2021ರ ಜನಗಣತಿ ಜಾತಿ ಆಧಾರಿತವಾಗಿರಬೇಕು: ಮಹಾರಾಷ್ಟ್ರ ಸ್ಪೀಕರ್

Update: 2020-03-01 14:20 GMT
   ಫೋಟೊ ಕೃಪೆ: //www.facebook.com/NanaPatoleINC/

ಮುಂಬೈ, ಮಾ.1: 2021ರಲ್ಲಿ ನಡೆಸಲಾಗುವ ಜನಗಣತಿಯನ್ನು ಜಾತಿ ಆಧಾರದಲ್ಲಿ ನಡೆಸಬೇಕೆಂಬ ಒಬಿಸಿ ಮುಖಂಡರ ಆಗ್ರಹಕ್ಕೆ ತನ್ನ ಬೆಂಬಲವಿದೆ ಎಂದು ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ನಾನಾ ಪಟೋಲೆ ಹೇಳಿದ್ದಾರೆ. ಇತರ ಹಿಂದುಳಿದ ಜಾತಿ(ಒಬಿಸಿ)ಯ ಜನಸಂಖ್ಯೆಯನ್ನು ಕಂಡುಹಿಡಿಯಲು ಜಾತಿ ಆಧಾರಿತ ಜನಗಣತಿಯ ಅಗತ್ಯವಿದೆ. ಆದ್ದರಿಂದ 2021ರ ಜನಗಣತಿ ಜಾತಿ ಆಧಾರಿತವಾಗಿರದಿದ್ದಲ್ಲಿ ಜನಗಣತಿಯನ್ನು ಬಹಿಷ್ಕರಿಸಲು ಒಬಿಸಿ ಮುಖಂಡರು ನಿರ್ಧರಿಸಿದ್ದು ಇದಕ್ಕೆ ತನ್ನ ಸಹಮತವಿದೆ . ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾರನ್ನು ನಿಯೋಗವೊಂದು ಭೇಟಿಯಾಗಿ ಮನವಿ ಮಾಡಲಿದೆ ಎಂದು ಪಟೋಲೆ ಹೇಳಿದ್ದಾರೆ.

ಸರಕಾರ ಸಂವಿಧಾನದ ನಿಯಮವನ್ನು ಪಾಲಿಸದಿದ್ದಲ್ಲಿ ಆಗ ವ್ಯಕ್ತಿಗಳಿಗೆ ಸರಕಾರ ಕಡ್ಡಾಯ ಮಾಡಿರುವ ಪ್ರಕ್ರಿಯೆಯನ್ನು ಬಹಿಷ್ಕರಿಸುವ ಹಕ್ಕಿದೆ. ನಾವು ಮಹಾತ್ಮಾ ಗಾಂಧೀಜಿಯವರ ಮಂತ್ರವನ್ನು ಅನುಸರಿಸುತ್ತೇವೆ. ಒಬಿಸಿ ಗುಂಪಿಗೆ ಸೇರಿರುವ ಪ್ರಧಾನಿಗೆ ಜನತೆಯ ನೋವಿನ ಅರಿವು ಇರಬೇಕು ಎಂದವರು ಹೇಳಿದ್ದಾರೆ.

ದೇಶದಲ್ಲಿ ಒಬಿಸಿ ಜನಸಂಖ್ಯೆಯನ್ನು ಗುರುತಿಸಲು ಜಾತಿ ಆಧಾರಿತ ಜನಗಣತಿ ನಡೆಸಬೇಕೆಂದು ಕೇಂದ್ರ ಸರಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಜೂನ್ 8ರಂದು ಅಂಗೀಕರಿಸಲಾಗಿತ್ತು. ಈ ಬಗ್ಗೆ ಉಲ್ಲೇಖಿಸಿದ ಪಟೋಲೆ, ತಮಿಳುನಾಡು ಮತ್ತು ಬಿಹಾರದಲ್ಲಿ ಕೇಳಿಬಂದಿರುವ ಒತ್ತಾಯದ ರೀತಿಯಲ್ಲೇ, ಮಹಾರಾಷ್ಟ್ರದಲ್ಲೂ ಪ್ರತ್ಯೇಕ ಜನಗಣತಿ ಪ್ರಕ್ರಿಯೆ ನಡೆಸುವ ಬಗ್ಗೆ ಸರಕಾರ ಪರಿಶೀಲಿಸುತ್ತಿದೆ ಎಂದರು. ಈಗ ನಡೆಯುತ್ತಿರುವ ವಿಧಾನಸಭೆ ಅಧಿವೇಶನದಲ್ಲಿ ಪೌರತ್ವ ಕಾಯ್ದೆಯ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದವರು ಇದೇ ಸಂದರ್ಭ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News