ಸಿಎಎ ಬೆಂಬಲಿಗರ ಕೃತ್ಯದಿಂದ ದಿಲ್ಲಿ ಹಿಂಸಾಚಾರ ಆರಂಭ: ದಿಲ್ಲಿ ಪೊಲೀಸ್ ಆಂತರಿಕ ವರದಿ
ಹೊಸದಿಲ್ಲಿ: ದಿಲ್ಲಿ ಹಿಂಸಾಚಾರದ ಸಂದರ್ಭ ದಿಲ್ಲಿ ಪೊಲೀಸರು ಮೂಕಪ್ರೇಕ್ಷಕರಾಗಿದ್ದರು ಎನ್ನುವ ಆರೋಪಗಳ ನಡುವೆ ಇದೀಗ ದಿಲ್ಲಿ ಪೊಲೀಸ್ ಇಲಾಖೆಯು ಹಿಂಸಾಚಾರದ ಕಾಲಾನುಕ್ರಮದ ಬಗ್ಗೆ ವರದಿಯೊಂದನ್ನು ತಯಾರಿಸಿದೆ. ದಿಲ್ಲಿ ಹಿಂಸಾಚಾರವನ್ನು ಆರಂಭಿಸಿದ್ದು ಸಿಎಎ ಬೆಂಬಲಿಗರು ಎನ್ನುವುದನ್ನು ವರದಿಯು ಬೆಟ್ಟು ಮಾಡಿದೆ.
ಬಿಜೆಪಿ ನಾಯಕ ಕಪಿಲ್ ಮಿಶ್ರಾ ಕಾರ್ಯಕರ್ತರಿಗೆ ಸಂದೇಶಗಳನ್ನು ಕಳುಹಿಸಿದ್ದರೆ, ಭೀಮ್ ಆರ್ಮಿಯ ನಾಯಕ ಚಂದ್ರಶೇಖರ್ ಆಝಾದ್ ಅಲ್ಪಸಂಖ್ಯಾತ ಬಾಹುಳ್ಯದ ಸ್ಥಳಗಳಲ್ಲಿ ಜನರನ್ನು ಸೇರಿಸಿದ್ದರು ಎಂದು ಪೊಲೀಸ್ ಆಂತರಿಕ ವರದಿಯು ತಿಳಿಸಿದೆ ಎಂದು IANS ವರದಿ ಮಾಡಿದೆ.
ಭೀಮ್ ಆರ್ಮಿಯ ವಾಹನದ ಮೇಲೆ ದಾಳಿ ನಡೆಸಿ ಹಿಂಸಾಚಾರ ಸೃಷ್ಟಿಗೆ ಕಾರಣವಾದದ್ದು ಸಿಎಎ ಬೆಂಬಲಿಗರು ಎಂದು ವರದಿ ತಿಳಿಸಿದ್ದು, ಆನಂತರ ಭೀಮ್ ಆರ್ಮಿಯ ಕಾರ್ಯಕರ್ತರು ಸ್ಥಳೀಯರನ್ನು ಒಟ್ಟುಗೂಡಿಸಿದರು ಎಂದು ವಿವರಿಸಲಾಗಿದೆ.
"ಫೆಬ್ರವರಿ 22ರಂದು ರಾತ್ರಿ 10:30ರ ವೇಳೆಗೆ ಸಿಎಎ ವಿರುದ್ಧ 500ರಷ್ಟು ಮಹಿಳೆಯರು ಜಾಫ್ರಾಬಾದ್ ಮೆಟ್ರೋ ಸ್ಟೇಶನ್ ಬಳಿ ಪ್ರತಿಭಟನೆ ಆರಂಭಿಸಿದರು. ಇದೇ ಸಂದರ್ಭ ಸುಮಾರು 2000 ಸ್ಥಳೀಯ ಯುವಕರು ಪ್ರತಿಭಟನೆಗೆ ಸೇರಿದರು. ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಮೌಲಾನಾ ಶಮೀಮ್ ಮತ್ತು ಮೌಲಾನ ದಾವೂದ್ ರ ಸಹಾಯ ಕೇಳಿದರು. ಫೆಬ್ರವರಿ 23ರಂದು ಕಪಿಲ್ ಮಿಶ್ರಾ ಮತ್ತು ದೀಪಕ್ ಸಿಂಗ್ ಸಾಮಾಜಿಕ ಜಾಲತಾಣ ಬಳಸಿ ತಮ್ಮ ಕಾರ್ಯಕರ್ತರಿಗೆ ಸಂದೇಶಗಳನ್ನು ಕಳುಹಿಸಿದರು. ಮೌಜ್ ಪುರ್ ಚೌಕ್ ನಲ್ಲಿ ಸಿಎಎಯನ್ನು ಬೆಂಬಲಿಸಿ ಹಾಜರಾಗುವಂತೆ ಮತ್ತು ಜಾಫ್ರಾಬಾದ್ ನ ಪ್ರತಿಭಟನೆಯನ್ನು ವಿರೋಧಿಸುವಂತೆ ಅವರಿಗೆ ಕರೆ ನೀಡಲಾಗಿತ್ತು" ಎಂದು ವರದಿ ತಿಳಿಸುತ್ತದೆ.
