ಕೊರೋನ ವಿರುದ್ಧ ತೆಲಂಗಾಣ ರಣಕಹಳೆ
ಹೈದರಾಬಾದ್,ಮಾ.4: ರಾಜ್ಯದ ಟೆಕ್ಕಿಯೊಬ್ಬರಿಗೆ ಮಾರಣಾಂತಿಕ ಕೊರೋನ ವೈರಸ್ ತಗಲಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ತೆಲಂಗಾಣ ಸರಕಾರವು ಈ ಸೋಂಕು ರೋಗದ ಹರಡುವಿಕೆಯನ್ನು ತಡೆಯಲು ತನ್ನ ಸರ್ವಸನ್ನದ್ಧತೆಯನ್ನು ಹಾಗೂ ಕೈಗೊಳ್ಳಲಾದ ಕ್ರಮಗಳ ಪರಾಮರ್ಶೆಯನ್ನು ನಡೆಸಿತು.
ತೆಲಂಗಾಣ ಸರಕಾರದ ಆರೋಗ್ಯ, ಪೌರಾಡಳಿತ ಹಾಗೂ ಪಂಚಾಯತ್ ರಾಜ್ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದು. ಕೊರೋನ ಪ್ರಕರಣಗಳ ನಿರ್ವಹಣೆಗಾಗಿ 24 ತಾಸುಗಳ ಸಹಾಯವಾಣಿಯನ್ನು ಸ್ಥಾಪಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಕೊರೋನ ವೈರಸ್ ಹಾಗೂ ಅದರ ಸೋಂಕು ತಗಲದಂತೆ ನೋಡಿಕೊಳ್ಳಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜನರಲ್ಲಿ ಜನಜಾಗೃತಿ ಮೂಡಿಸುವ ಅಭಿಯಾನವನ್ನು ತೀವ್ರಗೊಳಿಸಲು ಕೂಡಾ ತೆಲಂಗಾಣ ಸರಕಾರ ನಿರ್ಧರಿಸಿತು.
ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಹೈದರಾಬಾದ್ ಮೂಲದ 24 ವರ್ಷ ವಯಸ್ಸಿನ ಸಾಫ್ಟ್‌ವೇರ್ ಎಂಜಿನಿಯರ್‌ಗೆ ಕೊರೊನ ಸೋಂಕು ತಗಲಿರುವುದು ಸೋಮವಾರ ವೈದ್ಯಕೀಯ ತಪಾಸಣೆಯಿಂದ ತಿಳಿದುಬಂದಿತ್ತು. ತೆಲಂಗಾಣದಲ್ಲಿ ಕೊರೋನ ಸೋಂಕು ದೃಢಪಟ್ಟ ಮೊದಲ ಪ್ರಕರಣ ಇದಾಗಿದೆ.