ಬಿಚ್ಚುಗತ್ತಿ: ಬೆಚ್ಚಿ ಬೀಳಿಸುತ್ತಾನೆ ದಳವಾಯಿ ಮುದ್ದಣ್ಣ!

Update: 2020-03-01 10:02 GMT

ಚಿತ್ರ: ಬಿಚ್ಚುಗತ್ತಿ

ತಾರಾಗಣ: ರಾಜವರ್ಧನ್, ಹರಿಪ್ರಿಯಾ, ಬಾಹುಬಲಿ ಪ್ರಭಾಕರ್

ನಿರ್ದೇಶನ: ಹರಿ ಸಂತೋಷ್

ನಿರ್ಮಾಣ: ಓಂ ಸಾಯಿಕೃಷ್ಣ ಪ್ರೊಡಕ್ಷನ್ಸ್

ಚಿತ್ರ ಆರಂಭವಾಗಿ ಅರ್ಧ ಗಂಟೆ ದಾಟಿದ ಬಳಿಕ ನಾಯಕನ ಪ್ರವೇಶವಾಗುತ್ತದೆ. ಒಂದು ಗಂಟೆ ದಾಟಿದ ಬಳಿಕ ಚಿತ್ರಕ್ಕೆ ನಾಯಕಿಯ ಎಂಟ್ರಿಯಾಗುತ್ತದೆ. ಬಹುಶಃ ಈಗ ನಿಮಗೆ ಇದು ನಾಯಕ ಪ್ರಧಾನ ಚಿತ್ರವಲ್ಲವೇನೋ ಎನ್ನುವ ಸಂದೇಹ ಕಾಡಬಹುದು. ಐತಿಹಾಸಿಕ ಚಿತ್ರವನ್ನು ಸಹಜವಾಗಿ ತೆಗೆಯಲು ಮುಂದಾದ ಹಾಗೆ ನಾಯಕ ಪ್ರಾಧಾನ್ಯತೆ ಮರೆಯಾಗುತ್ತದೆ. ಆ ನಿಟ್ಟಿನಲ್ಲಿ ನಿರ್ದೇಶಕ ಹರಿಸಂತು ಜಯ ಸಾಧಿಸಿದ್ದಾರೆ ಎನ್ನಬಹುದು.

ಚಿತ್ರದುರ್ಗದ ನಾಯಕರ ದಳವಾಯಿಗಳ ಸೈನಿಕರ ನಡುವೆ ನಮ್ಮ ಚಿತ್ರದ ನಾಯಕ ಎಲ್ಲೋ ಕಳೆದು ಹೋಗಿದ್ದಾನೆ ಎನ್ನುವ ಆತಂಕ ಅಭಿಮಾನಿಗಳಿಗೆ. ಆದರೆ ಆತನ ಬರುವಿಕೆಯನ್ನು ನಿರೀಕ್ಷಿಸುವಂತೆ ಬಾಲ್ಯದ ಪಾತ್ರವನ್ನು ತೋರಿಸಲಾಗಿದೆ. ದಳವಾಯಿ ಮುದ್ದಣ್ಣನ ಆಟಾಟೋಪ ಮೇರೆ ಮೀರಿದಾಗ ಯಾವಾಗ ಆತನನ್ನು ಎದುರಿಸಲು ಭರಮಣ್ಣ ಬರುತ್ತಾನೆ ಎಂದು ಕಾಯುವಂತೆ ಮಾಡುತ್ತದೆ. ವಿಪರ್ಯಾಸ ಏನೆಂದರೆ ಭರಮಣ್ಣ ಬಂದ ಮೇಲೆ ಕೂಡ ಅವರಿಬ್ಬರ ಮುಖಾಮುಖಿಗೆ ಬೇರೆ ಕಾಯಬೇಕಿದೆ. ಅಷ್ಟೆಲ್ಲ ಕಾದರೂ ಕೊನೆಯಲ್ಲಿ ಸರಿಯಾದ ಅವರಿಬ್ಬರ ಮಿಲಾಯಿಸುವಿಕೆ ನಡೆಯಲಿಲ್ಲ ಎನ್ನುವ ಕೊರಗು ಕಾಡುತ್ತದೆ. ಅಷ್ಟರಲ್ಲೇ ಚಿತ್ರದ ಭಾಗ ಎರಡು ಬರಲಿದೆ ಎನ್ನುವ ಬೆರಗು ಮೂಡುತ್ತದೆ!

