ವೈದ್ಯಲೋಕಕ್ಕೆ ಅಚ್ಚರಿ ಎನಿಸಿದೆ 21 ವರ್ಷದ ವಿದ್ಯಾರ್ಥಿನಿಯ ಕೈಗಳು!
“ಕೆಲವೊಮ್ಮೆ ಇನ್ನಷ್ಟು ಉತ್ತಮ ವಿಷಯಗಳು ಒಟ್ಟುಗೊಳ್ಳಲು ಇರುವ ಒಳ್ಳೆಯ ವಿಷಯಗಳು ಕಳಚಿಕೊಳ್ಳುತ್ತವೆ” ಇದು ಶ್ರೇಯಾ ಸಿದ್ದನಗೌಡರ್ ತನ್ನ ಕೈಗಳ ಕಸಿಯ ಬಳಿಕ ತನ್ನ ನೋಟ್‌ಬುಕ್‌ನಲ್ಲಿ ಬರೆದುಕೊಂಡ ಮೊದಲ ಸಾಲು.
ಇಂದು ಶ್ರೇಯಾಳ ಕೈಬರಹ ಆಕೆಯ ಮೂಲ ಕೈಬರಹವನ್ನೇ ಹೋಲುತ್ತಿದೆ. ಆದರೆ ಕೇರಳದ 20ರ ಹರೆಯದ ಯುವಕನೋರ್ವ ಆಗಸ್ಟ್,2017ರಲ್ಲಿ ಮೃತನಾಗುವವರೆಗೂ ಆತನಿಗೆ ಸೇರಿದ್ದ,ಈಗ ಶ್ರೇಯಾಳದ್ದಾಗಿರುವ ಕೈಗಳ ಬಣ್ಣ ಆಕೆಯ ಶರೀರದ ಚರ್ಮದ ಬಣ್ಣವನ್ನೇ ಪಡೆದಿರುವುದು ವೈದ್ಯಲೋಕವನ್ನು ಅಚ್ಚರಿಯಲ್ಲಿ ಕೆಡವಿದೆ.
“ಈ ಪರಿವರ್ತನೆ ಹೇಗೆ ಆಯಿತು ಎನ್ನುವುದು ನನಗೆ ಗೊತ್ತಿಲ್ಲ. ಆದರೆ ಅವೀಗ ನನ್ನದೇ ಕೈಗಳು ಎಂದು ಭಾಸವಾಗುತ್ತಿದೆ. ಕಸಿಯ ಬಳಿಕ ಕೈಗಳ ಚರ್ಮದ ಬಣ್ಣ ಅತ್ಯಂತ ಕಪ್ಪಗಿತ್ತು. ಆ ಬಗ್ಗೆ ನಾನು ಕಳವಳಗೊಂಡಿರಲಿಲ್ಲ,ಆದರೆ ಅದೀಗ ನನ್ನ ಶರೀರದ ಬಣ್ಣಕ್ಕೆ ತಾಳೆಯಾಗುತ್ತಿದೆ” ಎನ್ನುತ್ತಾಳೆ ಏಷ್ಯಾದ ಮೊದಲ ಅಂತರ್-ಲಿಂಗ ಕೈ ಕಸಿ ಶಸ್ತ್ರಚಿಕಿತ್ಸೆಗೊಳಗಾಗಿರುವ ಶ್ರೇಯಾ(21).
ಆಕೆಗೆ ಎರಡೂ ಕೈಗಳ ಕಸಿ ಮಾಡಲು ಶಸ್ತ್ರಚಿಕಿತ್ಸೆ ನಡೆಸಲಾಗಿದ್ದ ಕೊಚ್ಚಿಯ ಅಮೃತಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್)ಯ ಸರ್ಜನ್‌ಗಳೀಗ ಇಂತಹ ಬದಲಾವಣೆಗಳಿಗೆ ಸ್ತ್ರೀ ಹಾರ್ಮೋನ್‌ಗಳು ಮುಖ್ಯ ಕಾರಣವಾಗಿರಬಹುದೇ ಎನ್ನುವುದನ್ನು ತಿಳಿದುಕೊಳ್ಳಲು ಸಂಶೋಧನೆ ನಡೆಸುತ್ತಿದ್ದಾರೆ.
