'ದಿನಗೂಲಿ ಕಾರ್ಮಿಕನಾಗಿದ್ದ ತಂದೆಯೇ ನನ್ನ ಹೀರೋ': 300 ಕೋ.ರೂ. ವಹಿವಾಟಿನ 'ಐಡಿ ಫ್ರೆಶ್' ಸ್ಥಾಪಕ ಮುಸ್ತಫಾ ಪಿ.ಸಿ.

Update: 2020-03-03 15:49 GMT
Photo: facebook.com/musthafa.pc.37

'ಐಡಿ ಫ್ರೆಷ್ ಫುಡ್‌'ನ ಸಿಇಒ ಮತ್ತು ಸಹಸ್ಥಾಪಕ ಮುಸ್ತಫಾ ಪಿ.ಸಿ. ಅವರು 2005ರಲ್ಲಿ ತನ್ನ ಸೋದರ ಸಂಬಂಧಿಗಳೊಂದಿಗೆ ಸೇರಿಕೊಂಡು ಬೆಂಗಳೂರಿನಲ್ಲಿ ಇಡ್ಲಿ-ದೋಸಾ ಹಿಟ್ಟು ತಯಾರಿಯನ್ನು ಆರಂಭಿಸಿದ್ದರು. ಇಂದು ಅವರ ಕಂಪನಿಯು ಭಾರತದಾದ್ಯಂತ 24 ನಗರಗಳಲ್ಲಿ ಮತ್ತು ಯುಎಇಯಲ್ಲಿ ಕಾರ್ಯಾಚರಿಸುತ್ತಿದೆ. ಕಂಪನಿಯ ಹೂಡಿಕೆದಾರರಲ್ಲಿ ಪ್ರೇಮ್ ಜಿ ಇನ್ವೆಸ್ಟ್ ಮತ್ತು ಹೆಲಿಯನ್ ವೆಂಚರ್ ಪಾರ್ಟನರ್ಸ್ ನಂತಹ ಖ್ಯಾತ ಸಂಸ್ಥೆಗಳು ಸೇರಿವೆ. ಮುಸ್ತಫಾ ಅವರೊಂದಿಗೆ livemint.com ನಡೆಸಿದ ಸಂದರ್ಶನದ ಸಾರಾಂಶವಿಲ್ಲಿದೆ......

►ಸಂತೃಪ್ತಿಯ ಬಗ್ಗೆ ನಿಮ್ಮ ಪರಿಕಲ್ಪನೆ ಏನು?

ನನ್ನ ಪಾಲಿಗೆ ಸಂತೃಪ್ತಿಯು ಹಣ ಅಥವಾ ಯಶಸ್ಸಿನ ಗಳಿಕೆಯಲ್ಲ. ಜನರ ಬದುಕುಗಳಲ್ಲಿ ಧನಾತ್ಮಕ ಪರಿಣಾಮಗಳನ್ನುಂಟು ಮಾಡುವುದು ಸಂತೃಪ್ತಿ ನೀಡುತ್ತದೆ. ನನ್ನ ಎಳವೆಯಲ್ಲಿ ಹಸಿವನ್ನು ಅನುಭವಿಸಿರುವುದರಿಂದ ಎಲ್ಲ ಮಕ್ಕಳು ಹೊಟ್ಟೆ ತುಂಬಾ ಉಂಡು ಕಣ್ಣುಗಳಲ್ಲಿ ಕನಸುಗಳನ್ನು ಹೊತ್ತುಕೊಂಡು ಸುಖನಿದ್ರೆ ಮಾಡುವಂತಾಗಬೇಕು ಎನ್ನುವುದು ನನ್ನ ಪ್ರಯತ್ನವಾಗಿದೆ.

►ನೀವು ಭಾವಿಸಿರುವಂತೆ ನಿಮ್ಮ ಮಹಾನ್ ಸಾಧನೆ ಯಾವುದು?