ಬಿಚ್ಚುಗತ್ತಿ ಚಿತ್ರದ ಪ್ರಮುಖ ಆಕರ್ಷಣೆ ದಳವಾಯಿ ಮುದ್ದಣ್ಣ ಎಂದರೆ ತಪ್ಪಾಗಲಾರದು! ಯಾಕೆಂದರೆ, ನಾಯಕ ಭರಮಣ್ಣನ ಬರುವಿಕೆಗೆ ಕಾದು ಕಾದು ಸುಸ್ತಾದ ಪ್ರೇಕ್ಷಕ ಮುದ್ದಣ್ಣನ ಮುದ್ದಾದ ಕನ್ನಡವನ್ನೇ ಮೆಚ್ಚಲು ಶುರುಮಾಡುತ್ತಾರೆ. ಮುದ್ದಣ್ಣನಾಗಿ ನಟಿಸಿರುವ ತೆಲುಗು ‘ಬಾಹುಬಲಿ’ ಸಿನೆಮಾ ಖ್ಯಾತಿಯ ಪ್ರಭಾಕರ್ ಅವರ ತೊದಲುಗನ್ನಡ ಆರಂಭದಲ್ಲಿ ಕಿರಿಕಿರಿಯೆನಿಸಿದರೂ, ಆ ಕಂಠದಲ್ಲಿರುವ ಧೈರ್ಯ, ಕಣ್ಣಿನಲ್ಲಿರುವ ಕ್ರೌರ್ಯವನ್ನು ಪ್ರೇಕ್ಷಕರು ಸಂಭ್ರಮಿಸಲು ಶುರುಮಾಡುತ್ತಾರೆ. ಕಣ್ಮರೆಯಾದ ಮಲಯಾಳಂ ನಟ ಕಲಾಭವನ್ ಮಣಿಯನ್ನು ನೆನಪಿಸುವ ಪ್ರಭಾಕರ್ ಚಿತ್ರದ ತುಂಬ ತಮ್ಮ ಪ್ರತಿಭೆ ತೋರಿಸಿದ್ದಾರೆ. ‘ನಾನು ಒಲಿದರೆ ಮುತ್ತು ಮುನಿದರೆ ಮೃತ್ಯು’ ಎನ್ನುವ ಸಂಭಾಷಣೆ ಪ್ರೇಕ್ಷಕರ ಮನದೊಳಗೆ ನಾಟಿರುತ್ತದೆ.

