ಹಿಂಸಾಚಾರ ಸಂತ್ರಸ್ತರಿಗೆ ನೆರವು ನೀಡಿದ್ದನ್ನು 'ಸಿಎಎ ಪ್ರತಿಭಟನಕಾರರಿಗೆ ಹಣ ವಿತರಣೆ' ಎಂದ ಪ್ರತಾಪ್ ಸಿಂಹ!

Update: 2020-03-03 10:51 GMT

ಹೊಸದಿಲ್ಲಿ: 'ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟಿಸಲು ಜನರಿಗೆ ಹಣ ನೀಡಲಾಗುತ್ತಿದೆ' ಎಂಬ ತಲೆಬರಹವಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಫೇಸ್‍ ಬುಕ್ ಗ್ರೂಪ್ We Support Narendra Modi ಮುಖಾಂತರ ಈ ಪೋಸ್ಟ್ ಅನ್ನು 64,000 ಮಂದಿ ಶೇರ್ ಮಾಡಿದ್ದಾರೆ. ಕೆಲವರು ಇದಕ್ಕೆ ಕಮೆಂಟ್ ಮಾಡಿ `ಇಂತಹ ಪ್ರತಿಭಟನಾಕಾರರ ಕೊಲ್ಲಬೇಕು' ಎಂದು ಕರೆ ನೀಡಿದ್ದಾರೆ. ಇನ್ನು ಹಲವರು ಮುಸ್ಲಿಮರನ್ನು ಕೆಟ್ಟ ಭಾಷೆಯಲ್ಲಿ ನಿಂದಿಸಿ ಪ್ರತಿಕ್ರಿಯಿಸಿದ್ದಾರೆ.

ಆ ನಿರ್ದಿಷ್ಟ ಪೇಜ್ ನಲ್ಲಿ ಈ ವೀಡಿಯೋ ಪೋಸ್ಟ್ ಮಾಡಿರುವ ಅಮಿತ್ ಬಜಾಜ್ ಎಂಬ ವ್ಯಕ್ತಿ 'ಇದು ಸಾಕ್ಷಿ, ಹಿಂಸೆ ನಡೆಸಲು ಹಾಗೂ ಕಲ್ಲು ತೂರಾಟ ನಡೆಸಲು ಅವರಿಗೆ ಹಣ ನೀಡಲಾಗುತ್ತಿದೆ'' ಎಂದು ಬರೆದಿದ್ದಾರೆ.

"ಶಾಹೀನ್ ಬಾಗ್‍ ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಮಹಿಳೆಯರಿಗೆ ಹಣ ನೀಡಲಾಗುತ್ತಿದೆ ಎಂಬುದಕ್ಕೆ ವೀಡಿಯೋ ಪುರಾವೆ" ಎಂಬ ಶೀರ್ಷಿಕೆಯೊಂದಿಗೆ ಈ ವೀಡಿಯೋ ಆಧಾರದಲ್ಲಿ Asianet News Hindi ಕೂಡ ವರದಿ ಪ್ರಕಟಿಸಿದೆ. ಇದೇ ಅರ್ಥ ಕಲ್ಪಿಸಿ ದಿಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕುಲಜೀತ್ ಸಿಂಗ್ ಚಾಹಲ್ ಹಾಗೂ ತಾರೇಕ್ ಫತಾಹ್ ಕೂಡ ವೀಡಿಯೋ ಶೇರ್ ಮಾಡಿದ್ದಾರೆ. ಇಷ್ಟೇ ಅಲ್ಲದೆ ಸಂಸದ ಪ್ರತಾಪ್ ಸಿಂಹ  ಅವರು ಇದೇ ವಿಡಿಯೋವನ್ನು ಪೋಸ್ಟ್ ಮಾಡಿ "ಹಣಕ್ಕಾಗಿ ಹೋರಾಟ....ಹಣಕ್ಕಾಗಿ ಕಲ್ಲುತೂರಾಟ.... CAA ವಿರೋಧಿಗಳ ವ್ಯವಸ್ಥಿತ ಸಂಚು, ಜನರಿಗೆ ಹಣಕೊಟ್ಟು ದಂಗೆ ಮಾಡಿಸುತ್ತಿರುವುದಕ್ಕೆ ಇದೇ ಸಾಕ್ಷಿ" ಎಂದು ಆರೋಪಿಸಿದ್ದಾರೆ.