ಜಾಗತಿಕವಾಗಿ ಕೈ ಕಸಿ ಪ್ರಕರಣಗಳ ಸಂಖ್ಯೆ 200ಕ್ಕೂ ಕಡಿಮೆಯಿದೆ. ಆದರೆ ಚರ್ಮದ ಬಣ್ಣ ಅಥವಾ ಕೈ ಆಕಾರದಲ್ಲಿ ಬದಲಾವಣೆಗಳನ್ನು ದಾಖಲಿಸಿರುವ ಯಾವುದೇ ವೈಜ್ಞಾನಿಕ ಸಾಕ್ಷಾಧಾರವಿಲ್ಲ. ಬಹುಶಃ ಇದು ಇಂತಹ ಮೊದಲ ಪ್ರಕರಣವಾಗಿದೆ ಎನ್ನುತ್ತಾರೆ ವೈದ್ಯರು.
“ವೈಜ್ಞಾನಿಕ ಜರ್ನಲ್ ವೊಂದರಲ್ಲಿ ಎರಡು ಕೈ ಕಸಿ ಪ್ರಕರಣಗಳನ್ನು ಪ್ರಕಟಿಸಲು ನಾವು ಬಯಸಿದ್ದೇವೆ. ಅದು ಸಮಯವನ್ನು ತೆಗೆದುಕೊಳ್ಳುತ್ತದೆ. ಶ್ರೇಯಾಳ ಪ್ರಕರಣದಲ್ಲಿ ಬಣ್ಣ ಬದಲಾವಣೆಯನ್ನು ನಾವು ದಾಖಲಿಸಿಕೊಳ್ಳುತ್ತಿದ್ದೇವೆ,ಆದರೆ ಬೆರಳುಗಳು ಮತ್ತು ಕೈಗಳ ಆಕಾರದಲ್ಲಿ ಬದಲಾವಣೆಗಳ ಬಗ್ಗೆ ತಿಳಿದುಕೊಳ್ಳಲು ನಮಗೆ ಹೆಚ್ಚಿನ ಸಾಕ್ಷ್ಯಾಧಾರಗಳ ಅಗತ್ಯವಿದೆ. ಇದೇ ಆಸ್ಪತ್ರೆಯಲ್ಲಿ ಪುರುಷ ದಾನಿಯೋರ್ವನಿಂದ ಎರಡು ಕೈಗಳನ್ನು ಸ್ವೀಕರಿಸಿದ್ದ ಅಫಘಾನ್ ಯೋಧನ ಚರ್ಮದ ಬಣ್ಣದಲ್ಲಿಯೂ ಅಲ್ಪ ಬದಲಾವಣೆಯನ್ನು ನಾವು ಗಮನಿಸಿದ್ದೆವು. ಆದರೆ ಆತ ಕಳೆದ ವಾರ ಅಫಘಾನಿಸ್ತಾನದಲ್ಲಿ ನಿಧನನಾಗಿದ್ದಾನೆ. ಆ ಪ್ರಕರಣದಲ್ಲಿ ಹೆಚ್ಚಿನ ದಾಖಲೀಕರಣ ಸಾಧ್ಯವಾಗಿಲ್ಲ’ ಎಂದು ಏಮ್ಸ್‌ನ ಪ್ಲಾಸ್ಟಿಕ್ ಮತ್ತು ರಿಕನ್‌ಸ್ಟ್ರಕ್ಟಿವ್ ಸರ್ಜರಿ ವಿಭಾಗದ ಮುಖ್ಯಸ್ಥ ಡಾ.ಸುಬ್ರಮಣ್ಯ ಅಯ್ಯರ್ ಹೇಳಿದರು.
ಅಂತರ್-ಲಿಂಗ ಕೈ ಕಸಿಗಳ ಕುರಿತಂತೆ ಸೀಮಿತ ಸಂಶೋಧನೆಗಳು ನಡೆದಿವೆ ಎಂದು ಹೇಳಿದ ಪ್ಲಾಸ್ಟಿಕ್ ಸರ್ಜನ್ ಡಾ.ಮೋಹಿತ ಶರ್ಮಾ ಅವರು,ಪಾಶ್ಚಾತ್ಯ ದೇಶವೊಂದರಲ್ಲಿ ಪುರುಷನಿಗೆ ಮಹಿಳೆಯ ಕೈಯನ್ನು ಕಸಿ ಮಾಡಿದ ಒಂದು ಪ್ರಕರಣ ದಾಖಲಾಗಿದೆ,ಆದರೆ ಕಸಿಯ ನಂತರ ಏನಾಗುತ್ತದೆ ಎನ್ನುವುದರ ಬಗ್ಗೆ ಅಲ್ಲಿ ವೈಜ್ಞಾನಿಕ ಸಂಶೋಧನೆ ನಡೆದಿಲ್ಲ. ಒಂದೆರಡು ವರ್ಷಗಳಲ್ಲಿ ದ್ರವಗಳ ಹರಿವಿಗೆ ಅವಕಾಶ ಕಲ್ಪಿಸಲು ದಾನಿಯ ಕೈ ಮತ್ತು ಕಸಿಗೊಳಗಾಗಿರುವ ವ್ಯಕ್ತಿಯ ಶರೀರದ ನಡುವಿನ ದುಗ್ಧರಸ ಮಾರ್ಗ ಸಂಪೂರ್ಣವಾಗಿ ತೆರೆದುಕೊಳ್ಳುತ್ತದೆ. ಮೆಲಾನಿನ್ ಅನ್ನು ಉತ್ಪಾದಿಸುವ ಕೋಶಗಳು ನಿಧಾನವಾಗಿ ದಾನಿಯ ಕೋಶಗಳನ್ನು ತೆರವುಗೊಳಿಸಿರುವ ಸಾಧ್ಯತೆಯಿದೆ ಮತ್ತು ಇದು ಬಣ್ಣ ಬದಲಾವಣೆಗೆ ಕಾರಣವಾಗಿದೆ ಎಂದರು.
