ದಿಲ್ಲಿ ಹಿಂಸಾಚಾರ ಬಗ್ಗೆ ವರದಿ: 'ಮೀಡಿಯಾ ಒನ್', 'ಏಶಿಯಾನೆಟ್ ನ್ಯೂಸ್'ಗಳಿಗೆ 48 ಗಂಟೆ ನಿಷೇಧ ಹೇರಿದ ಕೇಂದ್ರ ಸರಕಾರ

Update: 2020-03-06 18:11 GMT

ಬೆಂಗಳೂರು,ಮಾ.6: ದಿಲ್ಲಿ ಹಿಂಸಾಚಾರದ ಬಗ್ಗೆ ಪ್ರಸಾರ ಮಾಡಿದ ವರದಿಗಳಿಗಾಗಿ ಮಲಯಾಳಂನ ‘ಏಶ್ಯಾನೆಟ್ ನ್ಯೂಸ್’ ಹಾಗೂ ‘ಮೀಡಿಯಾ ಒನ್’ ಸುದ್ದಿವಾಹಿನಿಗಳ ಪ್ರಸಾರಕ್ಕೆ ಕೇಂದ್ರ ಮಾಹಿತಿ ಹಾಗೂ ಪ್ರಸಾರ ಸಚಿವಾಲಯವು 48 ತಾಸುಗಳ ನಿಷೇಧ ವಿಧಿಸಿದೆ. ಶುಕ್ರವಾರ ಸಂಜೆ 7:30ರಿಂದ ಈ ಎರಡು ಸುದ್ದಿವಾಹಿನಿಗಳ ಪ್ರಸಾರ ಸ್ಥಗಿತಗೊಳಿಸಿದೆ. ಮಾರ್ಚ್ 8, ರವಿವಾರ ಸಂಜೆ. 7:30ರ ಬಳಿಕವಷ್ಟೇ ಅವು ತಮ್ಮ ಪ್ರಸಾರವನ್ನು ಪುನಾರಂಭಿಸಲಿವೆ. ಏಶ್ಯಾನೆಟ್ ನ್ಯೂಸ್ ಹಾಗೂ ಮೀಡಿಯಾ ಒನ್, ದಿಲ್ಲಿ ಹಿಂಸಾಚಾರದ ಬಗ್ಗೆ ಪ್ರಸಾರ ಮಾಡಿದ ವರದಿಗಳು ಪ್ರಚೋದನಕಾರಿ, ಪಕ್ಷಪಾತದಿಂದ ಕೂಡಿದ್ದವು ಹಾಗೂ ಆರೆಸ್ಸೆಸ್, ದಿಲ್ಲಿ ಪೊಲೀಸರನ್ನು ಟೀಕಿಸಿವೆ ಮತ್ತು ಒಂದು ನಿರ್ದಿಷ್ಟ ಸಮುದಾಯದ ಪರವಹಿಸಿದ್ದವು. ಅಲ್ಲದೆ ಪೌರತ್ವ ತಿದ್ದುಪಡಿ ಕಾಯ್ದೆಯ ಬೆಂಬಲಿಗರನ್ನು ಕೆಟ್ಟದಾಗಿ ಬಿಂಬಿಸಿವೆ ಎಂದು ಎಂದು ಕೇಂದ್ರ ಮಾಹಿತಿ ಹಾಗೂ ಪ್ರಸಾರ ಸಚಿವಾಲಯದ ಆದೇಶದಲ್ಲಿ ಆಪಾದಿಸಲಾಗಿದೆ.