ಆದರೆ ಇಂತಹ ಖಳನಿಗೆ ಸರಿಯಾದ ಎದುರಾಳಿಯಾಗಿ ಕಾಣಿಸಿಕೊಂಡಿರುವುದಕ್ಕೆ ನವನಾಯಕ ರಾಜವರ್ಧನ್ ಅವರನ್ನು ಪ್ರಶಂಸಿಸಲೇ ಬೇಕು. ಅದಕ್ಕೆ ಅವರ ಆರಡಿಯ ದೇಹ ಮಾತ್ರವಲ್ಲ, ಗಂಭೀರ ಕಂಠದ ನುಡಿ ಮತ್ತು ರಾಜಗಾಂಭೀರ್ಯದ ಮೋಡಿ ಎಲ್ಲವೂ ಸೇರುತ್ತದೆ. ನಾಯಕಿಯಾಗಿ ಹರಿಪ್ರಿಯಾ ಅವರಿಗೆ ಕೂಡ ಹೇಳಿಕೊಳ್ಳುವ ಅವಕಾಶಗಳಿಲ್ಲ. ಪ್ರೇಮದ ಸನ್ನಿವೇಶ ಬಿಟ್ಟರೆ, ತುಟಿಗೆ ರಂಗುಹಚ್ಚಿಕೊಂಡು ಯುದ್ಧಭೂಮಿಯಲ್ಲಿ ಕಾಣಿಸುವ ಅವರ ಪಾತ್ರ ಪರಿಣಾಮಕಾರಿ ಎನಿಸುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಚಿತ್ರದಲ್ಲಿ ದೃಶ್ಯಗಳ ನಡುವಿನ ಕಂಟಿನ್ಯುಟಿಗೆ ಭಂಗವಾಗಿರುವುದು ತೃಪ್ತಿಕರ ವೀಕ್ಷಣೆಗೆ ಅಡಚಣೆ ಎನಿಸುತ್ತದೆ. ಬಹು ನಿರೀಕ್ಷಿತವಾಗಿದ್ದ ಹುಲಿಯೊಂದಿಗಿನ ಹೋರಾಟ ಸೇರಿದಂತೆ ಪ್ರಮುಖ ದೃಶ್ಯಗಳು ಇನ್ನಷ್ಟು ಸೊಬಗು ಕಾಣದಿರಲು ಚಿತ್ರದ ಬಜೆಟ್‌ನ ನಿರ್ಧಿಷ್ಟತೆ ಕೂಡ ಕಾರಣವಾಗಿದೆ ಎನ್ನುವುದು ಹೇಳಬೇಕಾಗಿಲ್ಲ. ಇತಿಹಾಸ ಹೇಳುವ ಹಂಸಲೇಖ ಅವರ ಒಂದು ಗೀತೆ ಕೂಡ ದೃಶ್ಯಕಾವ್ಯವಾಗದೇ ಹೋಗಿರುವುದಕ್ಕೂ ಅದೇ ಕಾರಣ ಎನ್ನಬಹುದು! ಆದರೆ ಇರುವುದರಲ್ಲೇ ಎಷ್ಟು ಚೆನ್ನಾಗಿ ತೆಗೆಯಬಹುದೋ ಅಷ್ಟು ಚೆನ್ನಾಗಿ ಚಿತ್ರ ಮಾಡುವಲ್ಲಿ ನಿರ್ದೇಶಕ ಹರಿಸಂತು ಗೆದ್ದಿದ್ದಾರೆ. ಆದರೆ ಹಲವೆಡೆಗಳಲ್ಲಿ ಕಲಾವಿದರಿಂದ ಸ್ಥಳೀಯವೆನಿಸುವ ಸಂಭಾಷಣೆಗಳನ್ನು ತೆಗೆಸುವಲ್ಲಿ ಸೋತಿದ್ದಾರೆ. ಚಿತ್ರದುರ್ಗದ ಇತಿಹಾಸದ ಬಗ್ಗೆ ಮಾತನಾಡುವಾಗ ಇಂದಿನ ಕಾಲಘಟ್ಟಕ್ಕೆ ತಮ್ಮ ಐತಿಹಾಸಿಕ ಕಾದಂಬರಿಗಳ ಮೂಲಕ ಕೊಂಡಿಯಾಗಿರುವವರು ಬಿ.