ಡಾ.ಶರ್ಮಾ ಶ್ರೇಯಾಳಿಗೆ ಕೈ ಕಸಿ ಶಸ್ತ್ರಚಿಕಿತ್ಸೆ ನಡೆಸಿದ್ದ ವೈದ್ಯರ ತಂಡದ ಭಾಗವಾಗಿದ್ದರು.
ಮೆಲಾನಿನ್ ಚರ್ಮದ ಬಣ್ಣಕ್ಕೆ ಕಾರಣವಾಗಿರುವ ವರ್ಣದ್ರವ್ಯವಾಗಿದ್ದು, ಮೆಲಾನಿನ್ ಪ್ರಮಾಣ ಹೆಚ್ಚಾದಷ್ಟೂ ಚರ್ಮದ ಬಣ್ಣ ಹೆಚ್ಚು ಕಪ್ಪಾಗುತ್ತದೆ. ಶ್ರೇಯಾಳ ಶರೀರ ಕಡಿಮೆ ಪ್ರಮಾಣದಲ್ಲಿ ಮೆಲಾನಿನ್ ಉತ್ಪಾದಿಸುತ್ತಿದೆ ಎಂದು ವೈದ್ಯರು ಅಭಿಪ್ರಾಯ ಹೊಂದಿದ್ದಾರೆ.
ಸೆಪ್ಟೆಂಬರ್ 2016ರಲ್ಲಿ ಆಗ ಮಣಿಪಾಲದ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದ ಶ್ರೇಯಾ ತನ್ನೂರು ಪುಣೆಗೆ ತೆರಳುತ್ತಿರುವಾಗ ಬಸ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದಳು. ಆಕೆಯನ್ನು ಬದುಕಿಸಲು ವೈದ್ಯರು ಎರಡೂ ಕೈಗಳನ್ನು ಮೊಣಕೈವರೆಗೆ ಕತ್ತರಿಸಿದ್ದರು. ವರ್ಷದ ಬಳಿಕ ಆಕೆ ಆಗ ಏಷ್ಯಾದ ಏಕೈಕ ಕೈ ಕಸಿ ಕೇಂದ್ರವಾಗಿದ್ದ ಕೊಚ್ಚಿಯ ಏಮ್ಸ್‌ಗೆ ಭೇಟಿ ನೀಡಿದ್ದಳು.
ದಾನಿಗಳು ಸಿಗಲು ತಿಂಗಳುಗಟ್ಟಲೆ ಸಮಯ ಬೇಕಾಗುತ್ತದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದಾಗ ಶ್ರೇಯಾ ತಾನು ಉಳಿದುಕೊಂಡಿದ್ದ ಹೋಟೆಲ್‌ಗೆ ಬಂದು ಊರಿಗೆ ಮರಳಲು ಸಿದ್ಧತೆ ನಡೆಸುತ್ತಿದ್ದಾಗಲೇ ತುರ್ತು ರಕ್ತ ಪರೀಕ್ಷೆಗಾಗಿ ಆಸ್ಪತ್ರೆಯಿಂದ ಕರೆ ಬಂದಿತ್ತು.
ಎರ್ನಾಕುಲಂನ ಬಿ.ಕಾಮ್ ವಿದ್ಯಾರ್ಥಿ ಸಚಿನ್ ಎಂಬಾತ ಬೈಕ್ ಅಪಘಾತದಲ್ಲಿ ಸಿಲುಕಿ ಮಿದುಳು ಸಾವನ್ನಪ್ಪಿದ್ದ. ಆತನ ಕೈಗಳು ಮತ್ತು ಇತರ ಅಂಗಗಳನ್ನು ದಾನವಾಗಿ ನೀಡಲು ಆತನ ಕುಟುಂಬದವರು ಒಪ್ಪಿಕೊಂಡಿದ್ದರು.