 ದಿಲ್ಲಿಯ ಜಫ್ರಾಬಾದ್‌ನಲ್ಲಿ ನಡೆದ ಹಿಂಸಾಚಾರ ಹಾಗೂ ಗಲಭೆಯ ವೇಳೆ ಪೊಲೀಸರು ಮೂಕ ಪ್ರೇಕ್ಷಕರಾಗಿ ವರ್ತಿಸಿದ್ದಾರೆಂದು ಏಶ್ಯಾನೆಟ್ ನ್ಯೂಸ್ ವರದಿಗಾರ ಪ್ರಕಟಿಸಿದ ವರದಿಯು ಈ ತಾತ್ಕಾಲಿಕ ನಿಷೇಧಕ್ಕೆ ಕಾರಣವೆಂದು ಆದೇಶದಲ್ಲಿ ತಿಳಿಸಲಾಗಿದೆ. ಮೀಡಿಯಾ ಒನ್ ನ್ಯೂಸ್‌ನ ಫೋನ್ ಇನ್ ಸಂಭಾಷಣೆ. ಕಾರ್ಯಕ್ರಮದಲ್ಲಿ ದಿಲ್ಲಿ ವರದಿಗಾರ ಹಸ್ಸನುಲ್ ಬನ್ನಾ ಅವರು ಹಿಂಸಾಚಾರದಲ್ಲಿ ಸಿಎಎ ವಿರೋಧಿ ಪ್ರತಿಭಟನಕಾರರು ಗಾಯಗೊಂಡಿದ್ದಾರೆ ಮತ್ತು ಘಟನಾ ಸ್ಥಳಕ್ಕೆ ಆಗಮಿಸಲು ಹಾಗೂ ದುಷ್ಕರ್ಮಿಗಳನ್ನು ಬಂಧಿಸಲು ಪೊಲೀಸರು ನಿರಾಕರಿಸಿದ್ದರೆಂದು ವರದಿ ಮಾಡಿದ್ದುದು, ಸುದ್ದಿವಾಹಿನಿಯ 48 ತಾಸುಗಳ ನಿಷೇಧಕ್ಕೆ ಕಾರಣವೆಂದು ಆದೇಶ ತಿಳಿಸಿದೆ.

  ಗಲಭೆಕೋರರು ಪ್ರಯಾಣಿಕರಿಗೆ ತಡೆಯೊಡ್ಡಿ, ಧರ್ಮದ ಗುರುತಿನಲ್ಲಿ ಅವರ ಮೇಲೆ ದಾಳಿ ನಡೆಸಿದ್ದಾರೆ. ಹಿಂಸಾಚಾರ ಸತತ ಮೂರು ದಿನಗಳ ಕಾಲ ಮುಂದು ವರಿದು, ಗಲಭೆಕೋರರು ಅಂಗಡಿಗಳು, ಮನೆಗಳು ಹಾಗೂ ವಾಹನಗಳನ್ನು ದಾಳಿಕೋರರು ಸುಟ್ಟುಹಾಕಿದರೂ, ಪೊಲೀಸರು ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಮತ್ತು ಗಲಭೆಗಳನ್ನು ನಿಯಂತ್ರಿಸಲು ಕೇಂದ್ರ ಸರಕಾರ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲವೆಂಬ ಏಶ್ಯಾನೆಟ್ ನ್ಯೂಸ್‌ನ ವರದಿಯ ಬಗ್ಗೆ ಆದೇಶದಲ್ಲಿ ಆಕ್ಷೇಪ ವ್ಯಕ್ತಪಡಿಸಲಾಗಿದೆ.

ಮೀಡಿಯಾ ಒನ್ ಸುದ್ದಿವಾಹಿನಿಯು ದಿಲ್ಲಿ ಹಿಂಸಾಚಾರದ ಕುರಿತ ತನ್ನ ವರದಿಯಲ್ಲಿ ಕಲ್ಲೆಸೆತ, ಗಲಭೆ ಹಾಗೂ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುತ್ತಿರು ಸುದ್ದಿಯನ್ನು ಪ್ರಸಾರ ಮಾಡಿದೆ. ಉದ್ರಿಕ್ತ ಪರಿಸ್ಥಿತಿಯಲ್ಲಿ ಇಂತಹ ವರದಿಯ ಪ್ರಸಾರವು ಹಿಂಸಾಚಾರಕ್ಕೆ ಪ್ರಚೋದನೆ ನೀಡುವಂತಾಗಿತ್ತು ಹಾಗೂಕಾನೂನು ಮತ್ತು ಶಿಸ್ತು ನಿರ್ವಹಣೆಗೆ ಅಪಾಯವನ್ನೊಡ್ಡುತ್ತದೆ ಎಂದು ಆದೇಶವು ತಿಳಿಸಿದೆ.

1994ರ ಕೇಬಲ್ ಜಾಲ ನಿಯಮಾವಳಿಗಳಡಿ ಈ ಎರಡು ಚಾನೆಲ್‌ಗಳ ಮೇಲೆ ತಾತ್ಕಾಲಿಕ ನಿಷೇಧವನ್ನು ವಿಧಿಸಲಾಗಿದೆ ಎಂದು ಆದೇಶವು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News