ಜೆ.ಪಿ.ನಡ್ಡಾ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡ ಜ್ಯೋತಿರಾದಿತ್ಯ ಸಿಂದಿಯಾ

Update: 2020-03-11 16:43 GMT

ಹೊಸದಿಲ್ಲಿ,ಮಾ.10: 21 ಶಾಸಕರ ರಾಜೀನಾಮೆಯೊಂದಿಗೆ ಮಧ್ಯಪ್ರದೇಶ ಸರಕಾರ ಪತನದ ಅಂಚಿಗೆ ಸರಿದಿರುವಂತೆಯೇ, ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕ ಹಾಗೂ ರಾಹುಲ್‌ ಗಾಂಧಿ ನಿಕಟವರ್ತಿ ಜ್ಯೋತಿರಾದಿತ್ಯ ಸಿಂಧಿಯಾ ಬುಧವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ಇದರೊಂದಿಗೆ ಜ್ಯೋತಿರಾದಿತ್ಯ ಅವರು ಕಾಂಗ್ರೆಸ್ ಪಕ್ಷದೊಂದಿಗಿನ ತನ್ನ 18 ವರ್ಷಗಳ ಬಾಂಧವ್ಯವನ್ನು ಕೊನೆಗೊಳಿಸಿದ್ದಾರೆ. 21 ಬೆಂಬಲಿಗ ಶಾಸಕರೊಂದಿಗೆ ಜ್ಯೋತಿರಾದಿತ್ಯ ಕಾಂಗ್ರೆಸ್ ತ್ಯಜಿಸಿದ್ದರಿಂದಾಗಿ, ಕೇವಲ 15 ತಿಂಗಳುಗಳ ಹಿಂದೆ ಅಧಿಕಾರಕ್ಕೇರಿದ್ದ ಮಧ್ಯಪ್ರದೇಶದ ಕಮಲ್‌ನಾಥ್ ಸರಕಾರವು ಬಹುಮತ ಕಳೆದುಕೊಂಡಿದ್ದು, ಪತನದ ಭೀತಿಯನ್ನು ಎದುರಿಸುತ್ತಿದೆ.

 ಮಂಗಳವಾರ ಜ್ಯೋತಿರಾದಿತ್ಯ ಅವರು ಅಮಿತ್‌ ಶಾ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದರು. ಆನಂತರ ಅವರಿಬ್ಬರೂ ನರೇಂದ್ರ ಮೋದಿಯವರ ನಿವಾಸಕ್ಕೆ ತೆರಳಿ ದ್ದರು. ಮಾತುಕತೆಯ ಆನಂತರ ತಕ್ಷಣವೇ ಜ್ಯೋತಿರಾದಿತ್ಯ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರಿಗೆ ಪತ್ರ ಬರೆದು ಪಕ್ಷ ತ್ಯಜಿಸುವ ನಿರ್ಧಾರವನ್ನು ಪ್ರಕಟಿಸಿದ್ದರು.

 ದಿಲ್ಲಿ ಹಿಂಸಾಚಾರದ ಬಗ್ಗೆ ಬಿಜೆಪಿಯನ್ನು ಕಟುವಾಗಿ ಟೀಕಿಸಿದ್ದ ಸಿಂಧಿಯಾ, ಇದೀಗ ಕಮಲ ಪಾಳಯಕ್ಕೆ ಜಿಗಿದಿರುವುದು ಈಗಾಗಲೇ ಪಕ್ಷದೊಳಗೆ ಹೊಗೆಯಾಡುತ್ತಿರುವ ಅಸಮಾಧಾನದಿಂದ ಕಂಗಾಲಾಗಿರುವ ಕಾಂಗ್ರೆಸ್‌ಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಈ ಮಧ್ಯೆ ಸಿಂಧ್ಯಾ ಅವರಿಗೆ ಬೆಂಬಲ ಸೂಚಿಸಿ ರಾಜೀನಾಮೆ ನೀಡಿರುವ 21 ಮಂದಿ ಕಾಂಗ್ರೆಸ್ ಶಾಸಕರು ಬೆಂಗಳೂರಿನಲ್ಲಿ ಬೀಡುಬಿಟ್ಟಿದ್ದಾರೆ.

 ಒಂದು ಸಮಯದಲ್ಲಿ ಗಾಂಧಿ ಕುಟುಂಬದ ಅತ್ಯಂತ ಅಪ್ತರಲ್ಲೊಬ್ಬರೆನಿಸಿದ್ದ 49 ವರ್ಷ ವಯಸ್ಸಿನ ಸಿಂಧಿಯಾ ಅವರು 2018ರ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಿದಾಗ ಸಿಎಂ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿದ್ದರು. ಆದಾಗ್ಯೂ ಮಧ್ಯಪ್ರದೇಶ ಸಿಎಂ ಹುದ್ದೆಯು ಕಾಂಗ್ರೆಸ್‌ನ ಹಿರಿಯ ನಾಯಕ ಕಮಲ್‌ನಾಥ್ ಅವರ ಪಾಲಾಗಿತ್ತು. ಕಳೆದ ಆಗಸ್ಟ್‌ನಲ್ಲಿ ಕೇಂದ್ರದ ಎನ್‌ಡಿಎ ಸರಕಾರವು, ಜಮ್ಮುಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿರುವುದನ್ನು ಸಿಂಧಿಯಾ ಸ್ವಾಗತಿಸಿದರು.

ತಂದೆಯ ಜನ್ಮದಿನದಂದೇ ಕಾಂಗ್ರೆಸ್ ತೊರೆದ ಸಿಂಧಿಯಾ

ಹಿರಿಯ ಕಾಂಗ್ರೆಸ್ ನಾಯಕರೂ ಆಗಿದ್ದ ತನ್ನ ತಂದೆ ದಿವಂಗತ ಮಾಧವರಾವ್ ಸಿಂಧ್ಯಾ ಅವರ ಹುಟ್ಟುಹಬ್ಬದ ದಿನವಾದ ಮಾರ್ಚ್ 10ರಂದೇ ಜ್ಯೋತಿರಾದಿತ್ಯ ಕೈಪಕ್ಷವನ್ನು ತೊರೆಯುವ ನಿರ್ಧಾರವನ್ನು ಪ್ರಕಟಿಸಿದ್ದರು. ಜ್ಚೋತಿರಾದಿತ್ಯ ಸಿಂಧ್ಯಾ ಅವರ ಅಜ್ಜಿ ವಿಜಯರಾಜೆ ಸಿಂಧ್ಯಾ ಅವರು ಬಿಜೆಪಿಯ ಸ್ಥಾಪಕ ಸದಸ್ಯರಲ್ಲೊಬ್ಬರಾಗಿದ್ದರು. ಅವರ ಸೋದರಸಂಬಂಧಿಗಳಾದ ವಸುಂಧರಾ ರಾಜೆ ಹಾಗೂ ಯಶೋಧರ ರಾಜೆ ಅವರು ಕೂಡಾ ಬಿಜೆಪಿ ಮುಖಂಡರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News