'ಅನ್ಯಾಯ': ಸಿಎಎ ಪ್ರತಿಭಟನಕಾರರ ಫೋಟೊಗಳಿರುವ ಬ್ಯಾನರ್ ಹಾಕಿದ ಆದಿತ್ಯನಾಥ್ ಸರಕಾರಕ್ಕೆ ಹೈಕೋರ್ಟ್ ತರಾಟೆ
ಲಕ್ನೊ, ಮಾ. 8: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ಸಂದರ್ಭ ಸಂಭವಿಸಿದ ಹಿಂಸಾಚಾರದ ಆರೋಪಿಗಳ ಭಾವಚಿತ್ರ ಹಾಗೂ ವಿವರನ್ನು ಒಳಗೊಂಡ ಹೋರ್ಡಿಂಗ್ ಅನ್ನು ಉತ್ತರಪ್ರದೇಶ ಸರಕಾರ ಅಳವಡಿಸಿದ ಪ್ರಕರಣವನ್ನು ರವಿವಾರ ವಿಚಾರಣೆಗೆ ಕೈಗೆತ್ತಿಕೊಂಡಿರುವ ಅಲಹಾಬಾದ್ ಉಚ್ಚ ನ್ಯಾಯಾಲಯ, ಇಂತಹ ನಡೆ ನಾಗರಿಕರ ಸ್ವಾತಂತ್ರ್ಯ, ಗೌರವ ಹಾಗೂ ಖಾಸಗಿತನದ ಮೇಲಿನ ಅತಿಕ್ರಮಣ ಆಗಬಹುದು ಎಂದು ಹೇಳಿದೆ.
ರವಿವಾರ ರಜೆ ಇದ್ದರೂ ನ್ಯಾಯಾಲಯ ಈ ಪ್ರಕರಣವನ್ನು ಸ್ವಯಂತಪ್ರೇರಿತವಾಗಿ ವಿಚಾರಣೆಗೆ ಕೈಗೆತ್ತಿಕೊಂಡಿತು. ಅಪರಾಹ್ನ 3 ಗಂಟೆಯ ನಂತರ 1 ಗಂಟೆಗಳ ಕಾಲ ನಡೆದ ವಿಚಾರಣೆ ಸಂದರ್ಭ ನ್ಯಾಯಾಲಯ ಹಲವು ಪ್ರಶ್ನೆಗಳನ್ನು ಕೇಳಿತು. ಅದಕ್ಕೆ ಸರಕಾರದ ಪ್ರತಿನಿಧಿಗಳು ಉತ್ತರಿಸಿದರು. ಅನಂತರ ನ್ಯಾಯಾಲಯ ತೀರ್ಪನ್ನು ಸೋಮವಾರ ಅಪರಾಹ್ನಕ್ಕೆ ಮುಂದೂಡಿದೆ.
ಪೂರ್ವಾಹ್ನ 10 ಗಂಟೆಗೆ ಆರಂಭವಾದ ವಿಚಾರಣೆಯಲ್ಲಿ ಮುಖ್ಯ ನ್ಯಾಯಮೂರ್ತಿ ಗೋವಿಂದ ಮಾಥುರ್, ಸರಕಾರ ನಾಗರಿಕರ ಸ್ವಾತಂತ್ರ್ಯ ಹಾಗೂ ಖಾಸಗಿತನವನ್ನು ಅತಿಕ್ರಮಿಸುತ್ತಿಲ್ಲವೇ ಎಂದು ಪ್ರಶ್ನಿಸಿತು. ಅಲ್ಲದೆ, ಹಾಗೆ ನಡೆದಿದ್ದರೆ, ಮುಂದಿನ ವಿಚಾರಣೆಗೆ ಮುನ್ನ ಅದನ್ನು ಸರಿಪಡಿಸುವಂತೆ ಸೂಚಿಸಿತು.
ಉತ್ತರಪ್ರದೇಶ ಸರಕಾರದ ಪರವಾಗಿ ಹಾಜರಾಗಿದ್ದ ಅಡ್ವೊಕೇಟ್ ಜನರಲ್ ಸರಕಾರದ ನಿಲುವನ್ನು ನ್ಯಾಯಾಲಯದ ಮುಂದಿರಿಸಿದರು. ಅವರ ವಾದವನ್ನು ಆಲಿಸಿದ ನ್ಯಾಯಾಲಯ ಆದೇಶವನ್ನು ಕಾದಿರಿಸಿದ್ದು, ಸೋಮವಾರ 2 ಗಂಟೆಗೆ ಪ್ರಕಟಿಸಲಿದೆ ಎಂದು ರಾಜ್ಯದ ಹೆಚ್ಚುವರಿ ಅಡ್ವೊಕೇಟ್ ಜನರಲ್ ನೀರಜ್ ತ್ರಿಪಾಠಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಲಕ್ನೊದ ಹೃದಯಭಾಗಗಳಲ್ಲಿ ಆರೋಪಿಗಳ ಭಾವಚಿತ್ರ ಹಾಗೂ ವಿಳಾಸಗಳನ್ನು ಹೊಂದಿರುವ ಹೋರ್ಡಿಂಗ್‌ಗಳನ್ನು ಅಳವಡಿಸಲಾಗಿತ್ತು. ಲಕ್ನೊದಲ್ಲಿ ನಡೆದ ಪ್ರತಿಭಟನೆ ಸಂದರ್ಭ ನಾಶವಾದ ಸೊತ್ತಿಗೆ ಹಣ ಪಾವತಿಸುವಂತೆ ಈ ಹೋರ್ಡಿಂಗ್‌ನಲ್ಲಿ ಸೂಚಿಸಲಾಗಿತ್ತು. ಒಂದು ವೇಳೆ ಹಣ ಪಾವತಿಸದೇ ಇದ್ದರೆ ಅವರ ಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಎಚ್ಚರಿಸಲಾಗಿತ್ತು. ಇದಕ್ಕಿಂತ ಮೊದಲು ಉತ್ತರಪ್ರದೇಶ ಸರಕಾರ ಈ ಆರೋಪಿಗಳಿಗೆ ವೈಯುಕ್ತಿಕವಾಗಿ ಸೊತ್ತು ಮುಟ್ಟುಗೋಲು ಹಾಕಿಕೊಳ್ಳುವ ನೋಟಿಸು ಕೂಡ ಜಾರಿ ಮಾಡಿತ್ತು.