ಮಿಶ್ರಾ ಮತ್ತು ದೀಪಕ್ ಸಿಂಗ್ 2:30ರ ವೇಳೆ ಆಗಮಿಸಿದ್ದರು. ಅದೇ ದಿನ ಭೀಮ್ ಆರ್ಮಿಯ ಆಝಾದ್ ಭಾರತ್ ಬಂದ್ ಗೆ ಕರೆ ನೀಡಿದ್ದರು. ಅದೇ ದಿನ 5 ಗಂಟೆಗೆ ಹಿಂಸಾಚಾರ ಆರಂಭವಾಗಿತ್ತು. ಭೀಮ್ ಆರ್ಮಿಯ ಬೆಂಬಲಿಗರು ಪ್ರಯಾಣಿಸುತ್ತಿದ್ದ ವಾಹನವೊಂದರ ಮೇಲೆ ಮೌಜ್ ಪುರ್ ಚೌಕ್ ಬಳಿ ಸಿಎಎ ಬೆಂಬಲಿಗರು ದಾಳಿ ನಡೆಸಿದರು. ನಂತರ ಭೀಮ್ ಆರ್ಮಿ ನಾಯಕರು ಕರ್ದಾಂಪುರಿ ಮತ್ತು ಕಬೀರ್ ನಗರ್ ನಲ್ಲಿ ಜನರನ್ನು ಒಟ್ಟುಗೂಡಿಸಿದರು. ಇದೇ ಸಂದರ್ಭ ಎರಡೂ ಕಡೆಯಿಂದ ಕಲ್ಲುತೂರಾಟ ನಡೆಯಿತು. ರಾತ್ರಿ 8 ಗಂಟೆಯ ಸುಮಾರಿಗೆ ಕರ್ದಾಂಪುರಿ ಹಿಂಸಾಚಾರದ ಕೇಂದ್ರಸ್ಥಾನವಾಯಿತು. ಪೊಲೀಸ್ ಅಧಿಕಾರಿಗಳಾದ ಅಲೋಕ್ ಕುಮಾರ್ ಮತ್ತು ವೇದ್ ಪ್ರಕಾಶ್ ಸೂರ್ಯ ಸ್ಥಳಕ್ಕೆ ದೌಡಾಯಿಸಿದರು.
ಫೆಬ್ರವರಿ 24ರಂದು ಬೆಳಗ್ಗೆ 10 ಗಂಟೆಗೆ ಗಲಭೆ ಆರಂಭವಾಯಿತು. ಕರ್ದಾಂಪುರಿ, ಚಾಂದ್ ಭಾಗ್, ಭಜನ್ಪುರ, ಯಮುನ ವಿಹಾರ್, ಬ್ರಿಜ್ ಪುರಿಗಳಲ್ಲಿ ಎರಡೂ ಕಡೆಗಳಿಂದ ಜನರು ಹಿಂಸಾಚಾರಕ್ಕಿಳಿದರು. ಕರ್ದಾಂಪುರಿ ಮತ್ತು ಶೇರ್ಪುರ್ ಚೌಕ್ ನಲ್ಲಿ ಭಾರೀ ಕಲ್ಲುತೂರಾಟ ಆರಂಭವಾಯಿತು. ಡಿಸಿಪಿ ಅಮಿತ್ ಶರ್ಮಾ ಮತ್ತು ಎಸಿಪಿ ಅನುಜ್ ಕುಮಾರ್ ರಿಗೆ ಗಾಯಗಳಾದವು. ತಲೆಗಾದ ಗಂಭೀರ ಗಾಯದಿಂದ ಕಾನ್ ಸ್ಟೇಬಲ್ ರತನ್ ಲಾಲ್ ಕೊನೆಯುಸಿರೆಳೆದರು ಎಂದು ವರದಿ ತಿಳಿಸಿದೆ.
ಆದರೆ ಈ ಬಗ್ಗೆ ದಿಲ್ಲಿ ಪೊಲೀಸ್ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಂ.ಎಸ್. ರಾಂಧವ ಅವರಲ್ಲಿ ಪ್ರಶ್ನಿಸಿದಾಗ ತನಗೆ ಈ ಬಗ್ಗೆ ಮಾಹಿತಿಯಿಲ್ಲ ಎಂದಿದ್ದಾರೆ.