ದಿಲ್ಲಿಯ ಹ್ಯಾಟ್ ರೀಜೆನ್ಸಿಯಲ್ಲಿ ಭೋಜನ ಸವಿದ ಕೊರೋನಾ ವೈರಸ್ ಸೋಂಕಿತ

Update: 2020-03-03 17:18 GMT
file photo

ಹೊಸದಿಲ್ಲಿ, ಎ. 3: ತನ್ನ ಲಾ ಫಿಝಾ ರೆಸ್ಟೋರೆಂಟ್‌ನಲ್ಲಿ ಫೆಬ್ರವರಿ 28ರಂದು ಭೋಜನ ಸೇವಿಸಿದ ವ್ಯಕ್ತಿಯ ರಕ್ತ ಪರೀಕ್ಷೆಯಲ್ಲಿ ಕೊರೋನಾ ವೈರಸ್ ಸೋಂಕು ಕಂಡು ಬಂದ ಹಿನ್ನೆಲೆಯಲ್ಲಿ 14 ದಿನಗಳ ಕಾಲ ಸ್ವ ದಿಗ್ಭಂಧನದ ಪ್ರಕ್ರಿಯೆಗೆ ಒಳಗಾಗುವಂತೆ ರೆಸ್ಟೋರೆಂಟ್‌ನ ಸಿಬ್ಬಂದಿಯಲ್ಲಿ ದಿಲ್ಲಿಯ ಹ್ಯಾಟ್ ರೀಜೆನ್ಸಿ ಮಂಗಳವಾರ ವಿನಂತಿಸಿದೆ.

ರೆಸ್ಟೋರೆಂಟ್‌ನಲ್ಲಿ ಭೋಜನ ಸ್ವೀಕರಿಸಿದ ವ್ಯಕ್ತಿಗೆ ಕೊರೋನಾ ವೈರಸ್ ಸೋಂಕು ಇದೆ ಎಂಬ ಮಾಹಿತಿ ತಿಳಿದ ಬಳಿಕ ಹ್ಯಾಟ್ ರೀಜೆನ್ಸಿ ತನ್ನ ರೆಸ್ಟೋರೆಂಟ್, ಸಭೆ ನಡೆಯುವ ಸ್ಥಳ, ಸಾರ್ವಜನಿಕ ಸ್ಥಳ, ಸಹೋದ್ಯೋಗಿಗಳ ಲಾಕರ್‌ಗಳಲ್ಲಿ ತೀವ್ರ ಸ್ವಚ್ಛತಾ ಕ್ರಮಗಳನ್ನು ಕೈಗೊಂಡಿದೆ ಹಾಗೂ ಮುನ್ನೆಚ್ಚರಿಕಾ ಶಿಷ್ಟಾಚಾರ ಆರಂಭಿಸಿದೆ. ಆಗಮನ ಹಾಗೂ ನಿರ್ಗಮನದ ಸಂದರ್ಭ ಎಲ್ಲ ಸಹೋದ್ಯೋಗಿಗಳು ಹಾಗೂ ಗುತ್ತಿಗೆದಾರರ ದೇಹದ ಉಷ್ಣಾಂಶವನ್ನು ದಿನನಿತ್ಯ ಪರಿಶೀಲನೆ ಮಾಡಲಾಗುತ್ತಿದೆ ಎಂದು ಹ್ಯಾಟ್ ರೀಜೆನ್ಸಿಯ ಏರಿಯಾ ವಿ.ಪಿ. ಹಾಗೂ ಜನರಲ್ ಮ್ಯಾನೇಜರ್ ಜುಲಿಯಾನ್ ಆಯೆರ್ಸ್‌ ಹೇಳಿದ್ದಾರೆ.

“ಇದುವರೆಗೆ ನಮ್ಮ ಸಹೋದ್ಯೋಗಿಗಳಲ್ಲಿ ಕೊರೋನಾ ವೈರಸ್ ಸೋಂಕಿನ ಯಾವುದೇ ಪ್ರಕರಣಗಳು ಕಂಡು ಬಂದಿಲ್ಲ” ಎಂದು ಹ್ಯಾಟ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ನಾವು ಪರಿಸ್ಥಿತಿ ಅವಲೋಕಿಸುತ್ತಿದ್ದೇವೆ. ಅಂತಾರಾಷ್ಟ್ರೀಯ ಹಾಗೂ ಸ್ಥಳೀಯ ಪ್ರಾಧಿಕಾರದ ಶಿಫಾರಸಿನ ಮಾರ್ಗದರ್ಶನ ಹಾಗೂ ಶಿಷ್ಟಾಚಾರವನ್ನು ಅನುಸರಿಸುತ್ತಿದ್ದೇವೆ ಎಂದು ಹ್ಯಾಟ್ ರೀಜೆನ್ಸಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News