ದಿಲ್ಲಿ ಹಿಂಸಾಚಾರವನ್ನು ಶೀಘ್ರ ತಡೆದ ಪೊಲೀಸರು ಅಭಿನಂದನಾರ್ಹರು: ಸಂಸತ್ ನಲ್ಲಿ ಅಮಿತ್ ಶಾ

Update: 2020-03-11 17:01 GMT

ಹೊಸದಿಲ್ಲಿ: ದಿಲ್ಲಿ ಹಿಂಸಾಚಾರವನ್ನು ನಗರದ 4 ಶೇ. ವ್ಯಾಪ್ತಿಯೊಳಗೆ ನಿಯಂತ್ರಿಸುವ ಮೂಲಕ ದಿಲ್ಲಿ ಪೊಲೀಸರು ಅಭಿನಂದನಾರ್ಹ ಕೆಲಸ ಮಾಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಫೆಬ್ರವರಿ 24ರಂದು ಮಧ್ಯಾಹ್ನ 2 ಗಂಟೆಗೆ ಗಲಭೆಯ ಮೊದಲ ವರದಿ ಬಂದಿದ್ದು, ಫೆಬ್ರವರಿ 25ರಂದು ರಾತ್ರಿ 11 ಗಂಟೆಗೆ ಕೊನೆಯ ವರದಿ ಬಂದಿದೆ ಎಂದು ಅಮಿತ್ ಶಾ ಲೋಕಸಭೆಗೆ ಮಾಹಿತಿ ನೀಡಿದರು.

"ಫೆಬ್ರವರಿ 25ರ ನಂತರ ಯಾವುದೇ ಹಿಂಸಾಚಾರ ನಡೆದಿಲ್ಲ. ಹಿಂಸಾಚಾರವನ್ನು ರಾಜಕೀಯಗೊಳಿಸಲು ಪ್ರಯತ್ನಗಳು ನಡೆಯುತ್ತಿವೆ" ಎಂದವರು ಹೇಳಿದರು.

700ಕ್ಕೂ ಅಧಿಕ ಎಫ್  ಐಆರ್ ಗಳು ದಾಖಲಾಗಿವೆ. 2600ಕ್ಕೂ ಅಧಿಕ ಜನರನ್ನು ವಶಕ್ಕೆ ಪಡೆಯಲಾಗಿದೆ ಅಥವಾ ಬಂಧಿಸಲಾಗಿದೆ. ದಿಲ್ಲಿ ಪೊಲೀಸರಿಂದ ಸ್ವೀಕರಿಸಲ್ಪಟ್ಟ 1000ಕ್ಕೂ ಅಧಿಕ ವಿಡಿಯೋಗಳನ್ನು 'ಫೇಸ್ ಐಡೆಂಟಿಫಿಕೇಶನ್' ಮೂಲಕ ಆರೋಪಿಗಳ ಪತ್ತೆಗೆ ಬಳಸಲಾಗುತ್ತಿದೆ ಎಂದವರು ಮಾಹಿತಿ ನೀಡಿದರು.

ಅಮಾಯಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ನಾವು ಭರವಸೆ ನೀಡುತ್ತಿದ್ದೇವೆ. ಎಲ್ಲಾ ಸಾಕ್ಷಿಗಳಿದ್ದರೆ ಮಾತ್ರ ಬಂಧಿಸಲಾಗುವುದು. ನಾನು ಹಿಂದೂ-ಮುಸ್ಲಿಂ ಎನ್ನುವುದರಲ್ಲಿ ನಂಬಿಕೆ ಇರಿಸಿಲ್ಲ. ದಿಲ್ಲಿ ಹಿಂಸಾಚಾರದಲ್ಲಿ 52 ಭಾರತೀಯರು ಮೃತಪಟ್ಟಿದ್ದಾರೆ. ಧರ್ಮದ ಆಧಾರದಲ್ಲಿ ನಾವು ಸಂಸತ್ತನ್ನೂ ಒಡೆಯಬಹುದೇ? ಎಂದವರು ಪ್ರಶ್ನಿಸಿದರು.

ಭಾರತದಲ್ಲಿ ಕೋಮು ಹಿಂಸಾಚಾರದಲ್ಲಿ ಮೃತಪಟ್ಟವರಲ್ಲಿ ಶೇ. 76 ಜನರು ಕಾಂಗ್ರೆಸ್ ಆಡಳಿತದ ಸಂದರ್ಭ ಸಾವನ್ನಪ್ಪಿದ್ದಾರೆ. ಶಾಂತಿ ಕಾಪಾಡುವಂತೆ ಗೃಹ ಸಚಿವರು ಮನವಿ ಮಾಡಿಲ್ಲ ಎಂದು ಜನರು ಹೇಳುತ್ತಾರೆ. ಒಂದು ವೇಳೆ ಹಾಗೆ ಹೇಳದಿದ್ದರೂ ದೊಡ್ಡ ಮರ ಬಿದ್ದಾಗ ಭೂಮಿ ಕಂಪಿಸುತ್ತದೆ ಎಂದು ಹೇಳಿಲ್ಲ. 3000 ಸಿಕ್ಖ್ ಸಹೋದರು, ಸಹೋದರಿಯರನ್ನು ಜೀವಂತ ಸುಟ್ಟು ಕೊಂದು ಹಾಕಿದಾಗ ದೊಡ್ಡ ಮರ ಬೀಳುವಾಗ ಭೂಮಿ ಕಂಪಿಸುತ್ತದೆ ಎಂದು ನೀವು ಹೇಳಿದಿರಿ ಎಂದರು.

 ಮುಖ ಗುರುತಿಸುವ ಸಾಫ್ಟ್‌ವೇರ್ ಮೂಲಕ ಗುರುತಿಸಲಾದ 1,100 ಜನರನ್ನು ಬಂಧಿಸಲು ನಾವು 40 ತಂಡಗಳನ್ನು ರೂಪಿಸಿದ್ದೇವೆ. ಹಿಂಸಾಚಾರದಲ್ಲಿ ಪಾಲ್ಗೊಂಡ ಯಾರೊಬ್ಬರನ್ನೂ ನರೇಂದ್ರ ಮೋದಿ ಸರಕಾರ ಸುಮ್ಮನೆ ಬಿಡುವುದಿಲ್ಲ.

 ನಾವು ಪಿತೂರಿ ಪ್ರಕರಣವನ್ನು ಕೂಡ ದಾಖಲಿಸಿದ್ದೇವೆ. ಯಾಕೆಂದರೆ ಇಂತಹ ಗಲಭೆಗಳು ಪಿತೂರಿಯ ಹೊರತು ನಡೆಯಲಾರದು ಎಂದು ಅವರು ಹೇಳಿದರು. ನಾವು ಅಮಾಯಕರ ಮೇಲೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ 49 ಪ್ರಕರಣಗಳನ್ನು ದಾಖಲಿಸಲಾಗಿದೆ. 153 ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ಕೂಲಕಂಷ ತನಿಖೆ ಬಳಿಕವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಅಮಿತ್ ಶಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News