ಶ್ರೇಯಾಳ ರಕ್ತದ ಮಾದರಿ ಸಚಿನ್ ರಕ್ತದ ಮಾದರಿಗೆ ತಾಳೆಯಾಗಿತ್ತು. ಅದೇ ದಿನ,ಅಂದರೆ 2017,ಆ.9ರಂದು 20 ಸರ್ಜನ್‌ಗಳು ಮತ್ತು 16 ಅರಿವಳಿಕೆ ತಜ್ಞರನ್ನೊಳಗೊಂಡಿದ್ದ ತಂಡವು ಶಸ್ತ್ರಚಿಕಿತ್ಸೆ ನಡೆಸಿ ಸಚಿನ್‌ನ ಕೈಗಳನ್ನು ಶ್ರೇಯಾಳ ಶರೀರಕ್ಕೆ ಕಸಿ ಮಾಡಿತ್ತು. ಈ ಶಸ್ತ್ರಚಿಕಿತ್ಸೆ 13 ಗಂಟೆಗೂ ಹೆಚ್ಚಿನ ಸಮಯವನ್ನು ತೆಗೆದುಕೊಂಡಿತ್ತು.
ಮುಂದಿನ ಒಂದೂವರೆ ವರ್ಷ ಫಿಸಿಯೊಥೆರಪಿ ಚಿಕಿತ್ಸೆಗಾಗಿ ಶ್ರೇಯಾ ಕೊಚ್ಚಿಯಲ್ಲೇ ಉಳಿದಿದ್ದಳು. ಬಾಹ್ಯ ನರಗಳು ಅಭಿವೃದ್ಧಿಗೊಳ್ಳಲು ಸಮಯ ತೆಗೆದುಕೊಂಡಿತ್ತು ಮತ್ತು ಸಂವೇದನೆ ದಿನಕ್ಕೆ 1-2 ಮಿ.ಮೀ.ನಷ್ಟು ಹೆಚ್ಚುತ್ತಿತ್ತು. ಆರಂಭದಲ್ಲಿ ಅವೆರಡೂ ಕೈಗಳು ಶ್ರೇಯಾಳ ಪಾಲಿಗೆ ತುಂಬ ಭಾರವಾಗಿ ಭಾಸವಾಗುತ್ತಿದ್ದವು.
ಶ್ರೇಯಾಳ ಸಪೂರವಾದ ಕೈಗಳ ಮೇಲ್ಭಾಗದೊಂದಿಗೆ ತಾಳೆಯಾಗಲು ಕಸಿ ಮಾಡಲಾಗಿದ್ದ ಕೈಗಳಲ್ಲಿದ್ದ ಹೆಚ್ಚುವರಿ ಕೊಬ್ಬು ನಿಧಾನವಾಗಿ ಕರಗಿದಾಗ ತೂಕದಲ್ಲಿ ಇಳಿಕೆ ಮೊದಲ ಬದಲಾವಣೆಗಳಲ್ಲೊಂದಾಗಿತ್ತು.
ಸ್ನಾಯು ಹೊಸ ದೇಹಕ್ಕೆ ತನ್ನನ್ನು ಮರುಹೊಂದಿಸಿಕೊಳ್ಳುವುದು ಈ ಬದಲಾವಣೆಯ ಹಿಂದಿನ ಕಾರಣವಿರಬಹುದು ಎಂದು ಪುಣೆಯಲ್ಲಿ ಶ್ರೇಯಾಗೆ ಫಿಸಿಯೊಥೆರಪಿ ಚಿಕಿತ್ಸೆ ನೀಡುತ್ತಿರುವ ಕೇತಕಿ ಡೋಕೆ ಅವರು,ನರವು ಸಂಕೇತಗಳನ್ನು ಕಳುಹಿಸಲು ಆರಂಭಿಸುತ್ತದೆ,ಇದನ್ನು ನರ ಮರುಜೋಡಣೆ ಎನ್ನಲಾಗುತ್ತದೆ ಮತ್ತು ಸ್ನಾಯುಗಳು ಶರೀರದ ಅಗತ್ಯಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸುತ್ತವೆ. ಪುರುಷನ ಮತ್ತು ಮಹಿಳೆಯ ಸ್ನಾಯುಗಳ ಕಾರ್ಯವಿಧಾನ ಭಿನ್ನವಾಗಿರುತ್ತವೆ. ಶ್ರೇಯಾಳ ಕೈಗಳಲ್ಲಿರುವ ಸ್ನಾಯುಗಳು ಹೆಣ್ಣು ಶರೀರಕ್ಕೆ ಹೊಂದಿಕೊಳ್ಳಲು ಆರಂಭಿಸಿರಬಹುದು. ಆದರೆ ಆಕೆಯ ಕೈಗಳಲ್ಲಿ ಇಷ್ಟೊಂದು ಬದಲಾವಣೆಗಳು ಆಗಬಹುದು ಎಂದು ನಿರೀಕ್ಷಿಸಿರಲಿಲ್ಲ ಎಂದರು.