ಎಲ್ ವೇಣು. ಆದರೆ ಅವರದೇ ಕಾದಂಬರಿ ಸಿನೆಮಾ ಆಗಿ ಬದಲಾಗಬೇಕಾದರೆ ಅದರಲ್ಲಿ ಕೂಡ ಬದಲಾವಣೆಗಳಾಗಿವೆ. ಈ ಸಿನೆಮಾದ ಹಿಂದಿನ ಬರಹಗಾರರಾಗಿ ಸ್ವತಃ ಕೆಲಸ ಮಾಡಿರುವ ವೇಣು ಅವರೇ ಈ ಬದಲಾವಣೆಗೆ ಕಾರಣಕರ್ತರೂ ಹೌದು. ನಕುಲ್ ಅಭಯಂಕರ್ ಸಂಗೀತ. ಆಕರ್ಷಕ. ಆದರೆ ಉತ್ಸವದ ಹಾಡಿನಲ್ಲಿ ಆಧುನಿಕತೆ ನುಸುಳಿದಂತೆ ಭಾಸ. ಈ ವಿಚಾರದಲ್ಲಿ ಕಲಾನಿರ್ದೇಶನ ಮತ್ತು ಛಾಯಾಗ್ರಹಣದಲ್ಲಿ ಕಾಲಘಟ್ಟವನ್ನು ತೋರಿಸಿರುವುದನ್ನು ಅಭಿನಂದಿಸಲೇಬೇಕು.

ಸಿನೆಮಾ ನಾಯಕ ಕೇಂದ್ರಿತವಾಗಿ ಎರಡೂವರೆ ಗಂಟೆಗಳೊಳಗೆ ಇತಿಹಾಸದ ಒಂದು ಭಾಗವನ್ನು ಹೇಳಲೇಬೇಕಾದ ಕಾರಣ, ಕೆಲವೊಂದಷ್ಟು ಪಾತ್ರಗಳು ಸೊರಗಿವೆ. ಅದೇ ವೇಳೆ ಕಾದಂಬರಿಯಲ್ಲಿ ಕಾಣದ ಇನ್ನೊಂದಷ್ಟು ಅಂಶಗಳು ಬೆಳಗಿವೆ. ರೇಖಾ, ಕಲ್ಯಾಣಿ, ಶರತ್ ಲೋಹಿತಾಶ್ವ, ರಮೇಶ್ ಪಂಡಿತ್, ಶ್ರೀನಿವಾಸ ಮೂರ್ತಿ ಮತ್ತು ದೊಣ್ಣೆ ರಂಗಪ್ಪ ನಾಯಕನ ಪಾತ್ರಧಾರಿ ಮೊದಲಾದವರು ಪಾತ್ರಗಳಾಗಿ ಮನದೊಳಗೆ ಉಳಿದು ಬಿಡುತ್ತಾರೆ.

ಬಿಚ್ಚುಗತ್ತಿ ಎನ್ನುವ ಹೆಸರು ಬಿಚ್ಚುಗತ್ತಿ ಭರಮಣ್ಣ ನಾಯಕನ ಸಲುವಾಗಿ ಚಿತ್ರಕ್ಕೆ ಇಡಲಾಗಿರುವಂತಹದ್ದು. ಆದರೆ ಚಿತ್ರದಲ್ಲಿ ಭರಮಣ್ಣನಿಗಿಂತ ಬೆರಗುಹುಟ್ಟಿಸುವಂತೆ ಗಮನ ಸೆಳೆದಿರುವುದು ಮುದ್ದಣ್ಣನ ಪಾತ್ರ! ಅದು ಸಹಜ ಕೂಡ ಯಾಕೆಂದರೆ ಇದು ಬಿಚ್ಚುಗತ್ತಿಯ ಮೊದಲ ಭಾಗವಾದ ‘ದಳವಾಯಿ ದಂಗೆ’ಯಾಗಿರುವ ಕಾರಣ, ದಳವಾಯಿ ಮುದ್ದಣ್ಣನೇ ಪ್ರಾಧಾನ್ಯತೆ ಪಡೆದುಕೊಂಡಿದ್ದಾನೆ. ಹಾಗಾಗಿ ಮುಂದಿನಭಾಗದಲ್ಲಿ ಭರಮಣ್ಣ ನಾಯಕನ ಬಗ್ಗೆ ಇನ್ನಷ್ಟು ನಿರೀಕ್ಷೆಗಳು ಉಂಟಾಗಿವೆ.

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News