ನಾಯಕನಷ್ಟೇ ‘ದ್ರೋಣ’ದ ತ್ರಾಣ!

Update: 2020-03-07 18:26 GMT

ಗ್ರಾಮೀಣ ಪ್ರದೇಶದಲ್ಲಿರುವ ಒಂದು ಅವ್ಯವಸ್ಥಿತ ಸರಕಾರಿ ಶಾಲೆ. ಅಲ್ಲಿಗೆ ಶಿಕ್ಷಕನಾಗಿ ಬಂದು ಅದರ ಏಳಿಗೆಗೆ ಹೋರಾಡಿ ಗೆಲ್ಲುವ ನಾಯಕ. ಇದು ದ್ರೋಣ ಚಿತ್ರದ ಒಂದೆಳೆ ಕತೆ.

ಸರಕಾರಿ ಶಾಲೆಗಳೆಂದರೆ ಒಂದು ಕಲ್ಪನೆ ಇದೆ. ಆ ಕಲ್ಪನೆಯನ್ನು ನಿಜವಾಗಿಸುವಂತಹ ವಾತಾವರಣದಲ್ಲಿಯೇ ಇರುವ ಶಾಲೆ ಅದು. ಗುರುವಾಗಿ ಬರುವವನ ಹೆಸರು ಗುರು. ಆದರೆ ಆತನ ಒಳ್ಳೆಯ ಪ್ರಯತ್ನಗಳ ವಿರುದ್ಧ ಎರಗುವವನು ರಘು. ಆತ ಆ ಶಾಲೆಯ ಸಹಾಯಕ ಮುಖ್ಯೋಪಾಧ್ಯಾಯ. ಆದರೆ ಮುಖ್ಯ ಶಿಕ್ಷಕನಿಗೆ ಬಡ್ಡಿ ದುಡ್ಡು ಕೊಟ್ಟು ಆತನನ್ನು ತನ್ನ ಮುಷ್ಠಿಯೊಳಗೆ ಇರಿಸಿಕೊಂಡಂತೆ ವರ್ತಿಸುತ್ತಿರುತ್ತಾನೆ. ಆದರೆ ಗುರು ಆತನನ್ನು ಕೂಡ ನಿಯಂತ್ರಣಕ್ಕೆ ತಂದು ಶಾಲೆಯನ್ನು ಜಿಲ್ಲಾಮಟ್ಟದಲ್ಲಿ ಮಾದರಿ ಶಾಲೆಯಾಗಿಸುತ್ತಾನೆ. ಅದು ಹೇಗೆ ಎನ್ನುವುದನ್ನು ನೋಡುವ ಕುತೂಹಲವಿದ್ದರೆ ಚಿತ್ರ ನೋಡಬಹುದು.
ನಿರ್ದೇಶಕ ಪ್ರಮೋದ್ ಚಕ್ರವರ್ತಿ ಎಂಟು ವರ್ಷಗಳ ಹಿಂದೆ ತೆರೆಕಂಡಂತಹ ತಮಿಳು ಚಿತ್ರ ‘ಸಾಟೈ’ಯನ್ನು ನಕಲು ಮಾಡಿ ಕತೆಗೂ ತಮ್ಮದೇ ಹೆಸರು ಹಾಕಿಕೊಂಡಿದ್ದಾರೆ. ಹಾಗಾಗಿ ಶಿವರಾಜ್ ಕುಮಾರ್ ಒಬ್ಬರೇ ಚಿತ್ರಕ್ಕೆ ಅಸಲಿ ನಾಯಕರಾಗಿ ಉಳಿದಿದ್ದಾರೆ. ರಘು ಪಾತ್ರದಿಂದ ಹಿಡಿದು ಉಳಿದೆಲ್ಲರಿಗೂ ಮೇಕಪ್‌ನಿಂದ ಹಿಡಿದು ಮೂಲ ಚಿತ್ರದ ಸಂಭಾಷಣೆಯನ್ನು ಕೂಡ ಎರವಲು ಛಾಯೆಯಲ್ಲಿಯೇ ಬಳಸಲಾಗಿದೆ. ಹಾಗಿದ್ದರೂ ಇದನ್ನೊಂದು ಸ್ಫೂರ್ತಿ ಚಿತ್ರವೆಂದಷ್ಟೇ ಹೇಳಿರುವ ನಿರ್ದೇಶಕರ ಧೈರ್ಯವನ್ನು ಮೆಚ್ಚಬೇಕು!

