×
Ad

ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು: ಸರಕಾರ ರಚನೆಗೆ ಬಿಜೆಪಿಯಿಂದ ಹಕ್ಕು ಮಂಡನೆ ಸಾಧ್ಯತೆ

Update: 2020-03-10 21:16 IST

ಭೋಪಾಲ,ಮಾ.10: ಮಧ್ಯಪ್ರದೇಶದ ರಾಜಕೀಯ ಬಿಕ್ಕಟ್ಟು ತೀವ್ರಗೊಂಡಿದ್ದು,20 ಕಾಂಗ್ರೆಸ್ ಶಾಸಕರು ಮಂಗಳವಾರ ರಾಜ್ಯಪಾಲ ಲಾಲಾಜಿ ಟಂಡನ್ ಅವರಿಗೆ ತಮ್ಮ ರಾಜೀನಾಮೆಗಳನ್ನು ಮೇಲ್ ಮಾಡಿರುವ ಹಿನ್ನೆಲೆಯಲ್ಲಿ ರಾಜಕೀಯ ಬೃಹನ್ನಾಟಕದ ಅಂತಿಮ ದೃಶ್ಯಗಳಿಗಾಗಿ ಟಂಡನ್ ಅವರು ತನ್ನ ರಜೆಯನ್ನು ಮೊಟಕುಗೊಳಿಸಿ ಭೋಪಾಲಕ್ಕೆ ಮರಳಿದ್ದಾರೆ.

ಹಿರಿಯ ಕಾಂಗ್ರೆಸ್ ನಾಯಕ ಬಿಸಾಹುಲಾಲ ಸಿಂಗ್ ಅವರೂ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಕಳೆದ ವಾರ ನಾಪತ್ತೆಯಾಗಿದ್ದ ಏಳು ಶಾಸಕರ ಪೈಕಿ ಸಿಂಗ್ ಓರ್ವರಾಗಿದ್ದು, ಇಬ್ಬರು ಸಚಿವರು ರವಿವಾರ ಅವರನ್ನು ವಾಪಸ್ ಕರೆತಂದಿದ್ದರು. ಮುಖ್ಯಮಂತ್ರಿ ಕಮಲನಾಥ್ ಅವರನ್ನು ಭೇಟಿಯಾದ ಬಳಿಕ ಅವರ ನಾಯಕತ್ವದಲ್ಲಿ ವಿಶ್ವಾಸವನ್ನು ವ್ಯಕ್ತಪಡಿಸಿದ್ದ ಸಿಂಗ್,ತಾನು ಕಾಂಗ್ರೆಸ್‌ ನಲ್ಲಿಯೇ ಇದ್ದೇನೆ ಮತ್ತು ಕಾಂಗ್ರೆಸ್‌ನಲ್ಲಿಯೇ ಮುಂದುವರಿಯುತ್ತೇನೆ ಎಂದು ಹೇಳಿದ್ದರು.

20 ಶಾಸಕರ ರಾಜೀನಾಮೆಯಿಂದ ಸದನದಲ್ಲಿ ಕಾಂಗ್ರೆಸ್ ಬಲ 94ಕ್ಕೆ ಕುಸಿದಿದ್ದು, 107 ಸ್ಥಾನಗಳನ್ನು ಹೊಂದಿರುವ ಬಿಜೆಪಿಗೆ ಮೇಲುಗೈ ಒದಗಿಸಿದೆ. ಕಮಲನಾಥ್ ಸರಕಾರವು ಪತನಗೊಂಡರೆ ತನ್ನ ಪಕ್ಷವು ಸರಕಾರ ರಚನೆಗೆ ಹಕ್ಕು ಮಂಡಿಸಲಿದೆ ಎಂದು ಬಿಜೆಪಿ ನಾಯಕ ನರೋತ್ತಮ ಮಿಶ್ರಾ ತಿಳಿಸಿದರು. ಶಿವರಾಜ ಸಿಂಗ್ ಚೌಹಾಣ್ ಅವರು ಬಿಜೆಪಿಯ ಮುಖ್ಯಮಂತ್ರಿ ಹುದ್ದೆ ಅಭ್ಯರ್ಥಿಯಾಗಲಿದ್ದಾರೆ ಎನ್ನಲಾಗಿದೆ.

ನಾಲ್ವರು ಪಕ್ಷೇತರರು, ಇಬ್ಬರು ಬಿಎಸ್‌ಪಿ ಮತ್ತು ಓರ್ವ ಎಸ್‌ಪಿ ಶಾಸಕರು ಕಮಲನಾಥ್ ಸರಕಾರವನ್ನು ಬೆಂಬಲಿಸಿದ್ದಾರೆ. ಕಳೆದ ವಾರದ ‘ಕುದುರೆ ವ್ಯಾಪಾರ’ದ ವಿವಾದದ ವೇಳೆ ಈ ಪೈಕಿ ಆರು ಶಾಸಕರು ಮಾಯವಾಗಿದ್ದರಾದರೂ ಮರಳಿ ಪ್ರತ್ಯಕ್ಷಗೊಂಡ ಬಳಿಕ ಕಮಲನಾಥ ಅವರಿಗೆ ಬೆಂಬಲವನ್ನು ಪುನರುಚ್ಚರಿಸಿದ್ದರು.

ಪ್ರದೇಶ ಕಾಂಗ್ರೆಸ್ ವಕ್ತಾರ ಮತ್ತು ಸಿಂದಿಯಾ ಅನುಯಾಯಿ ಪಂಕಜ ಚತುರ್ವೇದಿ ಅವರೂ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಸಿಂದಿಯಾಗೆ ನಿಷ್ಠ 17 ಮತ್ತು ಕಳೆದ ವಾರದಿಂದ ನಾಪತ್ತೆಯಾಗಿದ್ದ ಇಬ್ಬರು ಶಾಸಕರು ತಮ್ಮ ರಾಜೀನಾಮೆ ಪತ್ರಗಳನ್ನು ತೋರಿಸುತ್ತಿರುವ ಚಿತ್ರ ಮಂಗಳವಾರ ಅಪರಾಹ್ನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಸಿಂದಿಯಾರ ಬಂಡಾಯದ ಬಳಿಕ ಕಾಂಗ್ರೆಸ್ ನಾಯಕರು ಅವರನ್ನು ‘ದೇಶದ್ರೋಹಿ ’ಎಂದು ಕರೆಯಲು ಆರಂಭಿಸಿದ್ದಾರೆ.

ಮಾಜಿ ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅರುಣ ಯಾದವ ಅವರು ಸಿಂದಿಯಾರನ್ನು ‘ಜಯಚಂದ್’ ಎಂದು ಬಣ್ಣಿಸಿದ್ದರೆ,ಕಮಲನಾಥ ಸರಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿರುವ ಜಿತು ಪಟ್ವಾರಿ ಅವರು,ಸಿಂದಿಯಾರ ಪೂರ್ವಜರು 1857ರ ಸ್ವಾತಂತ್ರ ಸಮರದಲ್ಲಿ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರಿಗೆ ಕೈಕೊಟ್ಟಿದ್ದರು ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News