ನಾನು ಬೆಳೆಯುತ್ತಿದ್ದಾಗ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಓದುವುದು ನನ್ನ ಕಲ್ಪನೆಯಲ್ಲಿಯೂ ಇರಲಿಲ್ಲ. ಆದರೆ ಸುಂದರವಾದ ಐಐಎಂ-ಬಿ ಕ್ಯಾಂಪಸ್‌ ನ್ನು ನೋಡಿದ ಬಳಿಕ ಅಲ್ಲಿ ಓದಬೇಕೆಂಬ ಆಕಾಂಕ್ಷೆ ನನ್ನಲ್ಲಿ ಹುಟ್ಟಿಕೊಂಡಿತ್ತು. ಹೀಗಾಗಿ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಲೇ ಆಕಾಂಕ್ಷೆಯನ್ನು ಈಡೇರಿಸಿಕೊಳ್ಳುವಲ್ಲಿ ಅಡ್ಡಿಯಾಗಬಹುದಾದ ನನ್ನ ದೌರ್ಬಲ್ಯಗಳನ್ನು ನೀಗಿಸಿಕೊಳ್ಳಲು ಪ್ರತಿದಿನ ಎರಡು ಗಂಟೆಗಳ ಸಮಯವನ್ನು ಅಧ್ಯಯನಕ್ಕೆ ಮೀಸಲಿಟ್ಟಿದ್ದೆ. ನನ್ನ ಕಠಿಣ ಶ್ರಮವು ಕೊನೆಗೂ ಫಲ ನೀಡಿತ್ತು ಮತ್ತು ನನ್ನ ಐಐಎಂ ಪ್ರವೇಶ ಸಾಧ್ಯವಾಗಿತ್ತು. 2018ರಲ್ಲಿ ‘ಯಂಗೆಸ್ಟ್ ಡಿಸ್ಟಿಂಗ್ವಿಷ್ಡ್ ಅಲುಮ್ನಿ’ ಪ್ರಶಸ್ತಿಯು ನನಗೆ ಒಲಿದು ಬಂದಿತ್ತು. ಪ್ರಶಸ್ತಿಯನ್ನು ಸ್ವೀಕರಿಸುವಾಗ ನನ್ನ ಹೆತ್ತವರು ವೇದಿಕೆಯಲ್ಲಿ ಉಪಸ್ಥಿತರಿದ್ದರು ಮತ್ತು ಹೆಮ್ಮೆಯಿಂದ ಬೀಗುತ್ತಿದ್ದರು. ಅವರ ಆ ಹೆಮ್ಮೆ ನನ್ನ ಜೀವನದ ಮಹಾನ್ ಸಾಧನೆಯಾಗಿದೆ.

►ನಿಮ್ಮ ನಿಜಜೀವನದಲ್ಲಿಯ ‘ಹೀರೋ’ಗಳು ಯಾರು?

ನನ್ನ ಹೆತ್ತವರು ನನ್ನ ಹೀರೋಗಳು. ನನ್ನ ತಂದೆ ದಿನಗೂಲಿ ಕಾರ್ಮಿಕರಾಗಿದ್ದರು ಮತ್ತು ಸಂಸಾರದಲ್ಲಿಯ ತುತ್ತಿನ ಚೀಲಗಳನ್ನು ತುಂಬಿಸಲು ಹೋರಾಡುತ್ತಿದ್ದರು. ದಿನದ ಮೂರು ಹೊತ್ತಿನ ಆಹಾರವನ್ನು ಒದಗಿಸುವುದೇ ಕಷ್ಟವಾಗಿದ್ದರೂ ನನ್ನ ಹೆತ್ತವರು ನನ್ನನ್ನು ಸುಶಿಕ್ಷಿತನಾಗಿಸಲು ಹೆಚ್ಚಿನ ಗಮನವನ್ನು ಕೇಂದ್ರೀಕರಿಸಿದ್ದರು. ಅವರಲ್ಲಿ ಇಚ್ಛಾಶಕ್ತಿಯಿತ್ತು ಮತ್ತು ನಾನಿಂದು ಏನಾಗಿದ್ದೇನೋ ಅದನ್ನು ಮಾಡಲು ಮಾರ್ಗವನ್ನು ಕಂಡುಕೊಂಡಿದ್ದರು.

► ಯಾವ ಸಂದರ್ಭದಲ್ಲಿ ನೀವು ಸುಳ್ಳು ಹೇಳಿದ್ದೀರಿ

ಐಡಿ ಫ್ರೆಷ್ ಆರಂಭಿಸಲು ಕೈತುಂಬ ಸಂಬಳ ತರುತ್ತಿದ್ದ ನನ್ನ ಉದ್ಯೋಗವನ್ನು ಬಿಡುವಾಗ ನನ್ನ ಜೀವನದಲ್ಲಿಯ ಅತ್ಯಂತ ದೊಡ್ಡ ಮತ್ತು ಭಯಂಕರ ಸುಳ್ಳನ್ನು ನಾನು ನನ್ನ ತಂದೆಗೆ ಹೇಳಿದ್ದೆ. ಈಗ ಹಿಂದಿರುಗಿ ನೋಡಿದರೆ ಧೈರ್ಯ ಮಾಡಿ ಮುನ್ನುಗ್ಗಿದ್ದು ಸರಿಯಾದ ನಿರ್ಧಾರವಾಗಿತ್ತು ಎಂಬ ತೃಪ್ತಿಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News