ಸರಿಯಾದ ಶಿಕ್ಷಣದ ಮೂಲಕ ಹೇಗೆ ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳನ್ನಾಗಿಸಬಹುದು ಎಂದು ತೋರಿಸುವುದು ಮೂಲ ಚಿತ್ರದ ಧ್ಯೇಯವಾಗಿತ್ತು. ಆದರೆ ಅದನ್ನು ಕೂಡ ತಮ್ಮ ಮೂಗಿನ ನೇರಕ್ಕೆ ತಿರುಚಿರುವ ನಿರ್ದೇಶಕರು ಶಿಕ್ಷಣದ ಕೇಸರೀಕರಣಕ್ಕೆ ಒತ್ತು ನೀಡಿರುವುದು ಚಿತ್ರದಲ್ಲಿ ಎದ್ದು ಕಾಣುವಂತಿದೆ. ಉದಾಹರಣೆಗೆ ಶಾಲೆಯಲ್ಲಿ ರಾಮನವಮಿ ಆಚರಿಸುವ ದೃಶ್ಯಗಳು. ಅಲ್ಲಿ ಕೇಸರಿ, ಕುಂಕುಮದ್ದೇ ಮೇಲಾಟ! ಜತೆಗೆ ಶಿಕ್ಷಣದ ಕತೆಯೊಳಗೆ ಅನಗತ್ಯವಾಗಿ ಒಂದಷ್ಟು ಹೊಡೆದಾಟಕ್ಕೆಂದೇ ರವಿಕಿಶನ್ ಪಾತ್ರದ ಸೃಷ್ಟಿ. ಹೊಡೆದಾಡುವ ನಾಯಕನ ಕತ್ತಿನಲ್ಲಿ ಓಂಕಾರದ ಚಿಹ್ನೆಯೊಂದು ಹೈಲೈಟು! ಶಿಕ್ಷಣವೇ ಶಕ್ತಿ ಎನ್ನುವುದನ್ನು ಯಾವುದೋ ಭಕ್ತಿಗೆ ಸೀಮಿತಗೊಳಿಸಿದಂತಾಗಿದೆ.

ಮುಖ್ಯ ಸಹಾಯಕ ಶಿಕ್ಷಕ ರಘು ಪಾತ್ರದ ಕಾಸ್ಟ್ಯೂಮ್ ಗಳಲ್ಲಿ ಮೂಲ ಚಿತ್ರದ ನಟ ತಂಬಿರಾಮಯ್ಯನನ್ನೇ ತುಂಬಿಸುವ ಪ್ರಯತ್ನ ನಡೆದಿದೆ. ಆದರೆ ರಂಗಾಯಣ ರಘು ಅವರು ತಮ್ಮದೇ ನಟನಾಶೈಲಿಯ ಆಕರ್ಷಣೆ ಉಳಿಸಿಕೊಂಡಿದ್ದಾರೆ. ಸ್ಫೂರ್ತಿ ಎನ್ನುವ ವಿದ್ಯಾರ್ಥಿನಿಯಾಗಿ ಸ್ವಾತಿ ಶರ್ಮಾ ಕೂಡ ಪಾತ್ರಕ್ಕೆ ಜೀವ ತುಂಬಿದ್ದಾರೆ. ಶಿಕ್ಷಕನ ಪಾತ್ರದಲ್ಲಿದ್ದರೂ ಶಿಸ್ತೇ ಇರದ ಖಳನಾಗಿ ನಾರಾಯಣ ಸ್ವಾಮಿ ನೀಡಿರುವ ಎಂದಿನ ನೈಜ ನಟನೆಗೆ ನಮೋ ಹೇಳಲೇಬೇಕು. ಮುಖ್ಯ ಶಿಕ್ಷಕರಾಗಿ ಬಾಬು ಹಿರಣ್ಣಯ್ಯ ಅವರ ನಟನೆಯೂ ಗಮನಾರ್ಹ. ಶಿವರಾಜ್ ಕುಮಾರ್ ತಾವು ಯಾವುದೇ ಚಿತ್ರ ಮಾಡಿದರೂ ಅದು ಅಂತಿಮವಾಗಿ ಅಭಿಮಾನಿಗಳನ್ನು ತಲುಪಬೇಕು ಎನ್ನುವ ಗುರಿ ಇರಿಸಿಕೊಂಡವರು.