ವಾಸ್ತವವೇನು?

ಚೆನ್ನೈ ಮೂಲದ ಹೋರಾಟಗಾರ ಚಂದ್ರ ಮೋಹನ್ ಅವರು ಅದೇ ಸ್ಥಳಕ್ಕೆ ತೆರಳಿ ವೀಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವೀಡಿಯೋದಲ್ಲಿ ಪ್ರತಿಭಟನಾಕಾರರಿಗೆ ಹಣ ನೀಡಲಾಗುತ್ತಿದೆ ಎಂಬ ವಾದವನ್ನು ಸುಳ್ಳೆಂದು ಸಾಬೀತುಪಡಿಸಿದ್ದಾರೆಂದು Alt News ಕಂಡುಕೊಂಡಿದೆ.

"ಫೆಬ್ರವರಿ 28ರಂದು, ಬಾಬು ನಗರ್ ಎಂದು ಕರೆಯಲ್ಪಡುವ ಈ ಸ್ಥಳದ ಎ ಬ್ಲಾಕ್, ಗಲ್ಲಿ ಸಂಖ್ಯೆ 9ರಲ್ಲಿ ಶಿವ್ ವಿಹಾರ್ ನಲ್ಲಿ ಹಿಂಸಾಚಾರದಿಂದ ಸಂತ್ರಸ್ತರಾದ ಹಲವು ಜನರು ಬಂದಿದ್ದರು. ಮನೆಗಳನ್ನು ಕಳೆದುಕೊಂಡ ಹಲವರು ಇಲ್ಲಿದ್ದಾರೆ. ಇಲ್ಲಿಯ ಜನರು ಅವರಿಗೆ ಆಶ್ರಯ ನೀಡಿ ಹೃದಯ ವೈಶಾಲ್ಯ ಮೆರೆದಿದ್ದಾರೆ. ಸಂತ್ರಸ್ತರು ಇಲ್ಲಿ ಬೇರೆ ಬೇರೆ ಮನೆಗಳಲ್ಲಿದ್ದಾರೆ'' ಎಂದು ತಮ್ಮ ವೀಡಿಯೋದಲ್ಲಿ ಹೇಳುವ ಚಂದ್ರಮೋಹನ್ ನಂತರ ಶಾಹಝಾದ್ ಮಲಿಕ್ ಎಂಬ ವ್ಯಕ್ತಿಯನ್ನು ಪರಿಚಯಿಸುತ್ತಾರೆ.

"ವೀಡಿಯೋದಲ್ಲಿ ಹಣ ನೀಡುತ್ತಿದ್ದಾರೆಂದು ಹೇಳಲಾದ ವ್ಯಕ್ತಿ ಇವರು. ನಾವು ಸತ್ಯ ಹೇಳುತ್ತಿದ್ದೇವೆಂಬುದಕ್ಕೆ ಆ ವೀಡಿಯೋದಲ್ಲಿ ಕಾಣಿಸುತ್ತಿದ್ದ ಅದೇ ಬಟ್ಟೆಯನ್ನು ಅವರು ಧರಿಸಿದ್ದಾರೆ'' ಎಂದೂ ಹೇಳುತ್ತಾರೆ.  "ಸಂತ್ರಸ್ತರಿಗೆ ಇವರು ಅಗತ್ಯ ಸಾಮಗ್ರಿ ಒದಗಿಸಿದ್ದರು ಆದರೆ ಬಹಳಷ್ಟು ಮಂದಿಯಿದ್ದುದರಿಂದ ಎಲ್ಲವೂ ಖಾಲಿಯಾಯಿತು. ಕೊನೆಗೆ ತಮ್ಮ ಕಿಸೆಯಲ್ಲಿದ್ದ 70,000 ರೂ. ಹಣವನ್ನು ಅವರು ಸಂತ್ರಸ್ತರಿಗೆ ತಲಾ  500 ರೂ.ಗಳಂತೆ ನೀಡಿದರು. ಯಾವುದರಲ್ಲೂ ಒಳ್ಳೆಯದನ್ನು ಕಾಣಲು ಕೆಲ ಜನರಿಗೆ ಸಾಧ್ಯವಾಗುತ್ತಿಲ್ಲ, ಏಕೆಂದರೆ ಅವರಿಗೆ ಒಳ್ಳೆಯದನ್ನು ಮಾಡಲು ತಿಳಿದಿಲ್ಲ, ಅವರು ಸುಳ್ಳು ಹರಡುತ್ತಿದ್ದಾರೆ'' ಎಂದು ಚಂದ್ರ ಮೋಹನ್ ಹೇಳಿದ್ದಾರೆ.

