ಕಾನೂನು ಜಾರಿಗೊಳಿಸಲು ಪೊಲೀಸರು ವಿಫಲರಾದರೆ ಪ್ರಜಾಪ್ರಭುತ್ವ ವಿಫಲ: ಅಜಿತ್ ದೋವಲ್

Update: 2020-03-05 13:52 GMT

ಹೊಸದಿಲ್ಲಿ, ಮಾ.5: ಪೊಲೀಸರು ಕಾನೂನು ಜಾರಿಗೆ ವಿಫಲವಾದರೆ ಪ್ರಜಾಪ್ರಭುತ್ವ ವ್ಯವಸ್ಥೆಯೂ ವಿಫಲವಾಗುತ್ತದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹೇಳಿದ್ದಾರೆ.

ಗುರುವಾರ ಗುರುಗಾಂವ್‌ನಲ್ಲಿ ಬ್ಯೂರೊ ಆಫ್ ಪೊಲೀಸ್ ರಿಸರ್ಚ್ ಆ್ಯಂಡ್ ಡೆವಲಪ್‌ಮೆಂಟ್ (ಬಿಪಿಆರ್‌ಡಿ) ಆಯೋಜಿಸಿದ್ದ ಮೂರನೇ ಯುವ ಪೊಲೀಸ್ ಅಧೀಕ್ಷಕರ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಕಾನೂನು ರಚನೆ ಪ್ರಜಾಪ್ರಭುತ್ವದ ಅತ್ಯಂತ ಪವಿತ್ರ ಕಾರ್ಯವಾಗಿದೆ. ಪೊಲೀಸರು ಆ ಕಾನೂನನ್ನು ಜಾರಿಗೊಳಿಸುತ್ತಾರೆ. ಪೊಲೀಸರು ವಿಫಲವಾದರೆ ಪ್ರಜಾಪ್ರಭುತ್ವವೇ ವಿಫಲವಾದಂತೆ ಎಂದು ದೋವಲ್ ಹೇಳಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾನೂನಿಗೆ ಸಂಪೂರ್ಣವಾಗಿ ಸಮರ್ಪಿತವಾಗುವುದು ಬಹಳ ಮುಖ್ಯ. ನೀವು ನ್ಯಾಯಯುತವಾಗಿ ಮತ್ತು ವಸ್ತುನಿಷ್ಟವಾಗಿ ಕೆಲಸ ಮಾಡುತ್ತಿರಬೇಕು. ಇತರರು ನಿಮ್ಮ ಮೇಲೆ ವಿಶ್ವಾಸ ಇರಿಸುವಂತಾಗಬೇಕು. ಪೊಲೀಸರ ಬಗ್ಗೆ ಜನಸಾಮಾನ್ಯರ ಮನದಲ್ಲಿ ಸರಿಯಾದ ಗ್ರಹಿಕೆ ಮೂಡಿಸುವುದು ಅತೀ ಮುಖ್ಯವಾಗಿದೆ ಎಂದು ದೋವಲ್ ಹೇಳಿದರು.

ಗ್ರಹಿಕೆ ಆತ್ದವಿಶ್ವಾಸವನ್ನು ನೀಡುತ್ತದೆ ಮತ್ತು ನಂಬಿಕೆಯನ್ನು ವೃದ್ಧಿಸುತ್ತದೆ. ಇದರಿಂದ ಜನತೆಯ ಮನದಲ್ಲಿ ಸುರಕ್ಷಿತೆಯ ಭಾವನೆ ಮೂಡುತ್ತದೆ ಎಂದ ದೋವಲ್, ಕರ್ತವ್ಯಕ್ಕೆ ನಿಯೋಜಿತವಾದ ಸ್ಥಳದಲ್ಲಿ ಜನರ ಮನಸ್ಥಿತಿಯನ್ನು ಅರಿತುಕೊಂಡು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವಂತೆ ಯುವ ಪೊಲೀಸರಿಗೆ ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News