ಲಂಡನ್ ಸಂಸತ್ ಸಮೀಪ ಚೂರಿ ಝಳಪಿಸಿದ ಆಗಂತುಕ ಪೊಲೀಸ್ ಗುಂಡಿಗೆ ಬಲಿ

Update: 2020-03-09 17:23 GMT

 ಲಂಡನ್,ಮಾ.9: ನಗರದ ಹೃದಯಭಾಗದಲ್ಲಿರುವ ಬ್ರಿಟನ್ ಸಂಸತ್ ಕಟ್ಟಡದ ಸಮೀಪವೇ ಎರಡು ಚಾಕುಗಳನ್ನು ಝಳಪಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಬ್ರಿಟಿಶ್ ಪೊಲೀಸರು ಗುಂಡಿಕ್ಕಿ ಹತ್ಯೆಗೈದಿದ್ದಾರೆಂದು ಭದ್ರತಾ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಆದರೆ ಇದು ಭಯೋತ್ಪಾದಕ ಕೃತ್ಯವಲ್ಲವೆಂದು ಅವರು ಸ್ಪಷ್ಟಪಡಿಸಿದ್ದಾರೆ.

ರವಿವಾರ ಸ್ಥಳೀಯ ಕಾಲಮಾನ ರಾತ್ರಿ 11:25ರ ವೇಳೆಗೆ ವ್ಯಕ್ತಿಯೊಬ್ಬನ ಸಂಶಯಾಸ್ಪದವಾಗಿ ಅಲೆದಾಡುತ್ತಿದ್ದುದನ್ನು ಸ್ಥಳದಲ್ಲಿದ್ದ ಗಸ್ತು ತಿರುಗುತ್ತಿದ್ದ ಪೊಲೀಸರು ಗಮನಿಸಿದ್ದರು.

ಆಗ ಪೊಲೀಸ್ ಅಧಿಕಾರಿಗಳು ಆತನನ್ನು ಪ್ರಶ್ನಿಸಿದಾಗ ಆತ ಎರಡು ಚಾಕುಗಳನ್ನು ಅವರೆಡೆಗೆ ಪ್ರದರ್ಶಿಸಿದ, ಕೂಡಲೇ ಪೊಲೀಸರು ಆತನೆಡೆಗೆ ಗುಂಡು ಹಾರಿಸಿದರೆಂದು ಅಧಿಕೃತ ಮೂಲಗಳು ತಿಳಿಸಿವೆ.

ಕೂಡಲೇ ಆ್ಯಂಬುಲೆನ್ಸ್ ಸ್ಥಳಕ್ಕೆ ಧಾವಿಸಿತ್ತಾದರೂ, ಆತ ಆಗಲೇ ಮೃತಪಟ್ಟಿದ್ದಾಗಿ ಪೊಲೀಸರು ಹೇಳಿದ್ದಾರೆ. ಆದರೆ ಇದು ಭಯೋತ್ಪಾದನೆಗೆ ಸಂಬಂಧಿಸಿದ ಕೃತ್ಯವಲ್ಲವೆಂದು ಅವರು ಹೇಳಿದ್ದಾರೆ.

ಸರಕಾರಿ ಇಲಾಖೆಗಳ ಕಾರ್ಯಾಲಯಗಳಿರುವ ಪ್ರದೇಶವಾದ ಗ್ರೇಟ್ ಸ್ಕಾಟ್‌ಲ್ಯಾಂಡ್ ಯಾರ್ಡ್ ಸಮೀಪವೇ ಘಟನೆ ಸಂಭವಿಸಿದೆಯೆಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News