ದಿಲ್ಲಿ ಹಿಂಸಾಚಾರದ ನಂತರ 700 ಮಂದಿ ನಾಪತ್ತೆಯಾಗಿದ್ದಾರೆ: ಮಮತಾ ಆರೋಪ
ಕೊಲ್ಕತ್ತಾ: ಕೊರೊನಾ ವೈರಸ್ ಕುರಿತಾದ ಸುದ್ದಿಗಳನ್ನು ಉತ್ಪ್ರೇಕ್ಷಿಸಿ ದಿಲ್ಲಿ ಹಿಂಸಾಚಾರದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಕೇಂದ್ರದ ಬಿಜೆಪಿ ನೇತೃತ್ವದ ಸರಕಾರ ಯತ್ನಿಸುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ದಿಲ್ಲಿ ಹಿಂಸಾಚಾರದಲ್ಲಿ ಎಷ್ಟು ಜನರು ಸಾವನ್ನಪ್ಪಿದ್ದಾರೆ ಹಾಗೂ ಅವರಿಗೆ ನ್ಯಾಯ ದೊರೆಯುವುದೇ ಎಂಬಿತ್ಯಾದಿ ಪ್ರಶ್ನೆಗಳನ್ನು ಜನರು ಕೇಳದಂತೆ ಹೀಗೆ ಮಾಡಲಾಗುತ್ತಿದೆ ಎಂದು ಮಮತಾ ಹೇಳಿಕೊಂಡರು.
ದಿಲ್ಲಿ ಹಿಂಸಾಚಾರದ ನಂತರ 700 ಜನರು ನಾಪತ್ತೆಯಾಗಿದ್ದಾರೆ ಎಂದು ದಕ್ಷಿಣ ದಿನಾಜ್ಪುರ್ ಜಿಲ್ಲೆಯಲ್ಲಿ ಕೆಲ ದಿನಗಳ ಹಿಂದೆ ನಡೆದ ರ್ಯಾಲಿಯಲ್ಲಿ ಆರೋಪಿಸಿದ್ದ ಮಮತಾ ಮತ್ತೆ ಅದೇ ಮಾತನ್ನು ಇಂದು ಪುನರುಚ್ಛರಿಸಿದರು.
"ದಿಲ್ಲಿ ಹಿಂಸಾಚಾರದಲ್ಲಿ ಎಷ್ಟು ಮಂದಿ ಮೃತಪಟ್ಟಿದ್ದಾರೆಂದು ಯಾರಿಗೂ ತಿಳಿದಿಲ್ಲ. ಬಂಗಾಳದಲ್ಲಿ ಯಾರಿಗಾದರೂ ಇಲಿ ಕಚ್ಚಿದರೂ ಸಿಬಿಐ ತನಿಖೆಗೆ ಆಗ್ರಹಿಸುವ ಅವರು ಇಷ್ಟೊಂದು ಜನರು ಕೊಲೆಗೀಡಾದರೂ ನ್ಯಾಯಾಂಗ ತನಿಖೆಗೆ ಆದೇಶಿಸಿಲ್ಲ. ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಯಬೇಕು" ಎಂದು ಮಮತಾ ಹೇಳಿದರು.
ದಿಲ್ಲಿಯಲ್ಲಿ ನರಮೇಧ ನಡೆದಿದ್ದು, ಅದನ್ನು ಹಿಂಸಾಚಾರ ಎಂದು ಮುಚ್ಚಿ ಹಾಕಲಾಗಿದೆ ಎಂದವರು ಹೇಳಿದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮಮತಾ ಸರಕಾರವನ್ನು ಉರುಳಿಸಲಾಗುವುದು ಎಂಬ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಪ್ರತಿಕ್ರಿಯಿಸಿ ``ಮೊದಲು ದಿಲ್ಲಿಯನ್ನು ನಿಭಾಯಿಸಿ, ನಂತರ ಬಂಗಾಳದ ಬಗ್ಗೆ ಯೋಚಿಸಿ" ಎಂದರು.