ದಿಲ್ಲಿ ಹಿಂಸಾಚಾರ: ಬಂಧಿತರ ಹೆಸರು, ವಿಳಾಸ ಒದಗಿಸಲು ಮಾನವ ಹಕ್ಕು ಕಾರ್ಯಕರ್ತರ ಆಗ್ರಹ

Update: 2020-03-01 14:24 GMT

ಹೊಸದಿಲ್ಲಿ, ಮಾ.1: ದಿಲ್ಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಬಂಧನಕ್ಕೆ ಒಳಗಾಗಿರುವ ವ್ಯಕ್ತಿಗಳ ಹೆಸರು ಮತ್ತು ವಿಳಾಸವನ್ನು ಬಹಿರಂಗಗೊಳಿಸಬೇಕು ಎಂದು ಮಾನವ ಹಕ್ಕು ಕಾರ್ಯಕರ್ತರು ದಿಲ್ಲಿ ಪೊಲೀಸ್ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ಆಗ್ರಹಿಸಲಾಗಿದೆ.

ಬಂಧಿಸಲ್ಪಟ್ಟವರ ಹೆಸರು ಮತ್ತು ವಿಳಾಸವನ್ನು ಪೊಲೀಸ್ ನಿಯಂತ್ರಣ ಕೊಠಡಿಯ ಹೊರಗಡೆ ಪ್ರದರ್ಶಿಸಬೇಕೆಂಬ ಕಾನೂನಿದೆ. ಬಂಧಿತ ವ್ಯಕ್ತಿಗಳ ಮಾಹಿತಿಯನ್ನು ಕುಟುಂಬದವರಿಗೆ ಕಡ್ಡಾಯವಾಗಿ ಒದಗಿಸಬೇಕು ಎಂದು ಕಾನೂನಿನಲ್ಲಿ ತಿಳಿಸಲಾಗಿದೆ ಎಂದು ಕಾರ್ಯಕರ್ತರಾದ ಅಂಜಲಿ ಭಾರದ್ವಾಜ್, ‘ನ್ಯಾಷನಲ್ ಕ್ಯಾಂಪೇನ್ ಫಾರ್ ಪೀಪಲ್ಸ್ ರೈಟ್ ಟು ಇನ್ಫಾರ್ಮೇಶನ್’ನ ಸಹ ಸಂಯೋಜಕ ಪ್ರಶಾಂತ್ ಭೂಷಣ್, ಸಿಪಿಐ ಮುಖಂಡ ಎ ರಾಜ, ಅಮೃತಾ ಜೊಹ್ರಿ ಸಹಿತ ಹಲವರು ಸಹಿ ಹಾಕಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

 ಹೀಗಿದ್ದರೂ, ಈಶಾನ್ಯ ದಿಲ್ಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಬಂಧನಕ್ಕೆ ಒಳಗಾದವರ ಹೆಸರು ಮತ್ತು ವಿಳಾಸವನ್ನು ಈಶಾನ್ಯ ದಿಲ್ಲಿ ಅಥವಾ ಶಹದಾರ ಪೊಲೀಸ್ ನಿಯಂತ್ರಣ ಕೊಠಡಿಯ ಹೊರಗೆ ಪ್ರದರ್ಶಿಸಿಲ್ಲ. ಹಿಂಸಾಚಾರದ ಸಂದರ್ಭ ಹಾಗೂ ಬಳಿಕ ಹರಡುತ್ತಿರುವ ವದಂತಿಯ ಹಿನ್ನೆಲೆಯಲ್ಲಿ ಬಂಧಿತರ ವಿವರ ಬಹಿರಂಗಗೊಳಿಸುವ ಅಗತ್ಯ ಹೆಚ್ಚಿದೆ. ಈ ಬಗ್ಗೆ ತಕ್ಷಣ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪತ್ರದಲ್ಲಿ ಒತ್ತಾಯಿಸಲಾಗಿದೆ. ಪತ್ರದ ವಿವರವನ್ನು ಅಂಜಲಿ ಭಾರದ್ವಾಜ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News