ಒಳ್ಳೆಯ ಚಿತ್ರಗಳೆಂದರೆ ರಿಮೇಕ್ ಮಾಡಿ ಅದೇ ಕ್ವಾಲಿಟಿಯಲ್ಲಿ ನೀಡಲಿಕ್ಕೂ ಅವರು ತಯಾರಾಗಿರುತ್ತಾರೆ. ಪಾತ್ರದ ಪ್ರಾಮುಖ್ಯತೆ ಅರಿತ ಮೇಲೆ ಅದಕ್ಕೆ ತಕ್ಕ ಇಮೇಜನ್ನಷ್ಟೇ ಅರ್ಥಮಾಡಿಕೊಳ್ಳಲು ಅವರ ಅಭಿಮಾನಿಗಳಿಗೂ ಗೊತ್ತಿದೆ. ಹಾಗಾಗಿ ಇಂತಹ ಪ್ರಯೋಗಾತ್ಮಕ ಕತೆಗಳನ್ನು ಚಿತ್ರ ಮಾಡುವಾಗ ಕನ್ನಡದ್ದೇ ಆತ್ಮವುಳ್ಳ ಅಸಲಿ ಕತೆಯೇ ಇರಲಿ! ಆಗ ಅದು ಶಿವರಾಜ್ ಕುಮಾರ್ ಅವರು ಇಂತಹ ಪಾತ್ರಕ್ಕಾಗಿ ವಿನಿಯೋಗಿಸುವ ಸಮಯಕ್ಕೆ ಸಾರ್ಥಕತೆ ನೀಡಬಹುದು. ಒಟ್ಟಿನಲ್ಲಿ ದ್ರೋಣ ಎನ್ನುವ ಹೆಸರು ಯಾವ ಕಾರಣಕ್ಕೆ ಈ ಚಿತ್ರಕ್ಕೆ ಸೂಕ್ತ ಎನ್ನುವುದು ಕೊನೆಯ ತನಕವೂ ಗೊತ್ತಾಗುವುದಿಲ್ಲ. ಮಹಾಭಾರತದಲ್ಲಿ ಬರುವ ದ್ರೋಣನಂತೆ ಅರ್ಜುನನ್ನು ಬೆಳೆಸಲು ಏಕಲವ್ಯನ ಬೆರಳು ಪಡೆಯುವ ಪಕ್ಷಪಾತಿಯಂತೂ ಇಲ್ಲಿನ ನಾಯಕನಲ್ಲ. ಯುದ್ಧ ವಿದ್ಯೆ ಕಲಿಸುವ ಆಚಾರ್ಯನೂ ಅಲ್ಲ. ಹೋಗಲಿ ಬಿಡಿ ದ್ರೋಣಾಚಾರ್ಯನಷ್ಟು ವಯಸ್ಸಾದ ಪಾತ್ರವೂ ನಾಯಕನದ್ದಲ್ಲ. ಆದರೆ ನಾಯಕ ಶಿವಣ್ಣ ಒಬ್ಬರೇ ಈ ಚಿತ್ರದ ತ್ರಾಣ ಎಂದು ಮಾತ್ರ ಹೇಳಬಹುದು!

ತಾರಾಗಣ: ಶಿವರಾಜ್ ಕುಮಾರ್, ಸ್ವಾತಿ ಶರ್ಮಾ, ಇನಿಯಾ, ರವಿ ಕಿಶನ್
ನಿರ್ದೇಶನ: ಪ್ರಮೋದ್ ಚಕ್ರವರ್ತಿ
ನಿರ್ಮಾಣ: ಮಹಾದೇವಪ್ಪ ಹಾಲಗತ್ತಿ

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News