ಪ್ರಾಣದ ಹಂಗು ತೊರೆದು 40ಕ್ಕೂ ಹೆಚ್ಚು ಜನರ ಜೀವ ಉಳಿಸಿದ ಮಹಿಳೆ ಮುಶ್ತಾರಿ ಖಾತೂನ್

Update: 2020-03-01 18:05 GMT

ಹೊಸದಿಲ್ಲಿ,ಮಾ.1: ಈಶಾನ್ಯ ದಿಲ್ಲಿಯ ನಿವಾಸಿ ಮುಶ್ತಾರಿ ಖಾತೂನ್, ತನ್ನ ಪತಿಯ ಆದಾಯಕ್ಕೆ ಪೂರಕವಾಗಿ ಹೊಲಿಗೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಬಡಮಹಿಳೆ. ಈಶಾನ್ಯ ದಿಲ್ಲಿಯಲ್ಲಿ ಹಿಂಸಾಚಾರ ಭುಗಿಲೆದ್ದಾಗ ಈ ದಿಟ್ಚ ಮಹಿಳೆ ತನ್ನ ಪ್ರಾಣದ ಹಂಗು ತೊರೆದು 40ಕ್ಕೂ ಅಧಿಕ ಮಂದಿಯನ್ನು ರಕ್ಷಿಸಿದ್ದಾರೆ.

42 ವರ್ಷ ವಯಸ್ಸಿನ ಖಾತೂನ್ ಮನೆಬಿಟ್ಟು ಹೋಗುವುದೇ ತುಂಬಾ ಕಡಿಮೆ. ಫೆಬ್ರವರಿ 25ರಂದು, ತನ್ನ ಬಂಧುಗಳಿರುವ ಖಾಜೂರಿ ಖಾಸ್ ಪ್ರದೇಶವನ್ನು ಗಲಭೆಕೋರರು ಸುತ್ತುವರಿದಾಗ ಮುಶ್ತಾರಿ ಒಂದು ಕಿ.ಮೀ. ವರೆಗೆ ರಸ್ತೆಯಲ್ಲೇ ನಡೆದು ಬಂದು ಗಲಭೆಕೋರರಿಗೆ ಮುಖಾಮುಖಿಯಾದರು. ದುಷ್ಕರ್ಮಿಗಳ ಇಟ್ಟಿಗೆ ಕಲ್ಲುಗಳು, ಪೆಟ್ರೋಲ್‌ ಬಾಂಬ್ ‌ಗಳ ಎಸೆತಗಳ ನಡುವೆಯೂ ಖಾಜೂರಿ ಖಾಸ್‌ನಲ್ಲಿ ಸಿಲುಕಿಕೊಂಡಿದ್ದ ತನ್ನ ಬಂಧುಗಳನ್ನು ಆಕೆ ಸಮೀಪಿಸಿದ್ದರು.

ಮುಶ್ತಾರಿ ಅಲ್ಲಿದ್ದ ಎಲ್ಲಾ 40 ಮಂದಿಯನ್ನು ತನ್ನ ಸಮಯಪ್ರಜ್ಞೆ ಬಳಸಿಕೊಂಡು ಮನೆಗಳ ತಾರಸಿಯೆಡೆಗೆ ಕೊಂಡೊಯ್ಯುವಲ್ಲಿ ಸಫಲರಾದರು. ಆನಂತರ ಅಲ್ಲಿಗೆ ಆಗಮಿಸಿದ ಪೊಲೀಸ್ ತಂಡವು ಅವರನ್ನು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಮಾಡಿತ್ತು.

   ತನ್ನ ಪತಿ ಹಕೀಂ ಜೊತೆ ವಾಸಿಸುವ ಚಂದೂನಗರ್ ಪ್ರದೇಶದಲ್ಲಿ ಮುಶ್ತಾರಿ ಈಗ ಆಕೆಯ ನೆರೆಹೊರೆಯವರ ಪಾಲಿಗೆ ‘ಹೀರೋ’ ಆಗಿ ಹೊರಹೊಮ್ಮಿದ್ದಾರೆ.

“ಒಂದು ವೇಳೆ ಯಾರಾದರೂ ಅಲ್ಲಿಗೆ ಹೋಗದೆ ಇದ್ದಲ್ಲಿ, ಅಲ್ಲಿದ್ದವರೆಲ್ಲರೂ ಪ್ರಾಣ ಕಳೆದುಕೊಳ್ಲುತ್ತಿದ್ದರೆಂಬುದು ನನಗೆ ಅರಿವಿತ್ತು’’ ಎಂದು ಮುಶ್ತಾರಿ ಆಂಗ್ಲ ದಿನಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

 “ಖಜೂರಿ ಖಾಸ್‌ನಲ್ಲಿ ದುಷ್ಕರ್ಮಿಗಳ ಗುಂಪು ಹತ್ತಿರ ಬರುತ್ತಿದ್ದಂತೆಯೇ, ಅಲ್ಲಿದ್ದವರಿಗೆ ಒಂದು ಕಟ್ಟಡದ ತಾರಸಿಯಿಂದ ಇನ್ನೊಂದು ಕಟ್ಟಡದ ತಾರಸಿಗೆ ಜಿಗಿಯುವಂತೆ ನಾನು ತಿಳಿಸಿದೆ. ನಾವು ಒಂದು ತಾರಸಿಯಿಂದ ಇನ್ನೊಂದು ತಾರಸಿಗೆ ಚಲಿಸುತ್ತಲೇ ಹೋದಲ್ಲಿ, ಗಲಭೆಕೋರರಿಗೆ ನಾವು ಕಾಣಸಿಗುವ ಸಾಧ್ಯತೆ ಕಡಿಮೆಯಿರುತ್ತದೆ. ನನ್ನ ನೆರೆಹೊರೆಯ ಜನರಿಗೆ ಸಹಾಯಕ್ಕಾಗಿ ಬರುವಂತೆ ನಾನು ಕರೆ ಮಾಡಿದೆ. ನನ್ನೊಂದಿಗಿದ್ದ ಮಹಿಳೆಯರು ತುಂಬಾ ಭಯಭೀತರಾಗಿದ್ದರು. ಅವರಿಗೆ ಯಾರಾದರೊಬ್ಬರ ಮಾರ್ಗದರ್ಶನದ ಅಗತ್ಯವಿತ್ತು” ಎಂದು ಮುಶ್ತಾರಿ ಹೇಳುತ್ತಾರೆ.

ಆನಂತರ ಪೊಲೀಸರೊಂದಿಗೆ ಸ್ಥಳಕ್ಕೆ ಧಾವಿಸಿದ ಚಂದೂನಗರ ಪ್ರದೇಶದ ನಿವಾಸಿಗಳು ಮುಶ್ತಾರಿ ಹಾಗೂ ಇತರರನ್ನು ಸುರಕ್ಷಿತ ಸ್ಥಳಕ್ಕೆ ಕರೆತಂದರು. ಹೀಗೆ ಮುಶ್ತಾರಿ ಎಂಟು ಕುಟುಂಬಗಳ 40ಕ್ಕೂ ಅಧಿಕ ಮಂದಿಯ ಪ್ರಾಣವನ್ನು ಉಳಿಸಿದ್ದಾರೆಂದು ಸ್ಥಳೀಯರು ಭಾವುಕರಾಗಿ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News