ಕಳೆದ 3-4 ತಿಂಗಳುಗಳಲ್ಲಿ ಶ್ರೇಯಾಳ ಬೆರಳುಗಳು ಸಪೂರವಾಗುತ್ತಿರುವುದನ್ನು ತಾಯಿ ಸುಮಾ ಗಮನಿಸಿದ್ದರು. ಅಲ್ಲದೆ ಬೆರಳುಗಳು ಸ್ವಲ್ಪ ಉದ್ದವೂ ಆಗಿದ್ದವು. ಬೆರಳುಗಳು ಮಹಿಳೆಯ ಬೆರಳುಗಳಂತೆ ರೂಪಾಂತರಗೊಂಡಿದ್ದವು,ಮಣಿಗಂಟು ಸಣ್ಣಗಾಗಿತ್ತು. ಇವೆಲ್ಲ ಗಮನಾರ್ಹ ಬದಲಾವಣೆಗಳಾಗಿದ್ದವು ಎನ್ನುತ್ತಾರೆ ಸುಮಾ.
ಇಂತಹ ಬದಲಾವಣೆಗಳನ್ನು ನಾವೆಂದೂ ನಿರೀಕ್ಷಿಸಿರಲಿಲ್ಲ.ಇದು ಪುರುಷನ ಕೈಯನ್ನು ಮಹಿಳೆಗೆ ಜೋಡಿಸಿದ ನಮ್ಮ ಮೊದಲ ಪ್ರಕರಣವಾಗಿತ್ತು. ಸ್ತ್ರೀ ಹಾರ್ಮೋನ್‌ಗಳು ಈ ಬದಲಾವಣೆಗೆ ಕಾರಣವಾಗಿವೆ ಎಂದು ನಾವು ಊಹಿಸಬಲ್ಲೆವು ಅಷ್ಟೇ,ನಿಖರವಾದ ಕಾರಣವನ್ನು ತಿಳಿದುಕೊಳ್ಳುವುದು ತುಂಬ ಕಷ್ಟ ಎಂದು ಅಯ್ಯರ್ ಹೇಳಿದರು.
ಶ್ರೇಯಾಳ ಮೂರು ನರಗಳಲ್ಲೊಂದು ಮತ್ತು ಬೆರಳಿನ ಸ್ನಾಯುಗಳು ಇನ್ನೂ ಪೂರ್ಣವಾಗಿ ಕಾರ್ಯಾಚರಿಸುತ್ತಿಲ್ಲ,ಆದರೆ ಕಾಲಕ್ರಮೇಣ ಸರಿಹೋಗುತ್ತದೆ ಎಂದು ಡೋಕೆ ತಿಳಿಸಿದರು.
ಶ್ರೇಯಾ ತನ್ನೆರಡೂ ಕೈಗಳನ್ನು ಸಹಜವಾಗಿ ಬಳಸುವುದನ್ನು ಕಲಿತುಕೊಂಡಿದ್ದಾಳೆ. ಇದು ತನಗೆ ಸಹಜ ಸಾಮಾಜಿಕ ಬದುಕನ್ನು ಸಾಧ್ಯವಾಗಿಸಿದೆ ಎನ್ನುತ್ತಾಳೆ ಶ್ರೇಯಾ. ತನ್ಮಧ್ಯೆ ಇಂಜಿನಿಯರಿಂಗ್ ವ್ಯಾಸಂಗವನ್ನು ಮೊಟಕುಗೊಳಿಸಿದ ಆಕೆ ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ಬಿಎ ಓದುತ್ತಿದ್ದಾಳೆ. ಕಳೆದ ಸೆಮಿಸ್ಟರ್‌ನಲ್ಲಿ ಆಕೆ ತನ್ನ ಸ್ವಂತ ಕೈಯಿಂದಲೇ ಪರೀಕ್ಷೆಯನ್ನು ಬರೆದಿದ್ದಳು.
ಕೃಪೆ: indianexpress.com