆಯೊಳಗೆ ನುಸುಳುವ, ಆ ಮೂಲಕ ನಿಧಾನವಾಗಿ ಮನೆ ಮಂದಿಯನ್ನೆಲ್ಲ ಸುಳ್ಳುಗಳ ಮೂಲಕವೇ ಕೆಲಸಕ್ಕೆ ಸೇರಿಸುತ್ತಾನೆ. ಅಲ್ಲಿ ಬಡ ಕುಟುಂಬದ ಸದಸ್ಯರು, ಯಾರಿಗೆ ಯಾರೂ ಗೊತ್ತಿಲ್ಲದ ಅಪರಿಚಿತರು. ಶ್ರೀಮಂತನ ಕುಟುಂಬದ ಸದಸ್ಯರು ಪ್ರತಿಯೊಂದಕ್ಕೂ ಮತ್ತೊಬ್ಬರನ್ನು ಅವಲಂಬಿಸುವವರು.

ಒಂದು ದಿನ ಶ್ರೀಮಂತನ ಪುಟ್ಟ ಮಗ ಡ್ರೈವರ್‌ನ ಬಟ್ಟೆಯ ವಾಸನೆ ಮತ್ತು ಅಡುಗೆಯವಳ ಬಟ್ಟೆಯ ವಾಸನೆ ಒಂದೇ ಎನ್ನುತ್ತಾನೆ. ಈ ‘ಒಂದೇ’ ಎನ್ನುವುದು ಮನುಷ್ಯರೆಲ್ಲ ಒಂದೇ ಎಂದು ಧ್ವನಿಸುತ್ತದೆ. ಆದರೆ ಆ ಕ್ಷಣಕ್ಕೆ ಬೆಚ್ಚಿಬೀಳುವ ಬಡವನ ಕುಟುಂಬ ಎಚ್ಚೆತ್ತುಕೊಳ್ಳುವುದಿಲ್ಲ. ಶ್ರೀಮಂತನ ಕುಟುಂಬವೂ ಅನುಮಾನ ವ್ಯಕ್ತಪಡಿಸಿ ಜಾಗೃತಗೊಳ್ಳುವುದಿಲ್ಲ. ಇದು ತಪ್ಪಿನಿಂದ ಮತ್ತಷ್ಟು ತಪ್ಪಿಗೆ ದಾರಿ ಮಾಡಿಕೊಡುತ್ತದೆ. ಎರಡೂ ಕುಟುಂಬಗಳನ್ನು ಸುಳಿಗೆ ಸೆಳೆಯುತ್ತದೆ.

ಇದೇ ಸಮಯಕ್ಕೆ ಸರಿಯಾಗಿ ಶ್ರೀಮಂತನ ಕುಟುಂಬ ಪ್ರವಾಸದ ನೆಪದಲ್ಲಿ, ಮನೆಯಿಂದ ಹೊರಗೆ ಹೋಗುತ್ತದೆ. ಆಗ ಇಡೀ ಮನೆ ಬಡಕುಟುಂಬದ ಮನೆಯಾಗುತ್ತದೆ, ಸ್ವಂತದ್ದಾಗುತ್ತದೆ. ಆ ಸಂಭ್ರಮದಲ್ಲಿ ಎಲ್ಲರೂ ಸಾಕಷ್ಟು ಕುಡಿದು, ತಿಂದು ತೇಗಿ ಮೈ ಮರೆಯುತ್ತಾರೆ. ಯಾವ ಕೊರತೆ, ಕೊರಗು ಇಲ್ಲವಾದಾಗ ಮನಸ್ಸು ಕರುಣೆಯ ಕಡೆಗೆ ಸಾಗುತ್ತದೆ. ಆ ಮನೆಯಲ್ಲಿ ಕೆಲಸಕ್ಕಿದ್ದ ಹಳೆಯ ಅಡುಗೆಯವಳ ಆರ್ತನಾದಕ್ಕೆ ಕರಗಿದ ಬಡವನ ಹೆಂಡತಿ, ಬಾಗಿಲು ತೆರೆಯುತ್ತಾಳೆ. ದುರಂತಗಳ ಸರಮಾಲೆಗೂ ಅದೇ ರಹದಾರಿಯಾಗುತ್ತದೆ. ಆ ತಿರುವು ಚಿತ್ರಕ್ಕೊಂದು ಹೊಸ ಆಯಾಮವನ್ನು ಒದಗಿಸುತ್ತದೆ. ಅಲ್ಲಿಂದ ಮುಂದಕ್ಕೆ ಘಟನೆಗಳೇ ಪಾತ್ರಗಳಾಗುತ್ತವೆ. ಧಾವಂತ ದುರಂತಕ್ಕೆಳೆಸುತ್ತದೆ. ನವಿರು ಹಾಸ್ಯ ನರಕ ಸೃಷ್ಟಿಸುತ್ತದೆ. ನಿರ್ಗತಿಕ ಸ್ಥಿತಿಯೇ ನೆಮ್ಮದಿ ಎಂಬ ಪಶ್ಚಾತ್ತಾಪಕ್ಕೂ ಈಡುಮಾಡುತ್ತದೆ. ತಾವೇ ಸೃಷ್ಟಿಸಿದ ಬಲೆಯಲ್ಲಿ ಬೀಳುವ ಬಡವ-ಶ್ರೀಮಂತರು ಪರಿಸ್ಥಿತಿಯ ಪರಾವಲಂಬಿಗಳಾಗುತ್ತಾರೆ. ಅದರಿಂದ ಅವರು ಹೊರಬರುತ್ತಾರೋ, ಇಲ್ಲವೋ.. ಚಿತ್ರ ನೋಡಿ.

Writer - ಬಸವರಾಜು ಮೇಗಲಕೇರಿ

contributor

Editor - ಬಸವರಾಜು ಮೇಗಲಕೇರಿ

contributor

Similar News