ವೈರಲ್ ಆಗಿರುವ ವೀಡಿಯೋ ಹಾಗೂ ಚಂದ್ರಮೋಹನ್ ಅವರು ಚಿತ್ರೀಕರಿಸಿದ ವೀಡಿಯೋವನ್ನು Alt News  ಪರಿಶೀಲಿಸಿದ್ದು ಎರಡೂ ವೀಡಿಯೋಗಳಲ್ಲಿನ ಸ್ಥಳ ಒಂದೇ ಆಗಿದೆ ಎಂದು ಕಂಡುಕೊಂಡಿದೆ.

ಚಂದ್ರಮೋಹನ್ ಅವರು ಚೆನ್ನೈನಿಂದ ದಿಲ್ಲಿಗೆ ಪರಿಹಾರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಬಂದಿದ್ದಾಗಿ ತಿಳಿಸಿದ್ದು, ಅಲ್ಲಿ ಪರಿಹಾರ ಕಾರ್ಯದಲ್ಲಿ ನಿರತರಾಗಿದ್ದಾಗ ವೈರಲ್ ವೀಡಿಯೋ ಕುರಿತು ತಿಳಿದು ಸ್ಥಳೀಯರನ್ನು ಸಂಪರ್ಕಿಸಿ ವೈರಲ್ ವೀಡಿಯೋದಲ್ಲಿನ ಆರೋಪ ಸುಳ್ಳೆಂದು ತಿಳಿಸುವಂತಾಯಿತು ಎಂದಿದ್ದಾರೆ.

ವೀಡಿಯೋದಲ್ಲಿ ಕಾಣಿಸಿಕೊಂಡ ಶಾಹಝಾದ್‍ ಗೆ ಕೂಡ ತಾನು ಪರಿಹಾರ ಹಾಗೂ ಹಣ ನೀಡುತ್ತಿರುವ ವೀಡಿಯೋವನ್ನು ಸುಳ್ಳು ಪ್ರತಿಪಾದನೆಯೊಂದಿಗೆ ವೈರಲ್ ಮಾಡಿರುವ ಕುರಿತು ತಿಳಿದಿದೆ. ವೈರಲ್ ಆಗಿರುವ ವೀಡಿಯೋ ಕೇವಲ 30 ಸೆಕೆಂಡ್ ಅವಧಿಯದ್ದಾಗಿದ್ದರೆ, ಅದೇ ಸಂದರ್ಭದ 3 ನಿಮಿಷ ಅವಧಿಯ ವೀಡಿಯೋ ಇದೆ, ಅದರಲ್ಲಿ ಅಗತ್ಯವಿರುವವರು ಸಹಾಯ ಪಡೆದುಕೊಳ್ಳಬೇಕು ಎಂದು ತಾನು ಹೇಳುತ್ತಿರುವುದು ಕೇಳಿಸುತ್ತದೆ ಎಂದು ಅವರು ಹೇಳಿದ್ದಾರೆ.

ಶಾಹೀನ್ ಬಾಗ್ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಲು ರೂ 500 ಹಾಗೂ ಬಿರಿಯಾನಿ ಪಡೆಯುತ್ತಿದ್ದಾರೆಂದು ಬಿಜೆಪಿ ಸೋಶಿಯಲ್ ಮೀಡಿಯಾ ಘಟಕ ಮುಖ್ಯಸ್ಥ ಅಮಿತ್ ಮಾಳವಿಯ ಕೆಲ ದಿನಗಳ ಹಿಂದೆ ಮಾಡಿದ್ದ ಆರೋಪವನ್ನು Alt News  ಸುಳ್ಳೆಂದು ಸಾಬೀತುಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Full View Full View Full View Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News