ಅಮಿತ್‌ಶಾ ರ್ಯಾಲಿಯಲ್ಲಿ ಪ್ರಚೋದನಕಾರಿ ಘೋಷಣೆ ಕೂಗಿದ ಮೂವರ ಬಂಧನ

Update: 2020-03-02 16:30 GMT

   ಕೋಲ್ಕತಾ,ಫೆ.2: ‘ ದೇಶ್ ಕೆ ಗದ್ದಾರೋಂ ಕೋ ಗೋಲಿಮಾರೋ’ ಎಂಬ ಘೋಷಣೆಗಳನ್ನು ಕೂಗಿದ್ದರೆನ್ನಲಾದ ಬಿಜೆಪಿಯ ಕಾನೂನು ಘಟಕದ ಮೂವರು ಕಾರ್ಯಕರ್ತರನ್ನು ಕೋಲ್ಕತಾ ಪೊಲೀಸರು ರವಿವಾರ ಬಂಧಿಸಿದ್ದಾರೆ.

ರವಿವಾರ ಮಧ್ಯಾಹ್ನ ಕೋಲ್ಕತಾದಲ್ಲಿ ನಡೆದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ರ್ಯಾಲಿಗೆ ತೆರಳುತ್ತಿದ್ದಾಗ ಆರೋಪಿಗಳು ಈ ಘೋಷಣೆಯನ್ನು ಕೂಗಿದರೆನ್ನಲಾಗಿದೆ.

 ‘‘ಬಿಜೆಪಿಯ ಕಾನೂನು ಘಟಕದ ಕಾರ್ಯಕರ್ತರಾದ ಸುರೇಂದ್ರ ಕುಮಾರ್ ತಿವಾರಿ, ಧ್ರುವ ಬಸು ಹಾಗೂ ಪಂಕಜ್ ಬಸು ಎಂಬವರನ್ನು ಕೋಲ್ಕತಾದ ನ್ಯೂಮಾರ್ಕೆಟ್ ಪೊಲೀಸರು ರವಿವಾರ ರಾತ್ರಿ ಬಂಧಿಸಿದ್ದು, ಅವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ರ್ಯಾಲಿಯ ಸಿಸಿಟಿವಿ ದೃಶ್ಯಾವಳಿಗನ್ನು ಪರಿಸೀಲಿಸಿದ ಬಳಿಕ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ’’ ಎಂದು ಕೋಲ್ಕತಾದ ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಮುರಳೀಧರ ಶರ್ಮಾ ಸೋಮವಾರ ತಿಳಿಸಿದ್ದಾರೆ.

ಆದರೆ ಬಿಜೆಪಿ ಕಾರ್ಯಕರ್ತರಿಗೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ಕಿರುಕುಳ ನೀಡುತ್ತಿದೆಯೆಂದು ಪಶ್ಚಿಮಬಂಗಾಳ ಬಿಜೆಪಿ ವರಿಷ್ಠ ದಿಲೀಪ್ ಘೋಷ್ ಆಪಾದಿಸಿದ್ದಾರೆ. ಕೋಲ್ಕತಾದಲ್ಲಿ ಆಝಾದಿ ಘೋಷಣೆಗಳನ್ನು ಕೂಗಿದವರ ವಿರುದ್ಧ ಯಾಕೆ ಕಾನೂನು ಕ್ರಮ ಕೈಗೊಂಡಿಲ್ಲವೆಂದು ಅವರು ಪ್ರಶ್ನಿಸಿದ್ದಾರೆ.

ಈ ಮಧ್ಯೆ ಪ.ಬಂಗಾಳದ ಬಿಜೆಪಿ ನಾಯಕ ಶಮಿಕ್ ಭಟ್ಟಾಚಾರ್ಯ ಅವರು ಹೇಳಿಕೆಯೊಂದನ್ನು ನೀಡಿ, ತನ್ನ ಪಕ್ಷವು ಇಂತಹ ಪ್ರಚೋದನಕಾರಿ ಘೋಷಣೆಗಳನ್ನು ಬೆಂಬಲಿಸುವುದಿಲ್ಲವೆಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News