ಯೆಸ್ ಬ್ಯಾಂಕ್ ಬಿಕ್ಕಟ್ಟು : ಫೋನ್ ಪೇಗೂ ಸಂಕಷ್ಟ
ಮುಂಬೈ,ಮಾ.6: ತೀವ್ರವಾದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಯೆಸ್ ಬ್ಯಾಂಕ್‌ನ್ನು ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ವಶಕ್ಕೆ ತೆಗೆದುಕೊಂಡು, ಅದರ ವ್ಯವಹಾರಗಳಿಗೆ ನಿರ್ಬಂಧವನ್ನು ವಿಧಿಸಿದ ಬಳಿಕ, ಫೋನ್‌ಪೇ ನಂತಹ ಡಿಜಿಟಲ್ ಹಣ ಪಾವತಿ ವ್ಯವಸ್ಥೆಗಳ ಕಾರ್ಯನಿರ್ವಹಣೆಗೂ ತೊಂದರೆಯುಂಟಾಗಿದೆ. ಫೋನ್ ಪೇ ತನ್ನ ವ್ಯವಹಾರಗಳಿಗೆ ಖಾಸಗಿ ವಲಯದ ಬ್ಯಾಂಕ್ ಆಗಿರುವ ಯೆಸ್ ಬ್ಯಾಂಕ್ ಅನ್ನು ಅವಲಂಬಿಸಿದೆ.
ಫೋನ್‌ಪೇ ಆ್ಯಪ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಮೀರ್ ನಿಗಮ್ ಇಂದು ಬೆಳಗ್ಗೆ ಈ ಬಗ್ಗೆ ಟ್ವೀಟ್ ಮಾಡಿದ್ದು, ‘‘ ನಮ್ಮ ಪಾಲುದಾರ ಬ್ಯಾಂಕ್ (ಯೆಸ್ ಬ್ಯಾಂಕ್) ಅನ್ನು ಆರ್‌ಬಿಐ ನಿರ್ಬಂಧದಲ್ಲಿರಿಸಿದೆ. ಇದೀಗ ಇಡೀ ತಂಡವು ಫೋನ್ ಆ್ಯಪ್ ನ ಸೇವೆಗಳು ಮರಳಿ ಕಾರ್ಯನಿರ್ವಹಿಸುವಂತಾಗಲು ಅಹೋರಾತ್ರಿ ಶ್ರಮಿಸುತ್ತಿದೆ. ಕೆಲವೇ ತಾಸುಗಳಲ್ಲಿ ಮತ್ತೆ ಸಕ್ರಿಯವಾಗುವ ಆಶಾವಾದವನ್ನು ನಾವು ಹೊಂದಿದ್ದೇವೆ.’’ ಎಂದು ಹೇಳಿದ್ದಾರೆ.
ಭಾರತದ ಅತಿ ದೊಡ್ಡ ಡಿಜಿಟಲ್ ಪಾವತಿ ವೇದಿಕೆಯಾಗಿರುವ ಫೋನ್ ಪೇ, ತನ್ನ ವಹಿವಾಟು ಪ್ರಕ್ರಿಯೆಗಳಿಗೆ ಯೆಸ್ ಬ್ಯಾಂಕ್ ಅನ್ನು ಅವಲಂಭಿಸಿದೆ.ಬುಧವಾರ ಸಂಜೆಯಿಂದಲೇ ಯೆಸ್ ಬ್ಯಾಂಕ್‌ನ ನೆಟ್ ಬ್ಯಾಂಕಿಂಗ್ ಸೌಕರ್ಯಗಳು ಸ್ಥಗಿತಗೊಂಡಿದ್ದವು.
ಯೆಸ್‌ಬಾಂಕ್‌ನ ನೆಟ್‌ಬ್ಯಾಂಕಿಂಗ್ ವ್ಯವಸ್ಥೆಯ ಸ್ಥಗಿತದಿಂದಾಗಿ ಫ್ಲಿಪ್ ಕಾರ್ಟ್, ಸ್ವಿಗಿ, ಮಿಂತ್ರಾ, ಏರ್‌ಟೆಲ್, ಮೇಕ್‌ಮೈಟ್ರಿಪ್, ಪಿವಿಆರ್ ಮೊದಲಾದ ಮಾರ್ಕೆಟಿಂಗ್ ಆ್ಯಪ್‌ಗಳ ಕಾರ್ಯನಿರ್ವಹಣೆಗೂ ತೊಂದರೆಯಾಗುವ ಸಾಧ್ಯತೆಯಿದೆ.