“ಕೊರೊನವೈರಸ್‌ ಮೂಲ ಸೋನಿಯಾ ಗಾಂಧಿ ಮನೆಯೇ ಎಂಬ ತನಿಖೆ ನಡೆಯಲಿ”

Update: 2020-03-05 14:07 GMT

ಹೊಸದಿಲ್ಲಿ, ಮಾ.5: ಭಾರತದಲ್ಲಿ ಹರಡುತ್ತಿರುವ ಕೊರೊನಾ ವೈರಸ್‌ನ ಮೂಲ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯ ಮನೆಯಾಗಿರಬಹುದೇ ಎಂಬ ಬಗ್ಗೆ ತನಿಖೆ ನಡೆಸುವ ಅಗತ್ಯವಿದೆ ಎಂದು ರಾಜಸ್ತಾನದ ಆರ್‌ಎಲ್‌ಪಿ ಸಂಸದ ಹನುಮಾನ್ ಬೆನಿವಾಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಆರ್‌ಎಲ್‌ಪಿ(ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ) ಬಿಜೆಪಿಯ ಮಿತ್ರಪಕ್ಷವಾಗಿದೆ. ಭಾರತಕ್ಕೆ ಭೇಟಿ ನೀಡಿರುವ 14 ಇಟಾಲಿಯನ್ನರಿಗೆ ಕೊರೊನ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಈ ತನಿಖೆ ಅಗತ್ಯವಿದೆ ಎಂದು ಬೆನಿವಾಲ್ ಗುರುವಾರ ಲೋಕಸಭೆಯಲ್ಲಿ ಹೇಳಿದಾಗ ಸದನದಲ್ಲಿ ಗದ್ದಲ, ಕೋಲಾಹಲ ಉಂಟಾಯಿತು.

ಕೊರೊನ ವೈರಸ್ ಸೋಂಕಿನ ಬಗ್ಗೆ ಲೋಕಸಭೆಯಲ್ಲಿ ಚರ್ಚೆ ನಡೆಯುತ್ತಿದ್ದಾಗ ಬೆನಿವಾಲ್ ನೀಡಿದ ಹೇಳಿಕೆಗೆ ಕಾಂಗ್ರೆಸ್ ಸದಸ್ಯರು ತೀವ್ರ ಆಕ್ಷೇಪ ಎತ್ತಿ ಪ್ರತಿಭಟಿಸಿದ ಕಾರಣ ಕಲಾಪವನ್ನು ಒಂದು ಗಂಟೆಗೂ ಹೆಚ್ಚುಕಾಲ ಮುಂದೂಡಲಾಯಿತು. ಬೆನಿವಾಲ್ ಹೇಳಿಕೆಯನ್ನು ವಿರೋಧಿಸಿದ ಕಾಂಗ್ರೆಸ್ ಸದಸ್ಯರು ಸದನದ ಬಾವಿಗೆ ಇಳಿದು ಘೋಷಣೆ ಕೂಗುತ್ತಾ ಪ್ರತಿಭಟಿಸಿದರು. ಕೈಯಲ್ಲಿ ಹಿಡಿದಿದ್ದ ಪೇಪರ್‌ಗಳನ್ನು ಹರಿದು ಬಿಸಾಡಿದರಲ್ಲದೆ ಕೆಲವು ಕಾಗದದ ಚೂರುಗಳನ್ನು ಸ್ಪೀಕರ್‌ರ ಮೇಜಿನತ್ತ ಎಸೆದು ಆಕ್ರೋಶ ವ್ಯಕ್ತಪಡಿಸಿದರು.

 ಈ ಸಂದರ್ಭ ಸ್ಪೀಕರ್ ಪೀಠದಲ್ಲಿದ್ದ ರಾಜೇಂದ್ರ ಅಗರ್‌ವಾಲ್ ತಕ್ಷಣವೇ ಕಲಾಪವನ್ನು ಮುಂದೂಡಿದರು. ಕೊರೊನ ವೈರಸ್ ನಿಯಂತ್ರಣಕ್ಕೆ ಸರಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಸದನಕ್ಕೆ ವಿವರಿಸಿದರು. ವಿವಿಧ ಪಕ್ಷಗಳ ಸದಸ್ಯರು ಕೊರೊನ ವೈರಸ್‌ನ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಕೊರೊನ ವೈರಸ್ ಸೋಂಕಿನ ಬಗ್ಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಈ ಹಿಂದೆಯೇ ಮುನ್ಸೂಚನೆ ನೀಡಿದ್ದರು ಎಂದು ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧುರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News