ಜೈಲಿನಲ್ಲಿರುವ ರೈತ ನಾಯಕ ಅಖಿಲ್ ಗೊಗೋಯಿಗೆ ಅನಾರೋಗ್ಯ: ಬಿಡುಗಡೆಗೆ ಆಗ್ರಹ

Update: 2020-03-07 16:23 GMT

ಗುವಾಹತಿ, ಮಾ. 7: ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ 2019 ಡಿಸೆಂಬರ್ 27ರಂದು ಬಂಧಿತರಾಗಿ ಜೈಲಿನಲ್ಲಿ ಇರುವ ಅಸ್ಸಾಂ ಮೂಲದ ರೈತ ಸಂಘಟನೆ ಕೃಷಿಕ್ ಮುಕ್ತಿ ಸಂಗ್ರಾಮ ಸಮಿತಿ (ಕೆಎಂಎಸ್‌ಎಸ್) ನಾಯಕ ಹಾಗೂ ಆರ್‌ಟಿಐ ಕಾರ್ಯಕರ್ತ ಅಖಿಲ್ ಗೊಗೊಯೊ ಕೆಲವು ವಾರಗಳಿಗೆ ಗಂಭೀರ ಅಸ್ವಸ್ಥರಾಗಿದ್ದಾರೆ.

ಗುವಾಹತಿ ಜೈಲಿನ ಅಧಿಕಾರಿಗಳು ಅಖಿಲ್ ಗೊಗೊಯಿ ಅವರನ್ನು ಫೆಬ್ರವರಿ 29 ಹಾಗೂ ಮಾರ್ಚ್ 6ರ ನಡುವೆ ಎರಡು ಬಾರಿ ಗುವಾಹತಿ ವೈದ್ಯಕೀಯ ಕಾಲೇಜಿಗೆ ಚಿಕಿತ್ಸೆಗಾಗಿ ಕರೆದುಕೊಂಡು ಬಂದಿದ್ದಾರೆ.

ಕೆಲವು ದಿನಗಳ ಹಿಂದೆ ದುರ್ಬಲರಾಗಿರುವ ಗೊಗೊಯಿ ಅವರನ್ನು ವೀಲ್‌ ಚೆಯರ್‌ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಬಂದಿರುವ ವೀಡಿಯೊವನ್ನು ಸ್ಥಳೀಯ ಸುದ್ದಿ ಸಂಸ್ಥೆಯೊಂದು ಪ್ರಸಾರ ಮಾಡಿತ್ತು. ಈ ವೀಡಿಯೊ ಗೊಗೊಯಿ ಅವರ ಆರೋಗ್ಯದ ಬಗ್ಗೆ ಪ್ರಶ್ನಿಸುವಂತೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಸಾವಿರಾರು ಹೋರಾಟಗಾರರು ಗುವಾಹತಿಯಲ್ಲಿ ಧರಣಿ ನಡೆಸಿ ಗೊಗೋಯಿ ಅವರನ್ನು ನಿಶ್ಯರ್ತವಾಗಿ ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದರು.

ಮಾರ್ಚ್ 5ರಂದು ಜನಪ್ರಿಯ ಸಂಗೀತಗಾರ ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟಗಾರ ಮಾನಸ್ ರೋಬಿನ್ ವೀಡಿಯೊವೊಂದನ್ನು ಬಿಡುಗಡೆ ಮಾಡಿ ಅವರಿಗೆ ಕೂಡಲೇ ವೈದ್ಯಕೀಯ ಸೇವೆ ಒದಗಿಸುವಂತೆ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ ಹಾಗೂ ಆರೋಗ್ಯ ಸಚಿವ ಹೀಮಂತ ಬಿಸ್ವಾಸ್ ಶರ್ಮಾ ಅವರಲ್ಲಿ ಮನವಿ ಮಾಡಿದ್ದರು.

ರಾಜಕೀಯ ಭಿನ್ನಾಭಿಪ್ರಾಯದ ಕಾರಣಕ್ಕೆ ಅಸ್ಸಾಮಿಯೊಬ್ಬರನ್ನು ನಿಧಾನ ಸಾವಿಗೆ ದೂಡಿದರೆ ಚರಿತ್ರೆ ನಿಮ್ಮನ್ನು ಕ್ಷಮಿಸಲಾರದು ಎಂದು ಅವರು ವೀಡಿಯೊದಲ್ಲಿ ಹೇಳಿದ್ದರು. ಮಾರ್ಚ್ 5ರಂದು ಗೊಗೋಯಿ ಅವರ ಪತ್ನಿ ಗೀತಶ್ರೀ ತುಮುಲಿ, ‘‘ಏನು ನಡೆಯುತ್ತಿದೆ ಎಂಬುದು ನನಗೆ ತಿಳಿಯುತ್ತಿಲ್ಲ. ಜೈಲಿನ ಅಧಿಕಾರಿಗಳು ಯಾವುದೇ ಮಾಹಿತಿ ನೀಡುತ್ತಿಲ್ಲ’’ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News